Site icon Vistara News

Modi at Bangalore : ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನ, ರಾತ್ರಿ ರಾಜಭವನದಲ್ಲಿ ವಾಸ್ತವ್ಯ, ಸೋಮವಾರ ಏರ್‌ಶೋಗೆ ಚಾಲನೆ

PM Modi at Bangalore

#image_title

ಬೆಂಗಳೂರು: ಏಷ್ಯಾದ ಅತಿ ದೊಡ್ಡ ಏರ್‌ ಶೋ ಆಗಿರುವ ಏರೋ ಇಂಡಿಯಾ-೨೦೨೩ ಉದ್ಘಾಟಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾತ್ರಿ ೮.೧೦ಕ್ಕೆ ಬೆಂಗಳೂರಿಗೆ ಆಗಮಿಸಿದರು (Modi at Bangalore). ಅವರು ಭಾನುವಾರ ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದು, ಬೆಳಗ್ಗೆ ಯಲಹಂಕ ವಾಯುನೆಲೆಯಲ್ಲಿ ಏರ್‌ಶೋವನ್ನು ಉದ್ಘಾಟಿಸಲಿದ್ದಾರೆ.

ಮೋದಿ ಅವರು ರಾತ್ರಿ ೭.೪೦ಕ್ಕೆ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಾಗಿತ್ತು. ಆದರೆ, ಸುಮಾರು ಅರ್ಧ ಗಂಟೆ ತಡವಾಗಿ ಆಗಮಿಸಿದರು. ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಸ್ವಾಗತಿಸಿದರು.

ಬಳಿಕ ಅವರು ಬಿಗಿ ಭದ್ರತೆಯ ನಡುವೆ ರಾಜಭವನಕ್ಕೆ ಸಾಗಿದರು. ಮೋದಿ ಸಾಗುವ ಹಾದಿಯಲ್ಲಿ ಬಿಗಿ ಪೋಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ರಸ್ತೆಯುದ್ದಕ್ಕೂ ಪ್ರತಿ 300 ಮೀಟರ್ ಗೆ ಒಬ್ಬ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಯಾವುದೇ ಸ್ಥಳದಲ್ಲೂ ವಾಹನ ನಿಲುಗಡೆ ಅವಕಾಶವಿರಲಿಲ್ಲ.

ಮೋದಿ ತೆರಳುವ ಮುನ್ನ ಮುಂಜಾಗ್ರತ ಕ್ರಮವಾಗಿ ಮೆಟ್ರೋ ಸಂಚಾರವನ್ನೂ ತಡೆಯಲಾಗಿತ್ತು. ಎಂ.ಜಿ. ರಸ್ತೆಯ ಟ್ರಿನಿಟಿ ವೃತ್ತದಲ್ಲಿ ಪೋಲೀಸರು ಕಟ್ಟೆಚ್ಚರ ವಹಿಸಿದ್ದರು.

ಏರ್‌ ಶೋ ಚಾಲನೆಗೆ ಕ್ಷಣ ಗಣನೆ

1996ರಿಂದ ಯಲಹಂಕಾ ಏರ್‌ಫೋರ್ಸ್‌ ಸ್ಟೇಶನ್‌ನಲ್ಲಿ ಏರ್‌ ಶೋ ನಡೆಯುತ್ತಿದೆ. ಈ ಬಾರಿಯ ೧೪ನೇ ಏರ್‌ ಶೋವನ್ನು ಸೋಮವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮ ಬೆಳಗ್ಗೆ 9.30ರಿಂದ 11.30 ರವರೆಗೆ ನಡೆಯಲಿದೆ. ಏರ್‌ ಶೋ ಫೆಬ್ರವರಿ ೧೩ರಿಂದ ೧೭ರವರೆಗೆ ನಡೆಯಲಿದೆ.

ಏರೋ ಇಂಡಿಯಾ ವೆಬ್‌ಸೈಟ್‌ ಪ್ರಕಾರ 731 ಪ್ರದರ್ಶಕರು (೬೩೩ ದೇಶೀಯ ಹಾಗೂ 98 ವಿದೇಶಿ) ಭಾಗವಹಿಸಲಿದ್ದಾರೆ. ಏರೋಸ್ಪೇಸ್‌, ಭಾರತೀಯ ವಾಯುಪಡೆ ಮತ್ತು ರಕ್ಷಣಾ ವಲಯದ ಟ್ರೇಡ್‌ ಎಕ್ಸ್‌ಪೊ ಕೂಡ ನಡೆಯಲಿದೆ. ಏರೋಸ್ಪೇಸ್‌ ವಲಯದ ಹೂಡಿಕೆದಾರರು, ಪರಿಣತರು ಕೂಡ ಪಾಲ್ಗೊಳ್ಳಲಿದ್ದಾರೆ.

ಬಾನಂಗಳದಲ್ಲಿ ಯುದ್ಧ ವಿಮಾನಗಳು, ಸೇನಾಪಡೆಯ ಹೆಲಿಕಾಪ್ಟರ್‌ಗಳ ರೋಚಕ ಹಾರಾಟವನ್ನು ವೀಕ್ಷಕರು ಆಸ್ವಾದಿಸಲು ಅವಕಾಶ ಸೃಷ್ಟಿಯಾಗಿದೆ. ಏರ್‌ ಶೋ ಸಂದರ್ಭ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ, ವಾಹನಗಳ ಪಾರ್ಕಿಂಗ್‌, ತ್ಯಾಜ್ಯ ನಿರ್ವಹಣೆ ಇತ್ಯಾದಿ ಸೌಕರ್ಯಗಳನ್ನು ಬಿಬಿಎಂಪಿ ಕಲ್ಪಿಸಲಿದೆ.

ಇದನ್ನೂ ಓದಿ : Aero India 2023: ಏರೋ ಇಂಡಿಯಾದಿಂದ ಕರ್ನಾಟಕದ ಯುವಕರಿಗೆ ಹೆಚ್ಚಿನ ಉದ್ಯೋಗ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

Exit mobile version