Site icon Vistara News

PM Narendra Modi: ಮೋದಿ ಸ್ವಾಗತಕ್ಕೆ ಬಾರದ ಸಿಎಂ; ಪಿಎಂ ಕಚೇರಿ ಸೂಚನೆ; ಮುಖ್ಯ ಕಾರ್ಯದರ್ಶಿಯಿಂದ ಸ್ವಾಗತ

pm modi in bangalore

ಬೆಂಗಳೂರು: ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಬೆಂಗಳೂರಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ (pm narendra modi) ಅವರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಈ ವೇಳೆ ರಾಜ್ಯ ಪೋಲಿಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಪೋಲಿಸ್ ಆಯುಕ್ತ ದಯಾನಂದ್ ಹಾಜರಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ಸೇರಿದಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಚಿವರಾಗಲೀ ಶಾಸಕರಾಗಲೀ ಎಲ್ಲೂ ಕಾಣಿಸಲಿಲ್ಲ. ರಾಜ್ಯ ಸರ್ಕಾರದ ರಾಜಕೀಯ ಪ್ರತಿನಿಧಿಗಳ ಅಹ್ವಾನ ಬೇಡ ಎಂದು ಪಿಎಂ ಕಚೇರಿಯಿಂದ ಮಾಹಿತಿ ನೀಡಲಾಗಿದೆ ಎನ್ನಲಾಗಿದ್ದು, ಹೀಗಾಗಿ ಅಧಿಕಾರಿಗಳನ್ನು ಮಾತ್ರ ರಾಜ್ಯ ಸರ್ಕಾರ ಕಳುಹಿಸಿ ಕೊಟ್ಟಿದೆ.

ಪಿಎಂ ಸ್ವಾಗತ ಮಾಡಲು ಹೋಗುವಂತೆ ಪರಮೇಶ್ವರ್‌ ಅವರಿಗೆ ಸೂಚಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಕೊನೆಯ ಕ್ಷಣದಲ್ಲಿ ಪಿಎಂ ಕಚೇರಿಯಿಂದ ಮಾಹಿತಿ ಹೋಗಿದ್ದು, ರಾಜ್ಯಪಾಲರು ಮತ್ತು ಸಿಎಂ ಸಹ ಸ್ವಾಗತ ಕೋರುವ ಅವಶ್ಯಕತೆ ಇಲ್ಲ ಎಂದು, ಕೇವಲ ಸರ್ಕಾರಿ ಅಧಿಕಾರಿಗಳಿಂದ ಮಾತ್ರ ಸ್ವಾಗತ ಕೋರುವಂತೆ ಸಂದೇಶ ರವಾನೆಯಾಗಿದೆ. ಹೀಗಾಗಿ ಸ್ವಾಗತ ಕೋರಲು ರಾಜ್ಯ ಸರ್ಕಾರದ ಸಚಿವರು ತೆರಳಿಲ್ಲ.

ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿ ಸಂಸದರು, ಶಾಸಕರು ಮೋದಿಯವರನ್ನು ಸ್ವಾಗತಿಸಲು ರಸ್ತೆಯ ಇಕ್ಕೆಲದಲ್ಲಿ ಕಾದು ನಿಂತಿದ್ದರು. ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾರಿ ಸಂಖ್ಯೆಯಲ್ಲಿ ಸೇರಿದ್ದಾರೆ. ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರು ಬಂದಿಳಿದಿದ್ದು, ಈ ಸಂದರ್ಭದಲ್ಲಿ ರಾಜ್ಯದ ಪ್ರಮುಖ ನಾಯಕರು ಹಾಜರಿದ್ದು ಸ್ವಾಗತ ಕೋರಿದರು. ದಕ್ಷಿಣ ಆಫ್ರಿಕದ ಬ್ರಿಕ್ಸ್‌ ಶೃಂಗ ಸಭೆಯಿಂದ ಅವರು ನೇರವಾಗಿ ಬೆಂಗಳೂರಿಗೆ ಬಂದಿದ್ದಾರೆ.

ಪ್ರಧಾನಿ ಮೋದಿ ಸ್ವಾಗತಕ್ಕೆ ಜನ ಕಾತರಗೊಂಡಿದ್ದು, ಎಚ್‌ಎಎಲ್‌ ಬಳಿ ಹಾಗೂ ಜಾಲಹಳ್ಳಿ ಕ್ರಾಸ್‌ನ ಮುಖ್ಯ ರಸ್ತೆಯಲ್ಲಿ ಜನ ಜಮಾವಣೆಗೊಂಡರು. ಬ್ಯಾರಿಕೇಡ್‌ನ ಒಂದು ಭಾಗದಲ್ಲಿ ನಿಂತು ಭಾರತದ ತ್ರಿವರ್ಣ ಧ್ವಜ ಹಿಡಿದು ಸ್ವಾಗತ ಕೋರಿದರು. ಡೊಳ್ಳು ಕುಣಿತ, ವೀರಗಾಸೆ ಮತ್ತಿತರ ಜನಪದ ನೃತ್ಯಗಳ ಮೂಲಕ ಸ್ವಾಗತ ಕೋರಲಾಯಿತು.

ಪ್ರಧಾನಿಗಳ ಆಗಮನಕ್ಕೆ ಭರ್ಜರಿ ತಯಾರಿ ನಡೆದಿದ್ದು, ಹೆಚ್. ಎ.ಎಲ್ ಮುಂಭಾಗದಲ್ಲಿ ವೇದಿಕೆ ನಿರ್ಮಾಣ ಆಗಿದೆ. ವೇದಿಕೆ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ನಿಲ್ಲಲು ವ್ಯವಸ್ಥೆಯಾಗಿದ್ದು, ಈ ವೇಳೆ ಕಾರ್ಯಕರ್ತರ ನಡುವೆ ಸಂಸದ ತೇಜಸ್ವಿ ಸೂರ್ಯ ನಿಂತಿದ್ದುದು ಕಂಡುಬಂತು.

Exit mobile version