ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ (Mann Ki Baat) ಸರಣಿಯ 107ನೇ ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದರು. ದೇಶದ ಹಲವು ವಿಚಾರಗಳ ಕುರಿತು ಮಾತನಾಡಿದ ನರೇಂದ್ರ ಮೋದಿ (Narendra Modi), ಚಾಮರಾಜನಗರ ಜಿಲ್ಲೆಯ (Chamarajanagar District) ವರ್ಷಾ (Varsha) ಎಂಬ ಮಹಿಳೆಯನ್ನೂ ಸ್ಮರಿಸಿದರು. ಮನ್ ಕೀ ಬಾತ್ ಕಾರ್ಯಕ್ರಮವು ಹೇಗೆ ಜನರ ಜೀವನದಲ್ಲಿ ಬದಲಾವಣೆ ತರುತ್ತಿದೆ, ಜನ ಹೇಗೆ ಸ್ಫೂರ್ತಿಗೊಂಡು ಹಲವು ಕೆಲಸಗಳಲ್ಲಿ ತೊಡಗಿದ್ದಾರೆ ಎಂಬುದನ್ನು ತಿಳಿಸುವಾಗ ಮೋದಿ ಅವರು ವರ್ಷಾ ಅವರನ್ನು ಉದಾಹರಣೆಯಾಗಿ ನೀಡಿದರು.
“ಮನ್ ಕೀ ಬಾತ್ ಕಾರ್ಯಕ್ರಮವು ಹೇಗೆ ಸಕಾರಾತ್ಮಕವಾಗಿ ಪರಿಣಾಮ ಬೀರಿದೆ ಎಂಬುದಕ್ಕೆ ಕರ್ನಾಟಕದ ಚಾಮರಾಜನಗರದ ವರ್ಷಾ ಅವರೇ ಸಾಕ್ಷಿಯಾಗಿದ್ದಾರೆ. ವರ್ಷಾ ಅವರು ಮನ್ ಕೀ ಬಾತ್ ಕಾರ್ಯಕ್ರಮದ ಒಂದು ಎಪಿಸೋಡ್‌ನಿಂದ ಪ್ರೇರೇಪಣೆಗೊಂಡು ಸ್ವಂತ ಉದ್ಯಮ ಆರಂಭಿಸಿದ್ದಾರೆ. ಬಾಳೆ ಹಣ್ಣಿನ ಸಿಪ್ಪೆಯಿಂದ ಜೈವಿಕ ಗೊಬ್ಬರ ತಯಾರಿಕೆ, ಸ್ಥಳೀಯ ಉತ್ಪನ್ನಗಳನ್ನೇ ಬಳಸಿ ಕರಕುಶಲ ವಸ್ತುಗಳನ್ನು ತಯಾರಿಸುವುದು ಸೇರಿ ಹಲವು ಚಟುವಟಿಕೆಗಳನ್ನು ಕೈಗೊಂಡು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಹಾಗೆಯೇ, ಇವರು ಬೇರೆಯವರಿಗೂ ಉದ್ಯೋಗ ನೀಡಿದ್ದಾರೆ” ಎಂದು ಹೇಳಿದರು.
ಯಾರಿವರು ವರ್ಷಾ?
ಚಾಮರಾಜನಗರ ಜಿಲ್ಲೆಯ ಉಮ್ಮತ್ತೂರು ಗ್ರಾಮದವರಾದ ವರ್ಷಾ ಅವರು ಬಾಳೆ ಹಣ್ಣಿನ ಸಿಪ್ಪೆಯಿಂದ ರಸಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಾರೆ. ಆಕೃತಿ ಎಕೋ ಫ್ರೆಂಡ್ಲಿ ಎಂಟರ್‌ಪ್ರೈಸಸ್ ಎಂಬ ಸಣ್ಣ ಕೈಗಾರಿಕೆಯಲ್ಲಿ ತೊಡಗಿರುವ ಇವರು, ಸ್ಥಳೀಯ ವಸ್ತುಗಳನ್ನೇ ಬಳಸಿ ಕರಕುಶಲ ಉತ್ಪನ್ನಗಳನ್ನೂ ತಯಾರಿಸುತ್ತಾರೆ. ಇವರು ಹತ್ತಾರು ಜನರಿಗೆ ಉದ್ಯೋಗವನ್ನೂ ನೀಡಿದ್ದಾರೆ. ಮನ್ ಕೀ ಕಾರ್ಯಕ್ರಮವೇ ಇವರ ಏಳಿಗೆಗೆ ಏಣಿಗೆಯಾಗಿದೆ ಎಂದು ತಿಳಿದುಬಂದಿದೆ.
ಮುಂಬೈ ದಾಳಿ ಹುತಾತ್ಮರಿಗೆ ನಮನ
2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಉಗ್ರರ ದಾಳಿ ಕುರಿತು ಮಾತನಾಡಿದ ನರೇಂದ್ರ ಮೋದಿ, ದಾಳಿ ವೇಳೆ ಹುತಾತ್ಮರಾದ ಯೋಧರು, ಭದ್ರತಾ ಸಿಬ್ಬಂದಿಗೆ ನಮನ ಸಲ್ಲಿಸಿದರು. “ನವೆಂಬರ್ 26ರಂದು ನಡೆದ ಉಗ್ರರ ದಾಳಿಯನ್ನು ದೇಶವು ಎಂದಿಗೂ ಮರೆಯುವುದಿಲ್ಲ. ಇದು ದೇಶದ ಇತಿಹಾಸದಲ್ಲಿಯೇ ಕರಾಳ ಅಧ್ಯಾಯವಾಗಿದೆ. ದಾಳಿಯ ವೇಳೆ ಮಡಿದ ಯೋಧರಿಗೆ ನನ್ನ ನಮನಗಳು. ಇಂತಹ ಘಟನೆಗಳು ದೇಶದಲ್ಲಿ ಎಂದಿಗೂ ಘಟಿಸದಿರಲಿ” ಎಂದು ಹೇಳಿದರು. ಹಾಗೆಯೇ, ನವೆಂಬರ್ 26ರಂದು ಸಂವಿಧಾನ ದಿನ ಆಚರಿಸುವ ಕಾರಣ, ಸಂವಿಧಾನದ ಮಹತ್ವ, ರಚನೆ, ಸಂವಿಧಾನ ರಚನೆಗೆ ಮಹನೀಯರ ಕೊಡುಗೆ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.
ಮೋದಿ ಮನ್ ಕೀ ಬಾತ್ ಕೇಳಿ
ಇದನ್ನೂ ಓದಿ: Mann Ki Baat Book: ಮೋದಿ ಮನ್ ಕೀ ಬಾತ್ ಮೆಲುಕು; ಪುಸ್ತಕ ಸ್ವೀಕರಿಸಿದ ದ್ರೌಪದಿ ಮುರ್ಮು
ವೋಕಲ್ ಫಾರ್ ಲೋಕಲ್‌ಗೆ ಕರೆ
ದಸರಾ ಹಾಗೂ ದೀಪಾವಳಿ ವೇಳೆ ದೇಶೀಯ ಉತ್ಪನ್ನಗಳ ಬಳಕೆ ಹೆಚ್ಚಾಗಿರುವ ಕುರಿತು ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದರು. ಹಾಗೆಯೇ, “ಈಗಾಗಲೇ ದೇಶಾದ್ಯಂತ ಮದುವೆ ಸಮಾರಂಭಗಳ ಸೀಸನ್ ಆರಂಭವಾಗಿದೆ. ಮದುವೆ ವೇಳೆಯೂ ಜನ ದೇಶೀಯ ವಸ್ತುಗಳನ್ನು ಖರೀದಿಸಬೇಕು. ಆ ಮೂಲಕ ಸ್ಥಳೀಯವಾಗಿ ಆರ್ಥಿಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ಹಾಗೆಯೇ, ಖರೀದಿ ವೇಳೆ ಏಕೀಕೃತ ಪಾವತಿ ವ್ಯವಸ್ಥೆ (UPI) ಅನ್ವಯವೇ ಹಣ ಪಾವತಿಸಬೇಕು” ಪ್ರಧಾನಿ ಕರೆ ನೀಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ