ಧಾರವಾಡ: ಧಾರವಾಡ ಮತ್ತು ಬೆಂಗಳೂರು (Dharwad – Bengaluru) ನಡುವೆ ಸಂಚರಿಸುವ ವಂದೇ ಭಾರತ್ ರೈಲಿಗೆ (Vande Bharat Express) ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಭೋಪಾಲ್‌ನ ರಾಣಿ ಕಮಲಾಪತಿ ರೈಲು ನಿಲ್ದಾಣದಿಂದ ಅವರು ಧಾರವಾಡ-ಬೆಂಗಳೂರು ರೈಲು ಸೇರಿದಂತೆ ದೇಶದ ಒಟ್ಟು ರೈಲುಗಳಿಗೆ ವರ್ಚುವಲ್ ಆಗಿ ಹಸಿದು ನಿಶಾನೆ ತೋರಿದರು. ಇತ್ತ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Central Minister Pralhad joshi) ಮತ್ತು ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ರೈಲು ಸಂಚಾರವನ್ನು ಉದ್ಘಾಟಿಸಿದರು.
ದೇಶಾದ್ಯಂತ ಒಟ್ಟು ಐದು ವಂದೇ ಭಾರತ್ ರೈಲುಗಳು ಹಳಿಯೇರಿವೆ. ಮಧ್ಯಪ್ರದೇಶದಲ್ಲಿ 2 ರೈಲುಗಳು, ಕರ್ನಾಟಕ, ಬಿಹಾರ, ಹಾಗೂ ಗೋವಾದಲ್ಲಿ ಒಂದೊಂದು ರೈಲಿಗೆ ಚಾಲನೆ ಸಿಕ್ಕಿದೆ. ಕರ್ನಾಟಕದ ಪಾಲಿಗೆ ಧಾರವಾಡ- ಬೆಂಗಳೂರು ರೈಲು ಎರಡನೇ ವಂದೇ ಭಾರತ್ ರೈಲು. ಈ ಹಿಂದೆ ಚೆನ್ನೈನಿಂದ ಮೈಸೂರಿಗೆ ನಡುವೆ ವಂದೇ ಭಾರತ್ ರೈಲಿನ ಸಂಚಾರಕ್ಕೆ ಚಾಲನೆ ನೀಡಲಾಗಿತ್ತು. ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವಿನ ಸುಮಾರು 490 ಕಿ.ಮೀ ದೂರವನ್ನು 6 ಗಂಟೆ 13 ನಿಮಿಷಗಳಲ್ಲಿ ಈ ರೈಲು ಕ್ರಮಿಸಲಿದೆ.
ಪ್ರಾಯೋಗಿಕ ಓಡಾಟ ಯಶಸ್ವಿ
ನೈಋತ್ಯ ರೈಲ್ವೆ (SWR) ವಲಯದಲ್ಲಿ ಬೆಂಗಳೂರು ಮತ್ತು ಧಾರವಾಡವನ್ನು ಸಂಪರ್ಕಿಸುವ ಕರ್ನಾಟಕದ ವಿಶೇಷ ರೈಲು ಇದಾಗಿದೆ. ಜೂನ್ 19ರಂದು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ನಿಲ್ದಾಣದಿಂದ ಧಾರವಾಡಕ್ಕೆ ಮತ್ತು ಅಲ್ಲಿಂದ ಹಿಂದಕ್ಕೆ ಈ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಓಡಾಟವನ್ನು ಯಶಸ್ವಿಯಾಗಿ ನಡೆಸಲಾಗಿತ್ತು.
ಸಮಯ ಬದಲಾವಣೆ ಬಗ್ಗೆ ಪರಿಶೀಲನೆ
ಧಾರವಾಡ ರೈಲು ನಿಲ್ದಾಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ʻʻಧಾರವಾಡ ರೈಲ್ವೆ ನಿಲ್ದಾಣದ ಉದ್ಘಾಟನೆಗೆ ಅಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬಂದಿದ್ದರು. ಆಗ ನಾನು ಅವರಿಗೆ ವಂದೇ ಭಾರತ್ ರೈಲಿಗಾಗಿ ಮನವಿ ಮಾಡಿದ್ದೆ. ಅದರಂತೆ ಅವರು ಅಂದೆ ಘೋಷಣೆ ಮಾಡಿದ್ದರು. ಮುಂದೆ ನಾವು ನಾವು ಧಾರವಾಡ-ಬೆಂಗಳೂರು ಮದ್ಯೆ ಡಬಲಿಂಗ್ ಹಾಗೂ ವಿದ್ಯುದೀಕರಣ ಕೆಲಸ ಪೂರ್ಣ ಮಾಡಿದೆವು. ಮಾಧ್ಯಮದವರು ಸಹ ಆಗಾಗ ಕೇಳುತ್ತಿದ್ದರು, ಯಾವಾಗ ಆರಂಭ ಅಂತ. ನಾವು ಯಾವುದೇ ರೀತಿ ಚುನಾವಣೆ ಆಶ್ವಾಸನೆ ನೀಡಲ್ಲ, ಮಾಡಿ ತೋರಿಸುತ್ತೇವೆ ಅಂತ ಹೇಳಿದ್ದೆ. ಈಗ ಅದು ನಿಜವಾಗಿದೆ ಎಂದರು.
ಇದನ್ನೂ ಓದಿ: Vande Bharat Trains: 6 ವರ್ಷದಲ್ಲಿ 80 ವಂದೇ ಭಾರತ್ ಸ್ಲೀಪರ್ ರೈಲು ತಯಾರಿ; 24 ಸಾವಿರ ಕೋಟಿ ರೂ. ಟೆಂಡರ್ ಯಾರಿಗೆ?
ಧಾರವಾಡದಿಂದ ಬೆಳಗಿನ ಜಾವ ಬೆಂಗಳೂರಿಗೆ ರೈಲು ಬಿಡಬೇಕು ಎಂಬ ಬೇಡಿಕೆ ಇದೆ. ಸಮಯ ಬದಲಾವಣೆ ಬಗ್ಗೆ ಮಾತನಾಡಿದ್ದೇನೆ. ವಂದೇ ಭಾರತ ರೈಲಿನ ನಿರ್ವಹಣೆ ಸದ್ಯ ಬೆಂಗಳೂರಿನಲ್ಲಿದೆ. ಅದನ್ನು ಧಾರವಾಡಕ್ಕೆ ವರ್ಗಾಯಿಸಿ ಟೈಮಿಂಗ್ ಬದಲಾವಣೆ ಮಾಡುವ ವಿಶ್ವಾಸ ಇದೆ. ಇನ್ನೇನು ಆರು ತಿಂಗಳ ಒಳಗೆ ಸಮಯ ಬದಲಾವಣೆ ಆಗುತ್ತದೆ ಎಂದರು.
ಬೆಳಗಾವಿಯಿಂದ ರೈಲು ಓಡಿಸುವ ಬಗ್ಗೆಯೂ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಅಲ್ಲಿಯೂ ಡಬಲಿಂಗ್ ಕಾರ್ಯ ಮುಗಿಸಿ ಓಡಿಸುವ ವಿಶ್ವಾಸ ಇದೆ ಎಂದರು ಪ್ರಲ್ಹಾದ್ ಜೋಶಿ.
ರೈಲು ಉದ್ಘಾಟನೆ ಮಾಡಿದ ಸಚಿವ ಪ್ರಲ್ಹಾದ್ ಜೋಶಿ ಮತ್ತು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಅದೇ ರೈಲಿನಲ್ಲಿ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದರು.