Site icon Vistara News

ʼನಾನು ಕರ್ನಾಟಕಕ್ಕೆ ಹೋಗುತ್ತಿರುವೆʼ ಎಂದು ಕನ್ನಡದಲ್ಲೇ ಟ್ವೀಟ್‌ ಮಾಡಿದ ಮೋದಿ; ಕನ್ನಡ ಬಳಕೆಗೆ ಮೆಚ್ಚುಗೆ-ಟೀಕೆ!

PM Modi Visit Karnataka

ಬೆಂಗಳೂರು: ಇಂದು ಕರ್ನಾಟಕಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ (PM Modi Karnataka Visit) ಈ ಬಗ್ಗೆ ಟ್ವೀಟ್‌ ಮಾಡಿಕೊಂಡಿದ್ದಾರೆ. ಕನ್ನಡದಲ್ಲಿಯೇ ಟ್ವೀಟ್‌ ಮಾಡಿರುವ ಅವರು ತಮ್ಮ ಎರಡು ದಿನಗಳ ಬೆಂಗಳೂರು-ಮೈಸೂರು ಪ್ರವಾಸದ ಅಪ್‌ಡೇಟ್‌ನ್ನು ಚುಟುಕಾಗಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಕನ್ನಡದಲ್ಲಿಯೇ ಟ್ವೀಟ್‌ ಮಾಡುತ್ತಾರೆ. ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹುಟ್ಟಿದ ದಿನ, ಪುಣ್ಯಸ್ಮರಣೆಗೆ ತಪ್ಪದೆ ಕನ್ನಡ ಬರಹದ ಮೂಲಕವೇ ಗೌರವ ಸಮರ್ಪಿಸುತ್ತಾರೆ. ಹಾಗೇ ಈಗ ತಮ್ಮ ಕರ್ನಾಟಕ ಭೇಟಿಯ ವಿಷಯವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

“ನಾನು ಕರ್ನಾಟಕ ರಾಜ್ಯಕ್ಕೆ ಹೋಗುತ್ತಿರುವೆ ಅಲ್ಲಿ ಬೆಂಗಳೂರು ಮತ್ತು ಮೈಸೂರಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವೆ. ಮೊದಲ ಕಾರ್ಯಕ್ರಮ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ ನಡೆಯಲಿದ್ದು, ಅಲ್ಲಿ ಮಿದುಳು ಸಂಶೋಧನಾ ಕೇಂದ್ರ ಉದ್ಘಾಟಿಸಲಾಗುವುದು. ಬಾಗ್ಚಿ- ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿಲಾನ್ಯಾಸ ನೆರವೇರಿಸಲಾಗುವುದು” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಇನ್ನೊಂದು ಟ್ವೀಟ್‌ ಮಾಡಿ, ʼಬೆಂಗಳೂರಿನ ಕಾರ್ಯಕ್ರಮದಲ್ಲಿ 27,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ/ಶಂಕುಸ್ಥಾಪನೆ ಮಾಡಲಿದ್ದೇನೆ. ಈ ಕಾಮಗಾರಿಗಳು ವಿವಿಧ ಕ್ಷೇತ್ರಗಳಿಗೆ ಸೇರಿದ್ದಾಗಿದ್ದು ಬೆಂಗಳೂರಿನ ಹಾಗೂ ಸುತ್ತಮುತ್ತಲಿನ ಜನರ ಜೀವನಕ್ಕೆ ಅನುಕೂಲಕರವಾಗುವಂಥದ್ದು. ನಂತರ ಮಧ್ಯಾಹ್ನ ಡಾ. ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್), ವಿಶ್ವ ವಿದ್ಯಾಲಯದ ಹೊಸ ಕ್ಯಾಂಪಸ್ ಉದ್ಘಾಟನೆ ಮಾಡುವ ಜತೆಗೆ, ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಅನಾವರಣಗೊಳಿಸಲಿದ್ದೇನೆ. ಇದೇ ವೇಳೆ 150 ಟೆಕ್‌ಹಬ್‌ಗಳ ಲೋಕಾರ್ಪಣೆ ಕೂಡ ಮಾಡುತ್ತೇನೆʼ.

ʼಅಲ್ಲಿಂದ ಸಂಜೆ 5.30ರ ವೇಳೆಗೆ ಮೈಸೂರು ತಲುಪುವೆ. ಅಲ್ಲಿಯೂ ಪ್ರಮುಖ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ/ಶಿಲಾನ್ಯಾಸ ನೆರವೇರಿಸುವೆ. ಸುತ್ತೂರು ಮಠದ ಕಾರ್ಯಕ್ರಮದಲ್ಲಿಯೂ ಭಾಗಿಯಾಗುವೆ. ನಾಳೆ ಬೆಳಗ್ಗೆ, ಮೈಸೂರಿನಲ್ಲಿ ಯೋಗ ದಿನದ ಕಾರ್ಯಕ್ರಮ ನಡೆಯಲಿದೆʼ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಭಾಷಾಂತರದ ಬಗ್ಗೆ ಅಸಮಾಧಾನ
ಪ್ರಧಾನಿ ನರೇಂದ್ರ ಮೋದಿ ಯಾವುದೇ ಟ್ವೀಟ್‌ ಮಾಡಿದರೂ ಅದನ್ನವರು ಸ್ವತಃ ಕೈಯಾರೆ ಮಾಡುವುದಿಲ್ಲ. ಅವರ ಖಾತೆಯನ್ನು ನಿಭಾಯಿಸುವವರ ತಂಡವೇ ಬೇರೆ ಇರುತ್ತದೆ. ಬೇರೆ ಭಾಷೆಗಳಲ್ಲಿ ಮಾಡುವ ಟ್ವೀಟ್‌ನ ಜವಾಬ್ದಾರಿಯೂ ಅವರದ್ದೇ ಆಗಿರುತ್ತದೆ. ಇದೀಗ ಕರ್ನಾಟಕಕ್ಕೆ ಬರುತ್ತಿರುವ ನರೇಂದ್ರ ಮೋದಿ ಟ್ವಿಟರ್‌ ಅಕೌಂಟ್‌ನಲ್ಲಿ ಕನ್ನಡದ ಸಾಲುಗಳನ್ನು ಕಂಡು ಕನ್ನಡಿಗರು ಫುಲ್‌ ಖುಷಿಯಾಗಿದ್ದರೂ ಅದರ ವಾಕ್ಯರಚನೆ, ಭಾಷಾಂತರ ಸ್ವರೂಪದ ಬಗ್ಗೆ ಅನೇಕರು ಅಪಸ್ವರ ಎತ್ತಿದ್ದಾರೆ. ಪ್ರಧಾನಿ ಮೋದಿ ಟ್ವಿಟರ್‌ ಅಕೌಂಟ್‌ನಲ್ಲಿ, ಚಿಕ್ಕಮಕ್ಕಳು ಕನ್ನಡ ವಾಕ್ಯ ಬರೆದಂತೆ ಬರೆಯಲಾಗುತ್ತಿದೆ. ಇನ್ನಷ್ಟು ಸ್ಪಷ್ಟವಾಗಿ, ಪ್ರಬುದ್ಧವಾಗಿ ಬರೆಯಬೇಕು. ಅದಕ್ಕಾಗಿ ಕನ್ನಡ ಚೆನ್ನಾಗಿ ಗೊತ್ತಿರುವವರನ್ನೇ ನೇಮಕ ಮಾಡಿಕೊಳ್ಳಬಹುದಲ್ಲ ಎಂಬ ಚರ್ಚೆಯೂ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ನರೇಂದ್ರ ಮೋದಿ ಪ್ರವಾಸದ Complete Details ಇಲ್ಲಿದೆ

Exit mobile version