Site icon Vistara News

Chakravarthy Sulibele: ಪ್ರಧಾನಿ ಮೋದಿ ವರ್ಚಸ್ಸು ಕಡಿಮೆಯಾಗಿಲ್ಲ: ಚಕ್ರವರ್ತಿ ಸೂಲಿಬೆಲೆ

Chakravarthy Sulibele

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕಡಿಮೆಯಾಗಿಲ್ಲ, ಅವರ ಕಾರ್ಯ ಸಾಧನೆಗಳನ್ನು ಜನತೆಯ ಮುಂದಿಡುತ್ತೇವೆ. ಜನರಿಗೆ ಪ್ರಧಾನಿ ಮೋದಿ ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ, ದೇಶಕ್ಕೆ ಬರುವ ಆತಂಕದ ವಿಷಯಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತೇವೆ ಎಂದು ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಹೇಳಿದರು.

ಕರ್ನಾಟಕ ಸಂಘದ ಭವನದಲ್ಲಿ ನಮೋ ಬ್ರಿಗೇಡ್, ಅಜೇಯ ಸಂಸ್ಕೃತಿ ಬಳಗದಿಂದ ಆಯೋಜಿಸಿದ್ದ ʼಇನ್ನೂ ಮಲಗಿದರೆ, ಏಳುವಾಗ ಭಾರತವಿರುವುದಿಲ್ಲʼ ಎಂಬ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಧಾನಿ ಮೋದಿ ಅವರ ಉತ್ತಮ ಆಡಳಿತದ ಬಗ್ಗೆ ಮಾಹಿತಿ ನೀಡಲೆಂದೆ ಈ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶದ ಹಿತದೃಷ್ಟಿಯಿಂದ ಇಂತಹ ಉಪನ್ಯಾಸ ಕಾರ್ಯಕ್ರಮ ಅನಿವಾರ್ಯ ಎಂದು ತಿಳಿಸಿದರು.

ಇದನ್ನೂ ಓದಿ | Yathindra siddaramaiah : ಪುತ್ರನಿಗೆ ರಾಜಕೀಯ ಆಶ್ರಯ ನೀಡಿದ ಸಿದ್ದರಾಮಯ್ಯ; ಎರಡು ಹುದ್ದೆಗೆ ಯತೀಂದ್ರ ನೇಮಕ

ನನ್ನ ಫೇಸ್‌ಬುಕ್ ಖಾತೆಯಿಂದ ಸಂದೇಶ ಹೋಗಿದೆ ಎಂದು ಎಫ್ಐಆರ್ ಹಾಕಿದ್ದಾರೆ. ನನ್ನ ಸೋಶಿಯಲ್ ಮೀಡಿಯಾ ಅಕೌಂಟ್ ಅನ್ನು ನಮ್ಮ ಹುಡುಗರು ಹ್ಯಾಂಡಲ್ ಮಾಡುತ್ತಾರೆ. ಈ ವಿಷಯದ ಬಗ್ಗೆ ನ್ಯಾಯಾಲಯದಲ್ಲಿ ಉತ್ತರ ನೀಡುತ್ತೇನೆ. ಇಂತಹ ಸಣ್ಣ ವಿಷಯಗಳನ್ನು ಕೂಡ ಪೊಲೀಸರು ಹೇಗೆ ಎಫ್‌ಐಆರ್ ದಾಖಲಿಸಿದರು ಎಂಬುದನ್ನು ನ್ಯಾಯಾಲಯದಲ್ಲೇ ಪ್ರಶ್ನಿಸುತ್ತೇನೆ. ಇಂತಹ ಅನೇಕ ಸಂಗತಿಗಳು ಈ ಹಿಂದೆ ಕೂಡ ನಡೆದಿದೆ. ಆದರೆ ಆವಾಗಲೆಲ್ಲ ಎಫ್ಐಆರ್ ದಾಖಲಾಗಿರಲಿಲ್ಲ. ಈ ಸಂಗತಿಯನ್ನು ಖಚಿತವಾಗಿ ಕೋರ್ಟ್‌ನಲ್ಲಿ ಪ್ರಶ್ನೆ ಮಾಡುತ್ತೇನೆ ಹೇಳಿದರು.

ಈ ಕಾರ್ಯಕ್ರಮಕ್ಕೆ ಪ್ರತಿಭಟನೆಯ ಸಾಧ್ಯತೆ ಹಿನ್ನೆಲೆ ಪೊಲೀಸರು ಹೆಚ್ಚಿನ ಭದ್ರತೆ ನೀಡಿದ್ದಾರೆ. ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಪೊಲೀಸರು ಸಹಕರಿಸಿದ್ದಾರೆ. ಇದಕ್ಕಾಗಿ ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸುತ್ತೇನೆ ಎಂದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮೋ ಬ್ರಿಗೇಡ್ ಹೆಚ್ಚಿನ ಕೆಲಸ ಮಾಡಲಿದೆ. ಜಿಲ್ಲಾ ಮಟ್ಟದ ಸಭೆಯನ್ನು ಖುದ್ದಾಗಿ ನಾನೇ ನಡೆಸಿದ್ದೇನೆ. ತಾಲೂಕು ಮಟ್ಟದಲ್ಲೂ ಕೂಡ ನಮೋ ಬ್ರಿಗೇಡ್ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಲೋಕಸಭಾ ಚುನಾವಣೆಗೆ 5 ತಿಂಗಳ ಮುನ್ನ ನಮ್ಮ ಕಾರ್ಯ ಶುರು ಆಗಲಿದೆ. ಚುನಾವಣೆಯ ಕೊನೆಯ ಎರಡು ತಿಂಗಳಲ್ಲಿ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ನಮೋ ಬ್ರಿಗೇಡ್ 2.0 ಪ್ರಚಾರ ನಡೆಸಲಿದೆ ಎಂದು ಹೇಳಿದರು.

ನೆಗೆಟಿವ್ ಪಬ್ಲಿಸಿಟಿ ತುಂಬಾ ಅನುಕೂಲ, ಪ್ರತಿಭಟನೆ ಶುಭಶಕುನ ಎಂದು ಭಾವಿಸುತ್ತೇನೆ. ಅಡ್ಡ ಹಾಕಿದ್ದಷ್ಟು ಒಳ್ಳೆಯದಾಗುತ್ತದೆ. ನೀರನ್ನು ಅಡ್ಡ ಹಾಕಿದಾಗ ಮಾತ್ರ ವಿದ್ಯುತ್ ಬರುತ್ತದೆ. ಶಿವಮೊಗ್ಗದಲ್ಲಿರುವವರಿಗೆ ಇದು ಹೊಸದು, ಕುಂದಾಪುರದಲ್ಲೂ ಒಮ್ಮೆ ಪ್ರತಿಭಟನೆ ನಡೆದಿತ್ತು. ಸಂಘಟಕರು ನಮ್ಮ ಕಾರ್ಯಕ್ರಮಕ್ಕೆ 300 ಜನರು ಬರಬಹುದೆಂದು ಭಾವಿಸಿದ್ದರು. ಆದರೆ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂದು ಸಭಾಂಗಣ ತುಂಬಿರುವುದನ್ನು ನೋಡಿ ಹೇಳಿದರು.

ಇದನ್ನೂ ಓದಿ | Karnataka Politics: ಪ್ರಾದೇಶಿಕ ಪಕ್ಷ ಉಳಿಸುವುದೇ ನಮ್ಮ ಗುರಿ: ಎಚ್‌.ಡಿ.ದೇವೇಗೌಡ

ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಆರ್‌ಎಸ್‌ಎಸ್‌ನ ಹಿರಿಯ ಸ್ವಯಂಸೇವಕ ಜಿನರಾಜ್ ಜೈನ್, ಅಜೇಯ ಸಂಸ್ಕೃತಿ ಬಳಗದ ಉಪಾಧ್ಯಕ್ಷ ನಾಗೇಶ, ಜಿಲ್ಲಾ ಸಂಚಾಲಕ ರಾಜೇಶ ಶೆಣೈ ಮತ್ತಿತರರು ಭಾಗಿಯಾಗಿದ್ದರು.

Exit mobile version