Site icon Vistara News

POCSO Case : ವಿದ್ಯಾರ್ಥಿನಿ ಜತೆ ಅನುಚಿತ ವರ್ತನೆ, ಸರಕಾರಿ ಶಾಲೆ ಶಿಕ್ಷಕನ ಮೇಲೆ ಪೋಕ್ಸೊ ಕೇಸ್‌

sexual assault

ರಿಪ್ಪನ್‌ಪೇಟೆ: ಶಿಕ್ಷಕನೊಬ್ಬ ತನ್ನ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಜತೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೀಲ್ಲೇಶ್ವರ ಶಾಲೆಯಲ್ಲಿ ನಡೆದಿದೆ. ಬಿಲ್ಲೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗೋಪಾಲ್‌ ಎಂಬವರೇ ಈ ರೀತಿ ಅನುಚಿತ ವರ್ತನೆ ತೋರಿದವರು. ವಿದ್ಯಾರ್ಥಿನಿ ನೀಡಿದ ದೂರಿನನ್ವಯ ಆತನ ವಿರುದ್ಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ (POCSO Case) ದಾಖಲಾಗಿದೆ

ಕಳೆದ ವರ್ಷದ ಡಿಸೆಂಬರ್‌ ೧೪ರಂದು ಸಂಜೆ ಮೂರು ಗಂಟೆಯ ಹೊತ್ತಿಗೆ ಶಾಲೆಯಲ್ಲಿ ಈ ಲೈಂಗಿಕ ಕಿರುಕುಳ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಂದು ಮಧ್ಯಾಹ್ನ ೩ ಗಂಟೆಗೆ ಮೂತ್ರ ವಿಸರ್ಜನೆಗೆ ವಿರಾಮ ನೀಡಿದ್ದು, ಆಗ ಉಳಿದೆಲ್ಲ ವಿದ್ಯಾರ್ಥಿಗಳು ಹೊರಗೆ ಹೋಗಿದ್ದರು. ಆಗ ಬಾಲಕಿಯೊಬ್ಬಳೇ ಕ್ಲಾಸಿನಲ್ಲಿದ್ದಾಗ ಸಮಯ ಸಾಧಿಸಿ ಬಂದ ಶಿಕ್ಷಕ ಆಕೆಗೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.

ಆ ಕ್ಷಣ ಶಿಕ್ಷಕನ ಕೈಯಿಂದ ತಪ್ಪಿಸಿಕೊಂಡ ಬಾಲಕಿ ರಾತ್ರಿ ಮನೆಯಲ್ಲಿ ವಿಷಯ ತಿಳಿಸಿದ್ದಳು. ಶಿಕ್ಷಕರು ಕೆಲವು ಕಡೆ ಹಿಂಸೆ ನೀಡಿದ್ದರಿಂದ ನೋವಾಗುತ್ತಿದೆ ಎಂದಿದ್ದಳು. ಘಟನೆಯ ವಿವರ ತಿಳಿದ ತಾಯಿಯು ಇನ್ನೊಬ್ಬ ಶಿಕ್ಷಕಿಯ ಬಳಿ ಇದನ್ನು ವಿವರಿಸಿ ಶಿಕ್ಷಕರಿಗೆ ಬುದ್ಧಿವಾದ ಹೇಳಲು ತಿಳಿಸಿದ್ದಾರೆ. ಅದರೆ ಶಿಕ್ಷಕಿ ನಿರ್ದಿಷ್ಟ ಶಿಕ್ಷಕರು ಆ ರೀತಿ ಮಾಡಲಿಕ್ಕಿಲ್ಲ ಎಂದು ವಾದಿಸಿದ್ದು ಮಾತ್ರವಲ್ಲದೆ, ಸಂಬಂಧ ಪಟ್ಟ ಶಿಕ್ಷಕರಿಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಲಾಗಿದೆ.

ಈ ನಡುವೆ, ತಾಯಿಯು ಗಂಡನಿಗೆ ಹಾಗೂ ಶಾಲಾಭಿವೃದ್ಧಿ ಸಮಿತಿಯವರಿಗೆ ವಿಚಾರ ತಿಳಿಸಬೇಕೆಂದಿರುವಾಗ ಬಾಲಕಿಯ ಮನೆಗೆ ಪಿಎಸ್‌ಐ ಸುಷ್ಮಾ ನೇತೃತ್ವದ ಶಿವಮೊಗ್ಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿಯವರು ಆಗಮಿಸಿದ್ದರು. ಹೇಗೋ ವಿಷಯ ತಿಳಿದ ಅವರು ಬಾಲಕಿಯನ್ನು ವಿಚಾರಣೆಗಾಗಿ ಶಿವಮೊಗ್ಗ ಸುರಭಿ ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.

ಘಟನೆಯ ಬಗ್ಗೆ ವಿಚಾರಿಸಿದಾಗ ಶಾಲೆಯಲ್ಲಿ ಶಿಕ್ಷಕ ನೀಡಿದ ಕಿರುಕುಳದ ಬಗ್ಗೆ ತಾಯಿಯ ಸಮಕ್ಷಮದಲ್ಲಿ ಬಾಲಕಿ ಹೇಳಿಕೆ ನೀಡಿದ್ದಾಳೆ. ಓರ್ವ ಶಿಕ್ಷಕನ ಮೇಲೆ ಹಾಗೂ ಶಿಕ್ಷಕಿಯ ಮೇಲೆ ಪಟ್ಟಣದ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಕಳೆದ ಡಿಸೆಂಬರ್‌ ೩೧ರಂದು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Sexual harrassment : ಲೆಕ್ಚರರ್‌ನಿಂದ ಲೈಂಗಿಕ ಕಿರುಕುಳ; ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು, ಅತ್ಯಾಚಾರ ಎಸಗಿ ಕೊಲೆ ಆರೋಪ

Exit mobile version