ಗದಗ: ಬಾಲಕಿಯೊಬ್ಬಳನ್ನು ಪ್ರಜ್ಞೆ ತಪ್ಪಿಸಿ, ಆಕೆ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಗೆ ತಕ್ಕ ಶಿಕ್ಷೆಯಾಗಿದೆ. ಪೋಕ್ಸೋ ಕಾಯ್ದೆ (POCSO Case) ಅಡಿ ದಾಖಲಾಗಿದ್ದ ಪ್ರಕರಣ ಸಂಬಂಧ ಗದಗ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಮಹತ್ವದ ಆದೇಶವನ್ನು ಹೊರಡಿಸಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 25 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿ ಅವರು ಈ ಮಹತ್ವದ ಆದೇಶವನ್ನು ನೀಡಿದ್ದಾರೆ. ಮೌಲಾಸಾಬ ಇಮಾಮಸಾಬ ದೊಡ್ಡಮನಿ ಶಿಕ್ಷೆಗೆ ಒಳಗಾದ ಅಪರಾಧಿ.
ಇದನ್ನೂ ಓದಿ: Viral News: ಹೆಂಡಕ್ಕಾಗಿ ಹೋರಾಟ! ಬಸ್‌ಗಳಲ್ಲಿ ಡಿಫೆನ್ಸ್ ಮದ್ಯ ಒಯ್ಯೋಕೆ ಬೇಕು ಪರ್ಮಿಶನ್; ನಾರಿಯರ ಪ್ರತಿಭಟನೆ
ಸವದತ್ತಿ ತಾಲೂಕಿನ ತೆರದಕೊಪ್ಪ ಗ್ರಾಮದವನಾದ ಮೌಲಾಸಾಬ ಇಮಾಮಸಾಬ ದೊಡ್ಡಮನಿ ಬಾಲಕಿಯೊಬ್ಬಳನ್ನು ಒತ್ತಾಯವಾಗಿ ಸವದತ್ತಿ ತಾಲೂಕಿನ ಮುನುವಳ್ಳಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿಂದ ತನ್ನ ಬೈಕ್‌ನಲ್ಲಿ ಹತ್ತಿಸಿಕೊಂಡು ಮೊದಲಿಗೆ ನರಗುಂದ ಮುನವಳ್ಳಿ ರಸ್ತೆಯ ಸಿಂದೋಗಿ ಕ್ರಾಸ್ ಬಳಿ ಇರುವ ಮನೆಯೊಂದಕ್ಕೆ ಕರೆದೊಯ್ದಿದ್ದ.
ಆ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಈ ವೇಳೆ ಬಾಲಕಿಗೆ ಮನೆಯಲ್ಲಿ ಚಾಕು ತೋರಿಸಿ, ಪ್ರಾಣ ಬೆದರಿಕೆ ಹಾಕಿದ್ದಲ್ಲದೆ, ಆಕೆಗೆ ಪ್ರಜ್ಞೆ ತಪ್ಪಿಸುವ ಮಾತ್ರೆ ನೀಡಿದ್ದ. ಪ್ರಜ್ಞೆ ತಪ್ಪುತ್ತಿದ್ದಂತೆ ಅತ್ಯಾಚಾರ ಎಸಗಿದ್ದ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಂದು ಬಿಡುತ್ತೇನೆ ಎಂದು ಬೆದರಿಕೆಯನ್ನೂ ಒಡ್ಡಿದ್ದ ಎಂದು ಬಾಲಕಿ ಬಳಿಕ ಬಾಯಿಬಿಟ್ಟಿದ್ದಳು.
ಇದನ್ನೂ ಓದಿ: Honey trapped: ಹನಿಟ್ರ್ಯಾಪ್‌ನಲ್ಲಿ Money ಕಳೆದುಕೊಂಡ ಶಿವಮೊಗ್ಗದ ಅರಣ್ಯಾಧಿಕಾರಿ!
ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. 2018ರಲ್ಲಿ ನರಗುಂದ ಪೊಲೀಸ್ ಠಾಣೆ ಸಿಪಿಐ ಶ್ರೀನಿವಾಸ ಮೇಟಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಅಪರಾಧ ರುಜುವಾತಾದ ಹಿನ್ನೆಲೆ 376 (ಎಬಿ), ರೆ/ವಿ ಕಲಂ 5 (ಎಚ್) (ಎಂ) 6 ಪೋಕ್ಸೋ ಕಾಯ್ದೆಯಡಿ 25 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಲಾಗಿದೆ. ಸರ್ಕಾರಿ ಅಭಿಯೋಜಕರಾಗಿ ಅಮರೇಶ ಹಿರೇಮಠ ವಾದ ಮಂಡಿಸಿದ್ದರು.