ಬೆಂಗಳೂರು, ಕರ್ನಾಟಕ: ರಾಷ್ಟ್ರ ರಕ್ಷಣಾ ಪಡೆ ನಾಯಕ ಹಾಗೂ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ ಪುನೀತ್ ಕೆರೆಹಳ್ಳಿ (Puneeth Kerehalli) ವಿರುದ್ದ ಪೊಲೀಸರು (Police) ರೌಡಿ ಪಟ್ಟಿ (Rowdy Sheet) ತೆರೆಯಲು ಮುಂದಾಗಿದ್ದಾರೆ. ಈ ಸಂಬಂಧ ಕೆರೆಹಳ್ಳಿಗೆ ಪೊಲೀಸರು ನೋಟಿಸ್ ನೀಡಿದ್ದು, ಉತ್ತರ ನೀಡುವಂತೆ ತಿಳಿಸಿದ್ದಾರೆ.
ಕೊಲೆ, ಕೊಲೆಯತ್ನ, ದೊಂಬಿ, ಪ್ರಾಣ ಬೆದರಿಕೆ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ಭಾಗಿಯಾಗಿರುವ ಆರೋಪಗಳಿವೆ. ಕೊಲೆ ಪ್ರಕರಣದವೊಂದರಲ್ಲಿ ಜೈಲಿಗೆ ಹೋಗಿದ್ದ ಕೆರೆಹಳ್ಳಿ ಇತ್ತೀಚೆಗಷ್ಟೇ ಜಾಮೀನು ಮೂಲಕ ಬಿಡುಗೆಡೆಯಾಗಿದ್ದಾನೆ. ಜಾಮೀನು ಮೇಲೆ ಬಿಡುಗಡೆಗೊಂಡ ಬಳಿಕ ತನ್ನ ಹಳೇ ಚಾಳಿ ಮುಂದುವರಿಸಿರುವ ಕೆರೆಹಳ್ಳಿ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೆರೆಹಳ್ಳಿಗೆ ನೋಟಿಸ್ ನೀಡಿರುವ ಚಿಕ್ಕಪೇಟೆ ಎಸಿಪಿ ಅವರು, ನಿನ್ನ ಮೇಲೆ ಯಾಕೆ ರೌಡಿಶೀಟ್ ತೆರೆಯಬಾರದು ಎಂಬುದಕ್ಕೆ ವಿವರಣೆ ನೀಡಬೇಕು. ಇಲ್ಲದಿದ್ದರೆ, ಯಾವುದೇ ವಿವರಣೆ ಇಲ್ಲ ಎಂದು ಭಾವಿಸಿ ರೌಡಿ ಪಟ್ಟಿ ತೆರೆಯುವುದಾಗಿ ಸೂಚಿಸಲಾಗಿದೆ.
ಹಿಂದೂ ಕಾರ್ಯಕರ್ತನೆಂದು ಹೇಳಿಕೊಳ್ಳುವ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರಿನ ಚಾಮರಾಜಪೇಡೆ, ವಿಜಯ ನಗರ ಜಿಲ್ಲೆಯ ಹಂಪಿ ಟೂರಿಸಂ ಪೊಲೀಸ್ ಠಾಣೆ, ರಾಮನಗರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಈ ಸುದ್ದಿಯನ್ನೂ ಓದಿ: Murder Case: ಇದ್ರಿಷ್ ಪಾಷಾ ಸಾವು ಪ್ರಕರಣ; 7 ದಿನ ಪೊಲೀಸರ ಕಸ್ಟಡಿಗೆ ಪುನೀತ್ ಕೆರೆಹಳ್ಳಿ ಆ್ಯಂಡ್ ಟೀಮ್
ಈ ಹಿಂದೆ ಭಾರೀ ಸದ್ದು ಮಾಡಿದ್ದ ಹಲಾಲ್ ಕಟ್ ಸೇರಿದಂತೆ ಹಲವು ಗಲಾಟೆಗಳಲ್ಲಿ ಪುನೀತ್ ಕೆರೆಹಳ್ಳಿ ಸಕ್ರಿಯನಾಗಿದ್ದ. ವಿಧಾನಸಭೆ ಚುನಾವಣೆ ಮುಂಚೆ ಗೋ ಸಾಗಾಟಗಾರರನ್ನು ಪೊಲೀಸ್ ಒಪ್ಪಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದಾನೆಂದು ಹೇಳಲಾಗಿತ್ತು. ರಾಮನಗರ ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇತ್ತೀಚೆಗಷ್ಟೇ ಜಾಮೀನು ಮೇಲೆ ಪುನೀತ್ ಕೆರೆಹಳ್ಳಿ ಜೈಲಿನಿಂದ ಹೊರಗೆ ಬಂದಿದ್ದಾನೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.