ಮಂಗಳೂರು: ಪುತ್ತೂರಿನಲ್ಲಿ ಹಿಂದು ಕಾರ್ಯಕರ್ತರನ್ನು ಪೊಲೀಸರು ಕರೆದೊಯ್ದು ಬಾಸುಂಡೆ ಬರುವಂತೆ ಥಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬ ಸಬ್ ಇನ್ಸ್‌ಪೆಕ್ಟರ್ ಹಾಗೂ ಒಬ್ಬ ಕಾನ್ಸ್‌ಟೇಬಲ್‌ನನ್ನು ಅಮಾನತು ಮಾಡಲಾಗಿದೆ. ಪುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಕೇಂದ್ರ ಮಾಜಿ ಸಚಿವ ಸದಾನಂದ ಗೌಡ ಅವರ ಬ್ಯಾನರ್ ಹಾಕಿ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಹಿಂದು ಕಾರ್ಯಕರ್ತರನ್ನು ಎಳೆದೊಯ್ದು ಪೊಲೀಸರು ಥಳಿಸಿದ್ದರು. ಈಗ ಈ ಪ್ರಕರಣವು ರಾಜಕೀಯವಾಗಿಯೂ ತಿರುವು ಪಡೆದುಕೊಂಡಿದೆ.
ಪುತ್ತೂರಿನಲ್ಲಿ ಹಿಂದು ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ಎಸೆಗಿದ್ದಾರೆಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪೊಲೀಸರಿಂದ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಅನುಭವಿಸಿದ ಹಿಂದು ಕಾರ್ಯಕರ್ತರು ಹೊರ ಬಂದ ಮೇಲೆ ತಮಗಾದ ಗಾಯಗಳ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಅಲ್ಲದೆ, ಹಲ್ಲೆಗೊಳಗಾದ ಹಿಂದು ಕಾರ್ಯಕರ್ತ ಅವಿನಾಶ್ ದೂರಿನ ಹಿನ್ನೆಲೆಯಲ್ಲಿ ಪೊಲೀಸರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಎಫ್ಐಆರ್ ದಾಖಲು ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಒಬ್ಬ ಸಬ್ ಇನ್ಸ್‌ಪೆಕ್ಟರ್ ಹಾಗೂ ಒಬ್ಬ ಕಾನ್ಸ್‌ಟೇಬಲ್‌ನನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಇದನ್ನೂ ಓದಿ: Karnataka CM: ಜಾಲಿ ಮೂಡಲ್ಲಿ ಭಾವಿ ಸಿಎಂ: ಬೈಟ್ ಕೇಳಿದ್ದಕ್ಕೆ ಶಿಳ್ಳೆ ಹೊಡೆದ ಸಿದ್ದರಾಮಯ್ಯ
ಪುತ್ತೂರು ಗ್ರಾಮಾಂತರ ಸಬ್ ಇನ್ಸ್‌ಪೆಕ್ಟರ್ ಶ್ರೀನಾಥ ರೆಡ್ಡಿ ಹಾಗೂ ನಗರ ಠಾಣೆ ಕಾನ್ಸ್‌ಟೇಬಲ್‌ನನ್ನು ಅಮಾನತು ಮಾಡಲಾಗಿದೆ. ಮೇಲಧಿಕಾರಿಗಳಿಗೆ ಡಿವೈಎಸ್‌ಪಿ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದ್ದ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ವೀರಯ್ಯ ಹಿರೇಮಠ್ ಅವರನ್ನು ರಜೆಯ ಮೇಲೆ ಕಳುಹಿಸಲಾಗಿದೆ. ಬಂಟ್ವಾಳ ಉಪ ವಿಭಾಗ ಡಿವೈಎಸ್‌ಪಿ ನೇತೃತ್ವದಲ್ಲಿ ಪೊಲೀಸರ ವಿರುದ್ಧ ತನಿಖೆಗೆ ಆದೇಶ ನೀಡಲಾಗಿದೆ.
ರಾಜಕೀಯ ತಿರುವು
ಪುತ್ತೂರಿನಲ್ಲಿ ಈಗ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವು ರಾಜಕೀಯ ತಿರುವು ಪಡೆದುಕೊಂಡಿದೆ. ಒಂದು ಕಡೆ ಇದು ಹೊಸ ಸರ್ಕಾರದತ್ತ ಬೊಟ್ಟು ಮಾಡಿದರೆ, ಮತ್ತೊಂದೆಡೆ ಬಿಜೆಪಿ ನಾಯಕರನ್ನೇ ಟಾರ್ಗೆಟ್ ಮಾಡಿದೆ. ಆದರೆ, ಬ್ಯಾನರ್ ವಿಚಾರಕ್ಕೆ ಶುರುವಾಗಿರುವ ಈ ಗಲಾಟೆ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂಜಾವೇ ಪ್ರಮುಖರು
ಪುತ್ತೂರಿನ ಹಿಂದು ಜಾಗರಣಾ ವೇದಿಕೆ ಪ್ರಮುಖ ಯುವಕರು ಈಗ ಕೈ, ಕಾಲಿನ ಮೇಲೆ ಬಾಸುಂಡೆ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಳಿಕ ಪುತ್ತೂರು ಬಸ್ ನಿಲ್ದಾಣದಲ್ಲಿ ಅಳವಡಿಸಿದ ಬ್ಯಾನರ್ ಇವರ ಈ ಸ್ಥಿತಿಗೆ ಕಾರಣವಾಗಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರಿಗೆ ಶ್ರದ್ಧಾಂಜಲಿ ಎಂಬ ಬ್ಯಾನರ್ ಹಾಕಿ ಚಪ್ಪಲಿ ಹಾರ ಹಾಕಲಾಗಿತ್ತು. ಇದರ ಬಗ್ಗೆ ನಗರ ಸಭೆಯಿಂದ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ತನಿಖೆ ಆರಂಭಿಸಿದ ಪುತ್ತೂರು ಪೊಲೀಸರು ಒಂದಷ್ಟು ಯುವಕರನ್ನು ಹಿಡಿದು ತಂದು ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಿದ್ದರು.
ಬಿಜೆಪಿ ಬಂಡಾಯವೆದ್ದ ಅರುಣ್ ಪುತ್ತಿಲ ಬೆಂಬಲಿಗರಾಗಿದ್ದ ಇವರನ್ನು ಪೊಲೀಸರು ಹಿಗ್ಗಾಮುಗ್ಗ ಥಳಿಸಿದ್ದರು. ತಪ್ಪನ್ನು ಒಪ್ಪಿಕೊಳ್ಳುವಂತೆ ಒತ್ತಡ ಹಾಕಿ ಲಾಠಿಯಿಂದ ಬಾರಿಸಿದ್ದರು. ನಾವು ಹಿಂದು ಸಂಘಟನೆಯ ಕಾರ್ಯಕರ್ತರು ಹಾಗಂತ ಯಾವುದೇ ಪಕ್ಷದ ಪರ ನಿಂತಿರಲಿಲ್ಲ. ಹಿಂದುತ್ವದ ವಿಚಾರದಲ್ಲಿ ಹೋರಾಟ ಮಾಡಿದ್ದೇವೆ ನಿಜ. ಆದರೆ, ಬ್ಯಾನರ್ ವಿಚಾರದಲ್ಲಿ ಡಿವೈಎಸ್‌ಪಿ ಹಾಗೂ ಗ್ರಾಮಾಂತರ ಎಸ್ಐ ಹಾಗೂ ಸಿಬ್ಬಂದಿ ಹಲ್ಲೆ ನಡೆಸಿದ್ದಾಗಿ ಯುವಕರು ಆರೋಪಿಸಿದ್ದಾರೆ.
ಇದು ಅಂತಹ ಗಂಭೀರ ಪ್ರಕರಣವಾಗಿರಲಿಲ್ಲ. ಆದರೂ ಒತ್ತಡ ಹಾಕುವ ಮೂಲಕ ಯುವಕರನ್ನು ಠಾಣೆಗೆ ಕರೆತಂದು ದೌರ್ಜನ್ಯ ಎಸಗಲಾಗಿದೆ ಎಂದು ಹಿಂದು ಕಾರ್ಯಕರ್ತರು ಕಿಡಿಕಾರಿದ್ದಾರೆ. ಪುತ್ತೂರು ಡಿವೈಎಸ್‌ಪಿ ಹಾಗೂ ಪುತ್ತೂರು ಗ್ರಾಮಾಂತರ ಠಾಣೆಯ ಎಸ್‌ಐ ವಿರುದ್ಧ ಹಿಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಮೂವರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಖುದ್ದು ಪುತ್ತೂರು ಠಾಣೆಗೆ ಆಗಮಿಸಿದ ಎಸ್‌ಪಿ ವಿಕ್ರಮ್ ಅಮಾಟೆ ಅವರು, ಎಸ್ಐ ಶ್ರೀನಾಥ್ ರೆಡ್ಡಿ ಹಾಗೂ ಒಬ್ಬ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. ಡಿವೈಎಸ್ಪಿ ವೀರಯ್ಯ ಹಿರೇಮಠ್ ವಿರುದ್ಧ ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಪ್ರಕರಣದ ಸಂಪೂರ್ಣ ತನಿಖೆಯನ್ನು ಬಂಟ್ವಾಳ ಡಿವೈಎಸ್ಪಿಗೆ ವಹಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಎಸ್‌ಪಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Karnataka Election: 2-3 ತಿಂಗಳಲ್ಲಿ ಹೊಸ ರಾಜಕೀಯ ಬದಲಾವಣೆ ಆಗುತ್ತೆ: ಎಚ್‌ಡಿಕೆ ಸ್ಫೋಟಕ ಹೇಳಿಕೆ!
ಠಾಣೆಯಿಂದ ಬಿಡಿಸಿದ ಪುತ್ತಿಲ
ರಾಜಕೀಯ ತಿರುವು
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದು ಸಂಘಟನೆ ಕಾರ್ಯಕರ್ತರನ್ನು ಚಿಂತಕ ಚಕ್ರವರ್ತಿ ಸೂಲಿಬೆಲೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಒಂದು ಕಡೆ ಇದು ಕಾಂಗ್ರೆಸ್ ಕೃತ್ಯ ಎಂದು ಹರೀಶ್ ಪೂಂಜಾ ಹೇಳಿದ್ದರೆ, ಬಿಜೆಪಿ ನಾಯಕರಿಗೆ ಮುಖ ತೋರಿಸುವ ಯೋಗ್ಯತೆ ಇಲ್ಲ ಎಂದು ಸೂಲಿಬೆಲೆ ಕಿಡಿಕಾರಿದ್ದಾರೆ. ಆದರೆ, ಪೊಲೀಸರಿಗೆ ಒತ್ತಡ ಹಾಕಿಸಿ ಹಲ್ಲೆ ಮಾಡಿಸಿದ ಅಸಲಿ ಸೂತ್ರಧಾರ ಯಾರು ಎಂಬುದು ಹೊರಬರಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.