ಕೋಲಾರ: ಲೋಕಸಭಾ ಚುನಾವಣೆ ಆಕಾಂಕ್ಷಿಯಾಗಿದ್ದ ಶ್ರೀನಿವಾಸಪುರದ ಕಾಂಗ್ರೆಸ್ ಮುಖಂಡ ಕೌನ್ಸಿಲರ್ ಸೀನಪ್ಪ ಅಲಿಯಾಸ್ ಶ್ರೀನಿವಾಸ್ ಅ.23ರಂದು ಹಾಡಹಗಲೇ ಬರ್ಬರವಾಗಿ (Murder Case) ಹತ್ಯೆಯಾಗಿದ್ದಾರೆ. ಜಮೀನು ವಿಚಾರಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಎಡಿಜಿಪಿ ಹಿತೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿ, ಎಸ್‌ಪಿ ನಾರಾಯಣ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್, ಗೃಹ ಸಚಿವ ಪರಮೇಶ್ವರ್ ಅವರಿಗೂ ಶ್ರೀನಿವಾಸ್ ಆಪ್ತರಾಗಿದ್ದರು. ಶ್ರೀನಿವಾಸ್ ಸಾವಿನ ಸುದ್ದಿ ಕೇಳಿ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಗೃಹ ಸಚಿವ ಪರಮೇಶ್ವರ್ ಭೇಟಿ ನೀಡಿದರು. ಆಪ್ತ ಶ್ರೀನಿವಾಸ್ ಕುಟುಂಬಕ್ಕೆ ಸಾಂತ್ವನ ಹೇಳಿದರು. ಜತೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಭೇಟಿ ನೀಡಿ ಕಣ್ಣೀರು ಹಾಕಿದರು. ಶ್ರೀನಿವಾಸ್ ಅವರು ರಮೇಶ್ ಕುಮಾರ್‌ಗೆ ಬಲಗೈ ಬಂಟನಾಗಿದ್ದರು. ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಸಮೃದ್ಧಿ ಮಂಜುನಾಥ್, ಅನಿಲ್ ಕುಮಾರ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಇತ್ತ ಶ್ರೀನಿವಾಸ್ ಕೊಲೆ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆ ಮುಂಭಾಗ ದಲಿತ ಮುಖಂಡರು, ಅಭಿಮಾನಿಗಳು ಜಮಾಯಿಸಿದ್ದರು. ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿದರು. ಬಳಿಕ ಮಾತನಾಡಿದ ಪರಮೇಶ್ವರ್ ಮೃತ ಶ್ರೀನಿವಾಸ್ ಜಿ.ಪಂ ಅಧ್ಯಕ್ಷರಾಗಿ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಜನಮನ್ನಣೆ ಗಳಿಸಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಪೋಲಿಸರ ತಂಡ ತನಿಖೆ ಶುರು ಮಾಡಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಕೊಲೆಗೆ ಯಾವುದರ ಲಿಂಕ್ ಇದೆ ಎಂಬುದು ಈಗಲೇ ಹೇಳಲು ಆಗುವುದಿಲ್ಲ. ಶೀಘ್ರವೇ ಬಂಧಿಸಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.
ಇದನ್ನೂ ಓದಿ: Murder Case : ತಂದೆಯನ್ನೇ ಮಚ್ಚಿನಿಂದ ಹತ್ಯೆಗೈದ ಪಾಪಿ ಮಗ!
ಆರೋಪಿಗಳ ಪತ್ತೆಗೆ ನಾಲ್ಕು ತಂಡ ರಚನೆ
ಇತ್ತ ಘಟನಾ ಸ್ಥಳಕ್ಕೆ ಎಸ್‌ಪಿ ನಾರಾಯಣ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಆರೋಪಿಗಳ ಪತ್ತೆಗಾಗಿ ನಾಲ್ಕು ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದರು. ಪ್ರತ್ಯಕ್ಷದರ್ಶಿ ಮಾಹಿತಿ ಮೇರೆಗೆ ಕಾರ್ಯಾಚರಣೆ ಶುರು ಮಾಡಲಾಗಿದೆ.
ಸದ್ಯ ಪ್ರಾಥಮಿಕವಾಗಿ ಖಾಸಗಿ ವಿಚಾರಕ್ಕೆ ಪರಿಚಯಸ್ಥರು ಹಾಗೂ ಶ್ರೀನಿವಾಸಪುರ ಸ್ಥಳೀಯರಿಂದಲೇ ಕೊಲೆ ಮಾಡಿರುವ ಶಂಕೆಯೂ ವ್ಯಕ್ತವಾಗಿದೆ. ಜಮೀನು ವಿವಾದದ ಹಿನ್ನೆಲೆ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಎಂಟು ಜನರ ತಂಡವು ಬೈಕ್‌ಗಳಲ್ಲಿ ಬಂದು ಹತ್ಯೆ ಮಾಡಿ ಪರಾರಿ ಆಗಿದ್ದಾರೆ. ಶ್ರೀನಿವಾಸಪುರದ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಏನಿದು ಘಟನೆ?
ಶ್ರೀನಿವಾಸಪುರ ತಾಲೂಕಿನ ಕಾಂಗ್ರೆಸ್ ಮುಖಂಡ ಕೌನ್ಸಿಲರ್ ಸೀನಪ್ಪ ಅಲಿಯಾಸ್ ಶ್ರೀನಿವಾಸ್ ಎಂಬವರನ್ನು ಹಾಡಹಗಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಮುಳಬಾಗಿಲು ರಸ್ತೆಯ ನಿರ್ಮಾಣ ಹಂತದ ರೆಸ್ಟೋರೆಂಟ್ ಬಳಿ ಕುಳಿತಿದ್ದ ಶ್ರೀನಿವಾಸ್ ಬಳಿ ಬಂದ ಆರು ಮಂದಿ ಅಪರಿಚಿತರು ಮುಖಕ್ಕೆ ಏನನ್ನು ಸ್ಪೇ ಮಾಡಿದ್ದಾರೆ. ಕಣ್ಣುಗಳನ್ನು ಉಜ್ಜಿಕೊಳ್ಳಲು ಮುಂದಾದ ಶ್ರೀನಿವಾಸ್ ಮೇಲೆ ಏಕಾಏಕಿ ದಾಳಿ ಮಾಡಿ ಮನಬಂದಂತೆ ಹಲ್ಲೆ ನಡೆಸಿ ಪರಾರಿ ಆಗಿದ್ದಾರೆ. ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶ್ರೀನಿವಾಸ್ ಅವರನ್ನು ಕೂಡಲೇ ಆರ್‌ಜೆ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶ್ರೀವಾಸ್ ಮೃತಪಟ್ಟಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ