Site icon Vistara News

Pub Attack | ಮಂಗಳೂರಿನಲ್ಲಿ ಪಬ್‌ ದಾಳಿ ನಡೆದೇ ಇಲ್ಲವೆಂದ ಕಮಿಷನರ್, ಸಮರ್ಥಿಸಿಕೊಂಡ ಬಜರಂಗದಳ

Pub Attack Case

ಮಂಗಳೂರು: ನಗರದ ಪಬ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ತಡೆಯೊಡ್ಡಿದ (Pub Attack) ಪ್ರಕರಣ ಸಂಬಂಧಿಸಿ ಪ್ರತಿಕ್ರಿಯಿಸಿರುವ ಪೊಲೀಸ್‌ ಕಮಿಷನರ್, ಪಬ್ ಮೇಲೆ ಯಾವುದೇ ದಾಳಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಬಜರಂಗದಳ ಮಾತ್ರ ಪಾರ್ಟಿಗೆ ತಡೆಯೊಡ್ಡಿದ ಘಟನೆಯನ್ನು ಸಮರ್ಥಿಸಿಕೊಂಡಿದೆ.

ಬಜರಂಗದಳ ದಾಳಿ ನಡೆಸಿದ್ದ ನಗರದ ಖಾಸಗಿ ಪಬ್‌ ಸ್ಥಳ ಪರಿಶೀಲಿಸಿ ಮಂಗಳವಾರ ಮಾತನಾಡಿದ ಮಂಗಳೂರು ‌ಕಮಿಷನರ್ ಶಶಿಕುಮಾರ್‌, ಪಬ್‌ ಮೇಲೆ ದಾಳಿಯಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಇದು ಸತ್ಯಕ್ಕೆ ದೂರ, ಯಾವುದೇ ಗ್ರಾಹಕರು ಅಥವಾ ಯಾರ ಮೇಲೂ ದಾಳಿ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ ಪೂರೈಕೆ ಆರೋಪಿಸಿ ಬಜರಂಗದಳ ಸಂಘಟನೆ ಬಂದಿತ್ತು. ಆದರೆ, ಬೌನ್ಸರ್ ಬಳಿ ಹೇಳಿದಾಗ ಮ್ಯಾನೇಜರ್ ವಿದ್ಯಾರ್ಥಿಗಳ ಐಡಿ ಕೇಳಿದ್ದಾರೆ.‌ ಐಡಿ ಕೇಳಿದಾಗ ಕೆಲ ವಿದ್ಯಾರ್ಥಿಗಳು ಅಲ್ಲಿಂದ ಹೊರಗೆ ಹೋಗಿದ್ದಾರೆ.‌ ಆದರೆ, ಯಾವುದೇ ಸಂಘಟನೆ ಕಾರ್ಯಕರ್ತರು ಪಬ್‌ನ ಒಳಗೆ ಬಂದಿಲ್ಲ. ಯಾವುದೇ ನಿಯಮ ಉಲ್ಲಂಘನೆಯಾದರೂ ಸಂಬಂಧಿಸಿದ ಇಲಾಖೆಗೆ ಮಾಹಿತಿ ಕೊಡಬೇಕು. ಅದು ಬಿಟ್ಟು ಸಂಘಟನೆ ಹೆಸರಲ್ಲಿ ಈ ರೀತಿ ಪರಿಶೀಲನೆಗೆ ಅವಕಾಶ ಇಲ್ಲ.‌ ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ | Mangalore Pub Attack | ಅಂದು ಶ್ರೀರಾಮಸೇನೆ, ಇಂದು ಬಜರಂಗದಳ ಕಾರ್ಯಕರ್ತರಿಂದ ಪಬ್‌ ದಾಳಿ

ಕೆಲ ದಿನಗಳ ಹಿಂದಿನ ನಡೆದ ಕಾಲೇಜು ವಿದ್ಯಾರ್ಥಿಗಳ ಕಿಸ್ಸಿಂಗ್ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧ ಇಲ್ಲ. ಸಾಮಾಜಿಕ ತಾಣಗಳಲ್ಲಿ ಪ್ರಕರಣದ ಆರೋಪಿಗಳು ಮತ್ತು ಇಲ್ಲಿ ಪಾರ್ಟಿ ನಡೆಸುತ್ತಿದ್ದವರಿಗೆ ಲಿಂಕ್ ಕಲ್ಪಿಸಲಾಗಿದೆ. ಆದರೆ ಅದು ವಾಸ್ತವವಲ್ಲ, ರಾತ್ರಿ ವೇಳೆ ಅನೈತಿಕ ಘಟನೆ ಆಗಬಾರದು ಎಂದು ಪೊಲೀಸರು ಕ್ರಮ ಕೈಗೊಂಡಿದ್ದಾರೆ.‌ ಎಲ್ಲರೂ ವಿದ್ಯಾರ್ಥಿಗಳಾದ ಕಾರಣ ಪರಿಶೀಲಿಸಿ ಮಾಹಿತಿ ಪಡೆಯಲಾಗುತ್ತದೆ ಎಂದರು.

ಇನ್ನು ಡ್ರಗ್ ಮಾಫಿಯಾ ತಡೆಗೆ ನಾವು ಎಲ್ಲ ಕ್ರಮ ಕೈಗೊಂಡಿದ್ದೇವೆ.‌ ವಿವಿಧೆಡೆ ಎಂಡಿಎಂ ಸೇರಿ ಹಲವು ಡ್ರಗ್ ವಶಕ್ಕೆ ಪಡೆದಿದ್ದೇವೆ.‌ ಈ ಭಾಗ ಕೇರಳಕ್ಕೆ ಸಂಪರ್ಕ ಇರುವ ಕಾರಣ ಡ್ರಗ್ ಮೂವ್ಮೆಂಟ್‌ ಇದೆ‌. ಹೀಗಾಗಿ ಇದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಕೆಲಸ ನಡೆಯುತ್ತಿದೆ. ಆದರೆ ದೊಡ್ಡ ಮಟ್ಟದಲ್ಲಿ ಎಲ್ಲೂ ಡ್ರಗ್ಸ್ ಪ್ರಕರಣ ಕಂಡುಬಂದಿಲ್ಲ. ಪಬ್, ರೆಸ್ಟೋರೆಂಟ್, ಬಾರ್ ಎಲ್ಲೂ ಅಂತಹದ್ದು ವರದಿಯಾಗಿಲ್ಲ ಎಂದರು.

ಬೌನ್ಸರ್ ಹೇಳಿದ ಪ್ರಕಾರ ಸಂಘಟನೆ ಕಾರ್ಯಕರ್ತರು ಪಬ್ ಒಳಗೆ ಹೋಗಿಲ್ಲ. ಹೊರ ಭಾಗದಲ್ಲೇ ಮಾತನಾಡಿ ಹೋಗಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯಗಳು ಪರಿಶೀಲನೆ ನಡೆಸುತ್ತಿದ್ದು, ಕಾನೂನು ಬಾಹಿರ ಚಟುವಟಿಕೆ ನಡೆದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಪಬ್ ಮ್ಯಾನೇಜರ್ ಮತ್ತು ಬೌನ್ಸರ್ ಹೇಳಿಕೆ ಪಡೆಯಲಾಗಿದೆ. ಹೊರಗಿನ ವ್ಯಕ್ತಿಗಳು ಬಂದು ಈ ರೀತಿ ಮಾಡಲು ಅವಕಾಶ ಇಲ್ಲ. ಐಡಿ, ಲೈಸೆನ್ಸ್ ಕೇಳಲು ಬೇರೆಯವರಿಗೆ ಅವಕಾಶ ಇಲ್ಲ ಎಂದರು.

ಮಂಗಳೂರಿನ ಬಲ್ಮಠದ ರಿ-ಸೈಕಲ್ ದಿ ಲಾಂಜ್ ಪಬ್‌ನಲ್ಲಿ ಸೋಮವಾರ ರಾತ್ರಿ ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಂದ ಪಾರ್ಟಿ ನಡೆಯುತ್ತಿತ್ತು. ಕುಡಿದು ಯುವಕ-ಯುವತಿಯರು ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಲ್ಲಿಗೆ ತೆರಳಿದ್ದ ಬಜರಂಗದಳ ಕಾರ್ಯಕರ್ತರು ಪಾರ್ಟಿಗೆ ತಡೆಯೊಡ್ಡಿದ್ದರು.‌ ಬಳಿಕ ಬಜರಂಗದಳದ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದ್ದು, ಪಾರ್ಟಿ ಅರ್ಧದಲ್ಲೇ ನಿಲ್ಲಿಸಿ ಕಾಲೇಜು ವಿದ್ಯಾರ್ಥಿಗಳು ಕಾಲ್ಕಿತ್ತಿದ್ದರು.

ರಿಯಾಕ್ಷನ್ ‌ಮಾಡದೇ ಸುಮ್ಮನಿರಲ್ಲ ; ಪಬ್ ಪಾರ್ಟಿ ತಡೆ ಸಮರ್ಥಿಸಿದ ಬಜರಂಗದಳ!
ಮಂಗಳೂರಿನ ಪಬ್ ಪಾರ್ಟಿಗೆ ತಡೆಯೊಡ್ಡಿದ್ದ ಘಟನೆಯನ್ನು ಭಜರಂಗದಳ ಸಂಘಟನೆ ಸಮರ್ಥಿಸಿಕೊಂಡಿದ್ದು, ಇಂತಹ ಘಟನೆ ‌ನಡೆದಾಗ ನಾವು ರಿಯಾಕ್ಷನ್ ‌ಮಾಡದೇ ಸುಮ್ಮನಿರಲ್ಲ ಎಂದು ಭಜರಂಗದಳ ಜಿಲ್ಲಾ ಸಂಚಾಲಕ್ ಪುನೀತ್ ಅತ್ತಾವರ ಎಚ್ಚರಿಕೆ ನೀಡಿದ್ದಾರೆ.

ಅನ್ಯಾಯ ನಡೆದಾಗ ಸುಮ್ಮನೆ ಕೂರಲು ಬಜರಂಗದಳದಿಂದ ಸಾಧ್ಯವಿಲ್ಲ. ಇವತ್ತು ಇಂತಹ ಘಟನೆ ಕಾರಣದಿಂದ ಮಂಗಳೂರಿಗೆ ಕೆಟ್ಟ ಹೆಸರು ತರಲು ನಾವು ಬಿಡುವುದಿಲ್ಲ. ಅಲ್ಲಿ ಫೇರ್‌ವೆಲ್ ಪಾರ್ಟಿ ನಡೆಯುತ್ತಿತ್ತು. ನಾವು ಪಬ್ ಒಳಗೆ ಹೋಗಿಲ್ಲ. ಅಪ್ರಾಪ್ತ ವಯಸ್ಸಿನ ಮಕ್ಕಳು ಇದ್ದರು, ಇದನ್ನು ‌ತನಿಖೆ ಮಾಡಬೇಕು. ಪೊಲೀಸ್ ಇಲಾಖೆಯ ಡ್ರಗ್ಸ್ ಮುಕ್ತ ಹೋರಾಟಕ್ಕೆ ‌ನಮ್ಮ ಬೆಂಬಲ ಇದೆ.‌ ಪಬ್‌ ತೆರೆಯಲು ನಿಗದಿತ ಸಮಯ ಇರುತ್ತದೆ. ನಿಯಮ ಮೀರಿ ‌ಪಾರ್ಟಿ ಮಾಡಿದರೆ ಅದನ್ನು ‌ನಿಲ್ಲಿಸಲು ಬಜರಂಗದಳ ತಯಾರಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಾವು ಪಬ್ ಮೇಲೆ ಯಾವುದೇ ರೀತಿಯ ದಾಳಿ ನಡೆಸಿಲ್ಲ. ದಾಳಿ ನಡೆದಿದ್ದರೆ ಹಲ್ಲೆ, ದಾಂಧಲೆ ಹಾಗೂ ಅನಾಹುತ ಆಗುತ್ತಿತ್ತು. ನಮಗೆ ಬಂದ ಮಾಹಿತಿ ಪ್ರಕಾರ, ಇತ್ತೀಚೆಗೆ ಕಾಲೇಜು ಕಿಸ್ಸಿಂಗ್ ವಿಡಿಯೋ ಮಾಡಿದ್ದ ವಿದ್ಯಾರ್ಥಿಗಳೇ ಇದ್ದರು. ಅಪ್ರಾಪ್ತರು ಇದ್ದ ಕಾರಣ ನಮ್ಮ ಸಂಘಟನೆ ‌ಕಾರ್ಯಕರ್ತರು ಪಬ್‌ನವರ ಜತೆ ಮಾತನಾಡಿ ನಿಲ್ಲಿಸಿದ್ದಾರೆ.‌ ಪೊಲೀಸ್ ಇಲಾಖೆಗೆ ಮಾಹಿತಿ ಕೊಟ್ಟ ಬಳಿಕವೇ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ ಎಂದಿದ್ದಾರೆ.

ಪಬ್ ದಾಳಿ ಮಾಡುವ ಮನಸ್ಸು ಅವರಿಗೆ ಇರಲಿಲ್ಲ; ಶಾಸಕ ವೇದವ್ಯಾಸ ಕಾಮತ್

ಶಾಸಕ ವೇದವ್ಯಾಸ ಕಾಮತ್

ಪಬ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ತಡೆ ವಿಚಾರ ಸಂಬಂಧ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಪ್ರತಿಕ್ರಿಯೆ ನೀಡಿದ್ದು, ಪಬ್ ದಾಳಿ ಮಾಡುವ ಮನಸ್ಸು ಅವರಿಗೆ ಇರಲಿಲ್ಲ, ಅದನ್ನು ಸಂಘಟನೆ ‌ಮಾಡಿಲ್ಲ ಎಂದಿದ್ದಾರೆ. ಪೊಲೀಸ್ ಇಲಾಖೆ ಮೂಲಕ ಅಪ್ರಾಪ್ತ ವಯಸ್ಸಿನವರಿಗೆ ಬುದ್ಧಿ ಹೇಳಿದ್ದಾರೆ.

ಸಂಘಟನೆಯವರು ಈ ಮೂಲಕ ಪೊಲೀಸ್ ಇಲಾಖೆ ಜತೆ ಹೋಗಿದ್ದಾರೆ.‌ ವಿದ್ಯಾರ್ಥಿಗಳು ಯಾವತ್ತೂ ಮನೆಯವರ ಒಪ್ಪಿಗೆ ಜತೆ ಈ ಕೆಲಸ ಮಾಡಲ್ಲ. ಮನೆಯವರು ಸಂಘಟನೆಯವರ ಗಮನಕ್ಕೆ ತಂದಿದ್ದಾರೆ. ಲವ್ ಜಿಹಾದ್, ಡ್ರಗ್ ಚಟಕ್ಕೆ ಬಲಿಯಾಗೋ ವಾತಾವರಣ ಸೃಷ್ಟಿಯಾಗಬಾರದು. ವಿದ್ಯಾರ್ಥಿಗಳು ಈ ಬಗ್ಗೆ ಗಮನಹರಿಸಬೇಕು. ಯಾವುದೇ ಕಾನೂನು ಬಾಹಿರ ಚಟುವಟಿಕೆ ಆದಾಗ ಕಮಿಷನರ್‌ಗೆ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಭೇಟಿಯಾದ ವಿಎಚ್‌ಪಿ‌ ಮುಖಂಡರು, ಘಟನೆ ಸಂಬಂಧ ಶಾಸಕ ವೇದವ್ಯಾಸ ಕಾಮತ್‌ಗೆ ವಿವರಣೆ ನೀಡಿ, ನಿಗದಿತ ಸಮಯ ಮೀರಿ ತೆರೆದಿರುವ ಪಬ್‌ಗಳ ಮೇಲೆ ಕ್ರಮಕ್ಕೆ ಹಾಗೂ ಡ್ರಗ್ ದಂಧೆ ಮತ್ತು ಕಾಲೇಜು ವಿದ್ಯಾರ್ಥಿಗಳ ‌ಮೇಲೆ ಕಣ್ಣಿಡಲು ಮನವಿ ಮಾಡಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಾಮತ್‌ ಪ್ರತಿಕ್ರಿಯೆ ನೀಡಿದ್ದರು.

ಇದನ್ನೂ ಓದಿ | Kissing competition | ಮಂಗಳೂರು ಕಾಲೇಜೊಂದರ ವಿದ್ಯಾರ್ಥಿಗಳ ಹುಚ್ಚಾಟ; ಸುಮೋಟೋ ಕೇಸ್‌ ದಾಖಲು!

Exit mobile version