Site icon Vistara News

ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ದೂರು ನೀಡಿ; ಪೊಲೀಸ್‌ ಇಲಾಖೆ, ಬಿಬಿಎಂಪಿಯಿಂದ ವಿನೂತನ ವ್ಯವಸ್ಥೆ

QR codes

ಬೆಂಗಳೂರು: ಪೊಲೀಸ್‌ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿ ಮಾಡಲು ಹಿರಿಯ ಅಧಿಕಾರಿಗಳು ವಿನೂತನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅದೇ ರೀತಿ ಜನರ ಕುಂದು ಕೊರತೆಗಳನ್ನು ಆಲಿಸಲು ಬಿಬಿಎಂಪಿ ಕೂಡ ಆಡಳಿತದಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಇದೀಗ ಜನರಿಂದ ದೂರುಗಳು ಹಾಗೂ ಅಭಿಪ್ರಾಯ ಸಂಗ್ರಹಣೆ ಮಾಡಲು ʼಕ್ಯೂಆರ್‌ ಕೋಡ್‌ʼ ವ್ಯವಸ್ಥೆಯನ್ನು ಪೊಲೀಸ್‌ ಇಲಾಖೆ ಹಾಗೂ ಬಿಬಿಎಂಪಿ ಪರಿಚಯಿಸಿವೆ.

ರಾಜಧಾನಿಯ ಠಾಣೆಗಳಲ್ಲಿ ʼಲೋಕ ಸ್ಪಂದನʼ ಕ್ಯೂಆರ್‌ ಕೋಡ್‌

ಸಾರ್ವಜನಿಕರು ನೇರವಾಗಿ ಪೊಲೀಸ್‌ ಠಾಣೆಗೆ ಆಗಮಿಸಿ ದೂರು ನೀಡುವುದು ಕಡಿಮೆ. ಹೀಗಾಗಿ ಸಾರ್ವಜನಿಕರಿಂದ ದೂರುಗಳು ಹಾಗೂ ಮಾಹಿತಿ ಪಡೆಯಲು ʼಲೋಕ ಸ್ಪಂದನʼ ಎಂಬ ಕ್ಯೂಆರ್‌ ಕೋಡ್‌ ಆಧಾರಿತ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆ ವ್ಯವಸ್ಥೆಯನ್ನು ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಬೆಂಗಳೂರು ಪೊಲೀಸ್‌ ಆಯುಕ್ತ ಬಿ.ದಯಾನಂದ ಅವರು, ಕ್ಯೂಆರ್‌ ಕೋಡ್ ಆಧಾರಿತ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಯ ವ್ಯವಸ್ಥೆಯನ್ನು ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗಿದೆ. ಸಾರ್ವಜನಿಕರು ಈ ಮೂಲಕ ನಮ್ಮ ಸೇವೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಮತ್ತು ಸರಳವಾಗಿ ತಂತ್ರಜ್ಞಾನ ಉಪಯೋಗಿಸಿ ನೀಡಬಹುದಾಗಿದೆ. ಇದರಿಂದ ನಾವು ಪೊಲೀಸ್ ವ್ಯವಸ್ಥೆಯನ್ನು ಇನ್ನೂ ಉತ್ತಮಪಡಿಸಲು ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Online Gaming: ಡ್ರೀಮ್‌ 11, ಮೈ ಸರ್ಕಲ್‌ನಿಂದ ಯುವಕರ ಜೀವನ ಹಾಳು: ಪರಿಷತ್‌ನಲ್ಲಿ ಸರ್ಕಾರದ ಉತ್ತರ

ಕುಂದು ಕೊರತೆ ಆಲಿಸಲು ಬಿಬಿಎಂಪಿಯಿಂದಲೂ ಕ್ಯೂಆರ್‌ ಕೋಡ್‌ ವ್ಯವಸ್ಥೆ

ಪೊಲೀಸ್‌ ಇಲಾಖೆಯಂತೆ ಸಾರ್ವಜನಿಕರ ಕುಂದು ಕೊರತೆ ಆಲಿಸಲು ಬಿಬಿಎಂಪಿ ಕೂಡ ಕ್ಯೂಆರ್‌ ಕೋಡ್‌ ವ್ಯವಸ್ಥೆ ಮಾಡಿದೆ. ಇದರ ಭಾಗವಾಗಿ ಬಿಬಿಎಂಪಿ ದಕ್ಷಿಣ ವಲಯದ ಕೆಲ ರಸ್ತೆಗಳ ನಾಮಫಲಕಗಳ ಮೇಲೆ ಬಿಬಿಎಂಪಿ ವತಿಯಿಂದ ಕ್ಯೂಆರ್‌ ಕೋಡ್‌ ಸ್ಟಿಕ್ಕರ್ ಅಂಟಿಸಲಾಗಿದೆ.

ಇದನ್ನೂ ಓದಿ | Free Electricity : ಸರ್ಕಾರಿ ಶಾಲೆಗೂ 200 ಯುನಿಟ್‌ ಉಚಿತ ವಿದ್ಯುತ್!

ಈ ಹಿಂದೆ ರಸ್ತೆ, ನೀರು, ತ್ಯಾಜ್ಯ ವಿಲೇವಾರಿ ಸೇರಿ ಯಾವುದೇ ಮೂಲಸೌಕರ್ಯ ಸಮಸ್ಯೆಗೆ ಸಂಬಂಧಿಸಿದಂತೆ ನಾಗರಿಕರು ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಕರೆ ಮಾಡಬೇಕಾಗಿತ್ತು. ಆದರೆ, ಇದೀಗ ಜನರು, ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಜನಪ್ರತಿನಿಧಿಗಳು, ಗುತ್ತಿಗೆದಾರರು, ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದು ಶೀಘ್ರ ಪರಿಹರಿಸಿಕೊಳ್ಳಬಹುದಾಗಿದೆ.

ಪ್ರಾಯೋಗಿಕವಾಗಿ ಮೊದಲ ಬಾರಿ ಬಿಬಿಎಂಪಿ ದಕ್ಷಿಣ ವಲಯದಲ್ಲಿ ಕ್ಯೂಆರ್‌ ಕೋಡ್‌ ವ್ಯವಸ್ಥೆ ಪರಿಚಯಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ವಲಯಗಳಿಗೂ ಈ ತಂತ್ರಜ್ಞಾನ ವಿಸ್ತರಣೆ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.

Exit mobile version