ದಾವಣಗೆರೆ: ಕಳೆದ ಕೆಲವು ದಿನಗಳಿಂದ ಡೆಂಗ್ಯು ಕಾಯಿಲೆಯಿಂದ ಬಳಲುತ್ತಿದ್ದ ಇಲ್ಲಿನ ಪೊಲೀಸ್ ಇಲಾಖೆಯ ಲೇಡಿ ಸಿಂಗಂ ಖ್ಯಾತಿಯ 13 ವರ್ಷದ ತುಂಗಾ (Police Dog) ಶ್ವಾನವು ಮೃತಪಟ್ಟಿದೆ.
ಆ.18ರಿಂದ ತುಂಗಾ ಡೆಂಗ್ಯು ಜ್ವರದಿಂದ ಬಳಲುತ್ತಿತ್ತು. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಶುಕ್ರವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಆಗಸ್ಟ್ 15ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನದಂದು ಕೊನೆಯದಾಗಿ ತುಂಗಾ ಪ್ರದರ್ಶನ ನೀಡಿತ್ತು.
ಹಲವು ರಾಜ್ಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ತುಂಗಾ 70ಕ್ಕೂ ಹೆಚ್ಚು ಕೊಲೆ ಪ್ರಕರಣ, 35ಕ್ಕೂ ಹೆಚ್ಚು ಕಳ್ಳತನ, ದರೋಡೆ ಪ್ರಕರಣಗಳನ್ನು ಭೇದಿಸುವಲ್ಲಿ ಸಹಾಯ ಮಾಡಿತ್ತು. ಪೊಲೀಸರಿಗೆ ಕ್ಲಿಷ್ಟಕರವಾಗಿದ್ದ ಪ್ರಕರಣವನ್ನು ಸಹ ತುಂಗಾ ಭೇದಿಸಿತ್ತು. 12 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿತ್ತು. ಪೊಲೀಸ್ ಇಲಾಖೆಯಿಂದ ಶ್ವಾನ ತುಂಗಾಗೆ ಅಂತಿಮ ಗೌರವವನ್ನು ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಪೊಲೀಸರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ | ನಾಯಿ ತಪ್ಪಿಸಲು ಹೋಗಿ ಪಲ್ಟಿಯಾದ ಆಟೊ, ಮೂವರು ವಿದ್ಯಾರ್ಥಿಗಳಿಗೆ ಗಾಯ