ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಮತ್ತೆ ಪೊಲೀಸರ ರೈಫಲ್ ಸದ್ದು (Police firing) ಮಾಡಿದೆ. ಸೋಮವಾರ ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಒಬ್ಬನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಅವನನ್ನು ಬಂಧಿಸಿದ್ದಾರೆ. ರೌಡಿಶೀಟರ್ ಪ್ರವೀಣ್ ಅಲಿಯಾಸ್ ಮೋಟು ಎಂಬಾತನ ಕಾಲಿಗೆ ಗುಂಡು ಹಾರಿಸಲಾಗಿದೆ.
ಈತ ಕೆಲವು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆರೋಪಿಯಾಗಿದ್ದ. ಜತೆಗೆ ಸುಮಾರು ೧೫ ಕ್ರಿಮಿನಲ್ ಕೇಸ್‌ಗಳಿರುವ ರೌಡಿ ಶೀಟರ್.
ರೌಡಿಶೀಟರ್ ಪ್ರವೀಣ್ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶವೊಂದರಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಪಡೆದ ಪೊಲೀಸರು ಸಕಲ ರೀತಿಯಲ್ಲೂ ಸಜ್ಜಿತರಾಗಿ ಅಲ್ಲಿಗೆ ತೆರಳಿದ್ದರು. ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್ಐ ರಮೇಶ್ ಅಲ್ಲಿಗೆ ತೆರಳಿ ಶರಣಾಗುವಂತೆ ಸೂಚನೆ ನೀಡಿದರು. ಆದರೆ, ಪ್ರವೀಣ್ ಸೂಚನೆಯನ್ನು ಲೆಕ್ಕಿಸದೆ ಬಂಧಿಸಲು ಬಂದ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಕ್ರೈಂ ಪೊಲೀಸ್ ಸಿಬ್ಬಂದಿ ಶಿವರಾಜ್ ಮೇಲೆ ಹಲ್ಲೆ ನಡೆಸುತ್ತಿದ್ದಂತೆಯೇ ರಮೇಶ್ ಅವರು ಮೊದಲು ಒಂದು ಸುತ್ತು ಆಕಾಶಕ್ಕೆ ಗುಂಡು ಹಾರಿಸಿದರು. ಅದರೆ, ಆಗಲೂ ಆತ ತನ್ನ ಉದ್ಧಟತನವನ್ನು ಮುಂದುವರಿಸಿದಾಗ ಸಿಬ್ಬಂದಿಯ ರಕ್ಷಣೆಗಾಗಿ ಅವರು ಪ್ರವೀಣನ ಕಾಲಿಗೆ ಗುಂಡು ಹಾರಿಸಿದರು.
ಇದೀಗ ಗುಂಡೇಟು ತಿಂದ ಪ್ರವೀಣನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜತೆಗೆ ಪೊಲೀಸ್ ಸಿಬ್ಬಂದಿ ಶಿವರಾಜ್ ಅವರಿಗೂ ಚಿಕಿತ್ಸೆ ಕೊಡಿಸಲಾಗಿದೆ.
ಆರೋಗ್ಯ ವಿಚಾರಿಸಿದ
ಎಸ್‌ಪಿ ಮಿಥುನ್ ಕುಮಾರ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಸಿಬ್ಬಂದಿ ಶಿವರಾಜ್ ಆರೋಗ್ಯ ವಿಚಾರಣೆ ಮಾಡಿದರು. ಘಟನೆ ಬಗ್ಗೆ ಎಸ್ಪಿ ಮಾಹಿತಿ ಪಡೆದರು.
ದೂರು ಕೊಟ್ಟ ಮಹಿಳೆಯ ವಿರುದ್ಧ ಸೇಡಿಗಾಗಿ ಕಾರು ಸುಟ್ಟಿದ್ದ ಪ್ರವೀಣ
ಪ್ರವೀಣ್ ಕುಖ್ಯಾತ ರೌಡಿಯಾಗಿದ್ದು, ಆತನ ವಿರುದ್ಧ ವಿವಿಧ ಠಾಣೆಗಳ 15ಕ್ಕೂ ಹೆಚ್ಚು ಕೇಸುಗಳಿವೆ. ಕೊಲೆ ಯತ್ನ, ಜೀವ ಬೆದರಿಕೆಗಳೇ ಇವುಗಳಲ್ಲಿ ಪ್ರಮುಖ. ಇತ್ತೀಚೆಗೆ ದೊಡ್ಡ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಕಾರೊಂದನ್ನು ಸುಟ್ಟು ಹಾಕಲಾಗಿತ್ತು. ಇದರ ಹಿಂದೆ ಪ್ರವೀಣನ ಕೈವಾಡ ಇರುವುದು ಪೊಲೀಸರಿಗೆ ಗೊತ್ತಾಗಿತ್ತು.
ಮೂರು ತಿಂಗಳ ಹಿಂದೆ ಸಾರ್ವಜನಿಕವಾಗಿ ಮಹಿಳೆಯೊಬ್ಬರನ್ನು ಥಳಿಸಿದ್ದ ಪ್ರವೀಣ್ ಈ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬಂದಿದ್ದ. ಬಳಿಕ ಕೇಸ್ ವಾಪಸ್ ಪಡೆಯಲು ತಾಯಿ- ಮಗನಿಗೆ ಜೀವ ಬೆದರಿಕೆ ಹಾಕಿದ್ದ. ಆದರೆ, ಅವರು ಒಪ್ಪದೆ ಇದ್ದಾಗ ಸೇಡಿಗಾಗಿ ಮಹಿಳೆಯ ಮನೆಯ ಮುಂದೆ ನಿಂತಿದ್ದ ಹೊಸ ಕಾರನ್ನು ಸುಟ್ಟಿದ್ದ. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಮತ್ತೆ ದೂರು ದಾಖಲಾಗಿತ್ತು.
ಇದನ್ನೂ ಓದಿ | Attempt To Murder | ಶಿವಮೊಗ್ಗದಲ್ಲಿ ಮತ್ತೆ ಚೂರಿ ಇರಿತ; ಗಾಯಾಳು ಮೆಗ್ಗಾನ್ ಆಸ್ಪತ್ರೆಗೆ ದಾಖಲು