Site icon Vistara News

ಪಿಎಸ್ಐ ನೇಮಕಾತಿ ಅಕ್ರಮ: ಸ್ಟ್ರಾಂಗ್‌ ರೂಂನಲ್ಲೇ ಕಳ್ಳಾಟ!

ಪಿಎಸ್‌ಐ

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆಯ ತನಿಖೆ ಮುಂದುವರಿಯುತ್ತಿದ್ದಂತೆಯೇ ಒಂದೊಂದೇ ಅಕ್ರಮಗಳು ಹೊರ ಬೀಳುತ್ತಿದ್ದು, ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಂನಲ್ಲೇ ಅಕ್ರಮ ನಡೆಸಿರುವುದು ಈಗ ಬಯಲಾಗಿದೆ. ಸಿಐಡಿ ಕಚೇರಿ ಆವರಣದ ಅನೆಕ್ಸ್ ಬಿಲ್ಡಿಂಗ್ ಸ್ಟ್ರಾಂಗ್ ರೂಂನಲ್ಲಿ ಅಕ್ರಮ ನಡೆಸಿರುವುದು ತನಿಖೆಯ ವೇಳೆ ಸಾಬೀತಾಗಿದೆ ಎಂದು ಸಿಐಡಿಯ ಮೂಲಗಳು ತಿಳಿಸಿವೆ.

ಡಿವೈಎಸ್ಪಿ ಶಾಂತಕುಮಾರ್ ನೇತೃತ್ವದಲ್ಲೇ ಕೃತ್ಯ ನಡೆದಿದೆ ಎಂಬ ಮಾಹಿತಿ ಬಹಿರಂಗವಾಗಿದ್ದು, ನೇಮಕಾತಿ ವಿಭಾಗದ ನಾಲ್ವರು ಸಿಬ್ಬಂದಿಯೇ ಸ್ಟ್ರಾಂಗ್‌ ರೂಂನಲ್ಲಿ ಖಾಲಿ ಓಎಂಆರ್ ಶೀಟ್ ತುಂಬಿದ್ದರು ಎಂಬುದನ್ನು ತನಿಖಾ ತಂಡ ಬಯಲಿಗೆಳೆದಿದೆ.

ಕಳೆದ ಅಕ್ಟೋಬರ್ 3ರಂದು ಬೆಂಗಳೂರು ಸೇರಿ ರಾಜ್ಯದ 7 ಜಿಲ್ಲೆಗಳಲ್ಲಿನ 93 ಕೇಂದ್ರಗಳಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆ ನಡೆದಿತ್ತು. ಪರೀಕ್ಷೆಯಲ್ಲಿ ಅಕ್ರಮ ಬಯಲಾಗಿದ್ದರಿಂದ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್, ಎಫ್‌ಡಿಎ ಹರ್ಷ, ಸಿಬ್ಬಂದಿ ಶ್ರೀಧರ್, ಶ್ರೀನಿವಾಸ್ ಬಂಧಿತರಾಗಿದ್ದರು. ಪ್ರಕರಣ ಸಂಬಂಧ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಎಡಿಜಿಪಿ ಅಮೃತ್ ಪಾಲ್ ವಿಚಾರಣೆ ನಡೆಸಿದ್ದ ಸಿಐಡಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು.

ಓಎಂಅರ್ ಶೀಟ್ ಭರ್ತಿಯಾಗುತ್ತಿದ್ದಿದ್ದು ಹೇಗೆ ಗೊತ್ತಾ?
ಪರೀಕ್ಷಾ ಕೇಂದ್ರಗಳಿಂದ ಓಎಂಆರ್ ಶೀಟ್‌ಗಳು ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿನ ಪ್ಯಾಲೇಸ್ ರೋಡ್‌ನಲ್ಲಿರುವ ಸಿಐಡಿ ಕಚೇರಿ ಆವರಣದ ನೇಮಕಾತಿ ವಿಭಾಗಕ್ಕೆ ಬಂದಿದ್ದವು. ನೇಮಕಾತಿ ವಿಭಾಗದ ಡಿವೈಎಸ್‌ಪಿ ಬಳಿಯೇ ಸ್ಟ್ರಾಂಗ್ ರೂಂ ಕೀ ಇರುತ್ತಿತ್ತು. ಜತೆಗ ನಾಲ್ವರಿಗೆ ಮಾತ್ರ ಥಂಬ್ ಪ್ರೆಸ್ ಮಾಡಿ ಸ್ಟ್ರಾಂಗ್ ರೂಂಗೆ ಪ್ರವೇಶಿಸಲು ಅವಕಾಶವಿತ್ತು. ಹತ್ತಕ್ಕೂ ಹೆಚ್ಚು ವರ್ಷ ನೇಮಕಾತಿ ವಿಭಾಗದಲ್ಲೇ ಪಳಗಿದ್ದ ಅನುಭವಿ ಅಧಿಕಾರಿ ಬಂಧಿತ ಡಿವೈಎಸ್‌ಪಿ ಶಾಂತಕುಮಾರ್ ಅಂಡ್ ಟೀಂ ಈ ಅವಕಾಶ ಪಡೆದಿತ್ತು. ಇವರೇ ಸ್ಟ್ರಾಂಗ್‌ ರೂಂಗೆ ತೆರಳಿ ಖಾಲಿ ಓಎಂಆರ್ ಶೀಟ್‌ ತುಂಬಿದ್ದರು ಎನ್ನಲಾಗಿದೆ.

ಪರೀಕ್ಷೆಗೂ ಮುನ್ನವೇ ಅಭ್ಯರ್ಥಿಗಳೊಂದಿಗೆ ಡೀಲ್‌!
ನೇಮಕಾರಿ ಅಕ್ರಮದಲ್ಲಿ ಪರೀಕ್ಷೆಗೂ ಮುನ್ನ ಅಭ್ಯರ್ಥಿಗಳೊಂದಿಗೆ ಡೀಲ್‌ ನಡೆದಿದೆ. ಡೀಲ್ ಓಕೆ ಆಗುತ್ತಿದ್ದಂತೆ ಅಭ್ಯರ್ಥಿಗಳ ಹೆಸರು, ಪರೀಕ್ಷಾ ಕೇಂದ್ರ, ರಿಜಿಸ್ಟರ್ ನಂಬರ್ ಮತ್ತಿತರ ಮಾಹಿತಿ ಪಡೆಯಲಾಗುತ್ತಿತ್ತು. ಆ ಬಳಿಕ ಸ್ಟ್ರಾಂಗ್ ರೂಂ ಉಸ್ತುವಾರಿ ಹೊಂದಿದ್ದ ಡಿವೈಎಸ್‌ಪಿ ಶಾಂತ ಕುಮಾರ್ ಅವರಿಂದ ಸ್ಕೆಚ್ ರೂಪುಗೊಳ್ಳುತ್ತಿತ್ತು. ಇತರ ಅಧಿಕಾರಿಗಳು ಕಚೇರಿಗೆ ಬರುವ ಮುನ್ನವೇ ಬೆಳಗ್ಗೆ 5:30 ರಿಂದ 7:30 ರ ಒಳಗೆ ಕೃತ್ಯ ಎಸಗಲಾಗುತ್ತಿತ್ತು. ಬ್ಲೇಡ್ ಬಳಸಿ ಸೀಲ್ಡ್ ಕವರ್‌ಗಳನ್ನು ಕತ್ತರಿಸಿ ಓಎಂಆರ್ ಶೀಟ್‌ಗಳನ್ನು ಹೊರತೆಗೆಯುತ್ತಿದ್ದರು. ಈ‌ ಮೊದಲೆ ಅಭ್ಯರ್ಥಿಗಳಿಗೆ ಖಾಲಿ ಬಿಡಲು ಸೂಚನೆ ಕೊಡಲಾಗಿದ್ದರಿಂದ ಖಾಲಿ ಇದ್ದ ಓಎಂಆರ್ ಶೀಟ್‌ಗಳನ್ನು ಸರಿಯಾದ ಉತ್ತರಗಳಿಂದ ತುಂಬಿಸುತ್ತಿದ್ದರು. ಮತ್ತೆ ಅದೇ ಸೀಲ್ಡ್ ಕವರ್‌ಗೆ ಉತ್ತರ ತುಂಬಿದ ಓಎಂಆರ್ ಶೀಟ್‌ಗಳನ್ನು ಅನಮಾನ ಬರದಂತೆ ಇಡಲಾಗುತ್ತಿತ್ತು. ಡಿಜಿ ಕಚೇರಿಯಿಂದ ಮೌಲ್ಯಮಾಪನಕ್ಕೆ ಬರುತ್ತಿದ್ದ ಅಧಿಕಾರಿಗಳಿಗೆ ಗೊತ್ತಾಗದಂತೆ ಈ ಕಳ್ಳಾಟ ನಡೆಸಲಾಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ | ಪಿಎಸ್‌ಐ ನೇಮಕಾತಿ ಅಕ್ರಮ; ಮತ್ತಿಬ್ಬರು ಆರೋಪಿಗಳ ಬಂಧನ

Exit mobile version