Site icon Vistara News

Hoax Bomb Threat: ಹುಸಿ ಬಾಂಬ್ ಬೆದರಿಕೆ; ಠಾಣೆಗೆ ಬರುವಂತೆ ಯುವತಿಗೆ ನೋಟಿಸ್

Bomb threat

ಬೆಳಗಾವಿ: ಹುಸಿ ಬಾಂಬ್ ಬೆದರಿಕೆ ಕರೆ ಪ್ರಕರಣ (Hoax Bomb Threat) ಸಂಬಂಧ ಯುವತಿ ಶೃತಿ ಶೆಟ್ಟಿ ವಿಚಾರಣೆ ನಡೆಸಿರುವ ಬೆಂಗಳೂರಿನ ಪೊಲೀಸರು, ಹೆಚ್ಚಿನ ವಿಚಾರಣೆಗೆ ನ. 15ರಂದು ಪರಪ್ಪನ ಅಗ್ರಹಾರ ಠಾಣೆಗೆ ಆಗಮಿಸುವಂತೆ ನೋಟಿಸ್‌ ನೀಡಿದ್ದಾರೆ. ಬೆಂಗಳೂರಿನ ಟಿಸಿಎಸ್‌ ಕಂಪನಿಗೆ ಮಂಗಳವಾರ ಬೆಳಗ್ಗೆ ಹುಸಿ ಬಾಂಬ್ ಕರೆ ಬಂದಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಆ ಕರೆ ಮಾಡಿರುವುದು ಕಂಪನಿಯ ಮಾಜಿ ಮಹಿಳಾ ಉದ್ಯೋಗಿ ಎಂದು ತಿಳಿದುಬಂದಿದ್ದರಿಂದ ಪೊಲೀಸರು ವಿಚಾರಣೆಗಾಗಿ ನಗರಕ್ಕೆ ಆಗಮಿಸಿದ್ದರು.

ಯುವತಿ ಶೃತಿ ಶೆಟ್ಟಿಯ ವಿಚಾರಣೆ ನಡೆಸಿ ಪರಪ್ಪನ ಅಗ್ರಹಾರ ಪೊಲೀಸರು ನೋಟಿಸ್ ನೀಡಿದ್ದಾರೆ. ಬೆಳಗಾವಿಯ ಶಾಹು ನಗರದಲ್ಲಿ ಯುವತಿಯ ನಿವಾಸವಿದ್ದು, ಹುಸಿ ಬಾಂಬ್ ಕರೆ ಮಾಡಿರುವ ಕುರಿತು ಪೊಲೀಸರು, ಪ್ರಾಥಮಿಕ ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ | Udupi Murder : ಒಂದೇ ಕುಟುಂಬದ ನಾಲ್ವರನ್ನು ಕೊಂದವ ಅರೆಸ್ಟ್‌; ಕೊಲೆಗಾರ CISF ಸಿಬ್ಬಂದಿ

ಎರಡನೇ ಬಾರಿಗೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳದಿದ್ದಕ್ಕೆ ತಾಯಿಯ ಮೊಬೈಲ್‌ನಿಂದ ಹುಸಿ ಬಾಂಬ್ ಕರೆ ಮಾಡಿರುವುದಾಗಿ ಯುವತಿ ಹೇಳಿದ್ದಾಳೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಪರಪ್ಪನ ಅಗ್ರಹಾರ ಠಾಣೆಗೆ ಆಗಮಿಸುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಯುವತಿ ಶೃತಿ, ಆಕೆಯ ತಂದೆ-ತಾಯಿಗೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ.

ಏನಿದು ಘಟನೆ?

ಎಲೆಕ್ಟ್ರಾನಿಕ್ ಸಿಟಿಯ ಟಿ.ಸಿ.ಎಸ್ ಕಂಪನಿಯ ಬಿ.ಬ್ಲಾಕ್‌ನಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಕರೆಯೊಂದು (Bomb threat) ಮಂಗಳವಾರ ಬೆಳಗ್ಗೆ ಬಂದಿತ್ತು. ಹೀಗಾಗಿ ಕೆಲ ಹೊತ್ತು ಆತಂಕದ ವಾತಾವರಣವೇ ಸೃಷ್ಟಿಯಾಗಿತ್ತು. ಆದರೆ, ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದು, ಅದೇ ಕಂಪನಿಯ ಮಾಜಿ ಮಹಿಳಾ ಉದ್ಯೋಗಿ ಎಂದು ತಿಳಿದುಬಂದಿತ್ತು.

ಬೆಳಗಾವಿಯ ಶಾಹುನಗರ ನಿವಾಸಿ ಶೃತಿ ಶೆಟ್ಟಿ ಹುಸಿ ಬಾಂಬ್‌ ಕರೆ ಮಾಡಿದ್ದ ಯುವತಿ. ಶೃತಿ ಈ ಮೊದಲು ಟಿ.ಸಿ.ಎಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಉನ್ನತ ವ್ಯಾಸಂಗಕ್ಕಾಗಿ ಕಂಪನಿಯಿಂದ ಹೊರಬಂದಿದ್ದರು. ವ್ಯಾಸಂಗದ ನಂತರ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಕಂಪನಿ ನಿರಾಕರಿಸಿತ್ತು ಎನ್ನಲಾಗಿದೆ. ಹೀಗಾಗಿ ಕೋಪಗೊಂಡು ಕಂಪನಿಯ ಬಸ್ ಚಾಲಕನೊಬ್ಬನಿಗೆ ಕರೆ ಮಾಡಿ, ಕಂಪನಿಯ ‘ಬಿ’ ಬ್ಲಾಕ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದಳು. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.

ಬಾಂಬ್‌ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು, ಬಾಂಬ್ ನಿಷ್ಕ್ರಿಯದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಎಲ್ಲ ಕಡೆ ತಡಕಾಡಿದರೂ ಬಾಂಬ್‌ ಮಾತ್ರ ಸಿಕ್ಕಿರಲಿಲ್ಲ. ಬಳಿಕ ಇದೊಂದು ಹುಸಿ ಬಾಂಬ್‌ ಬೆದರಿಕೆ ಕರೆ ಎಂದು ತಿಳಿದುಬಂದಿತ್ತು. ನಂತರ ಬೆಳಗಾವಿ ಮೂಲದ ಯುವತಿ ಶೃತಿ ಶೆಟ್ಟಿಯೇ ಕರೆ ಮಾಡಿ ಬೆದರಿಕೆ ಹಾಕಿರುವುದು ತಿಳಿದುಬಂದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version