Site icon Vistara News

‌ಸೆಪ್ಟೆಂಬರ್‌ 18ಕ್ಕೆ ಪೊಲೀಸ್‌ ಸಾಹಿತ್ಯ ಸಂಭ್ರಮ; ಇಲ್ಲಿರಲಿದೆ ಕವನ ವಾಚನ, ರಸಪ್ರಸಂಗ, ಸಾಹಿತ್ಯಿಕ ಚರ್ಚೆ

police programme

ಬೆಂಗಳೂರು: ಪೊಲೀಸರು ಎಂದರೆ ನೆನಪಾಗುವುದು ಲಾಠಿ ಮತ್ತು ಖಾಕಿ. ಆದರೆ ಅವರು ಲಾಠಿ ಮಾತ್ರವಲ್ಲ, ಲೇಖನಿ ಹಿಡಿಯುವುದರಲ್ಲೂ ಆಸಕ್ತರು. ಇದೇ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ನೇತೃತ್ವದಲ್ಲಿ “ಪೊಲೀಸ್‌ ಸಾಹಿತ್ಯ ಸಂಭ್ರಮ” ಆಯೋಜನೆಗೊಂಡಿದೆ. ಸೆಪ್ಟೆಂಬರ್‌ ೧೮ರಂದು ನಡೆಯಲಿರುವ ಈ ಸಾಹಿತ್ಯ ಹಬ್ಬಕ್ಕೆ ಬುಕ್‌ ಬ್ರಹ್ಮ ಸಂಸ್ಥೆ ಮತ್ತು ಆರಕ್ಷಕರ ಲಹರಿ ಮಾಸಪತ್ರಿಕೆ ಕೈಜೋಡಿಸಿವೆ.

ಬೆಂಗಳೂರಿನ ನಿಮ್ಹಾನ್ಸ್‌ ಕನ್ವೆನ್ಷನ್‌ ಕೇಂದ್ರದಲ್ಲಿ ಬೆಳಗ್ಗೆ ೧೦ ಗಂಟೆಗೆ ಆರಂಭಗೊಳ್ಳಲಿರುವ ಈ ಕಾರ್ಯಕ್ರಮವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಲಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ ಸೂದ್‌, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸಿ.ಎಚ್.‌ ಪ್ರತಾಪ್‌ ರೆಡ್ಡಿ ಮತ್ತು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಬೆಳಗಿನ ಮೊದಲ ಗೋಷ್ಠಿಯನ್ನು ನಿವೃತ್ತ ಡಿಜಿಪಿ ಡಾ. ಡಿ.ವಿ. ಗುರುಪ್ರಸಾದ್‌ ಅವರ ಸಂಯೋಜಿಸಲಿದ್ದು, ʻಪೊಲೀಸ್‌ ಸಾಹಿತ್ಯ- ಒಂದು ಹಿನ್ನೋಟʼದ ಕುರಿತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌, ಆರಕ್ಷಕ ಲಹರಿ ಮಾಸಪತ್ರಿಕೆಯ ಸಂಪಾದಕ ಹಾಗೂ ನಿವೃತ್ತ ಡಿಜಿಪಿಐ ಡಾ. ಡಿ.ಸಿ. ರಾಜಪ್ಪ ಹಾಗೂ ರಾಜ್ಯ ಗುಪ್ತಚರ ವಿಭಾಗದ ಎಸ್‌ಪಿ ಎಸ್.ಪಿ. ಚೆನ್ನಬಸವಣ್ಣ ಅವರು ಮಾತನಾಡಲಿದ್ದಾರೆ.

ಇದನ್ನೂ ಓದಿ | Good News | 3,484 ಸಶಸ್ತ್ರ ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

ಎರಡನೇ ಗೋಷ್ಠಿಯನ್ನು ಲೇಖಕಿ ಪದ್ಮಿನಿ ನಾಗರಾಜ್‌ ಸಂಯೋಜಿಸಲಿದ್ದು, ʻಪೊಲೀಸ್‌ ಮಹಿಳೆಯರು ಮತ್ತು ಸಾಹಿತ್ಯʼ ಎಂಬ ವಿಷಯವಾಗಿ ಕೆಜಿಎಫ್‌ ಎಸ್‌ಪಿ ಧರಣಿದೇವಿ ಮಾಲಗತ್ತಿ, ಬೆಂಗಳೂರು (ಉತ್ತರ) ಸಂಚಾರ ವಿಭಾಗದ ಡಿಸಿಪಿ ಸವಿತಾ ಶ್ರೀನಿವಾಸ್‌ ಮತ್ತು ವಾಣಿಜ್ಯ ತೆರಿಗೆ ವಿಭಾಗದ ಎಸ್‌ಪಿ ಶೈಲಾ ನರಸಾಪುರ ಮಾತನಾಡಲಿದ್ದಾರೆ.

ನಿವೃತ್ತ ಐಜಿಪಿ ಗೋಪಾಲ್‌ ಹೊಸೂರ್‌ ಅವರ ಸಂಯೋಜನೆಯ ʻಪೊಲೀಸ್‌ ರಸಪ್ರಸಂಗʼ ಎನ್ನುವ ಮಧ್ಯಾಹ್ನದ ಗೋಷ್ಠಿಯಲ್ಲಿ, ನಿವೃತ್ತ ಎಸಿಪಿಗಳಾದ ಬಿ.ಬಿ. ಅಶೋಕ್‌ ಕುಮಾರ್‌ ಮತ್ತು ಬಿ.ಕೆ. ಶಿವರಾಂ, ನಿವೃತ್ತ ಡಿವೈಎಸ್‌ಪಿ ಜೆ.ಬಿ. ರಂಗಸ್ವಾಮಿ ಮತ್ತು ನಿವೃತ್ತ ಪೊಲೀಸ್‌ ನಿರೀಕ್ಷಕ ರಾಮ್‌ ಕೆ. ಹನುಮಂತಯ್ಯ ಪಾಲ್ಗೊಳ್ಳಲಿದ್ದಾರೆ.

ಹಿರಿಯ ಕವಿ ಬಿ.ಆರ್.‌ ಲಕ್ಷಣರಾವ್‌ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ ೩ಕ್ಕೆ ಕವಿಗೋಷ್ಠಿ ನಡೆಯಲಿದ್ದು, ೩೦ ಕವಿಗಳು ಕವನ ವಾಚಿಸಲಿದ್ದಾರೆ. ಸಂಜೆ ೫ಕ್ಕೆ ನಡೆಯುವ ಸಮಾರೋಪದಲ್ಲಿ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಶಂಕರ್‌ ಬಿದರಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಗುಲ್ವಾಡಿ ವೆಂಕಟರಾವ್‌ ಪ್ರಶಸ್ತಿ ಪ್ರದಾನವೂ ಜರುಗಲಿದೆ.

ಇದನ್ನೂ ಓದಿ | KSP Recruitment 2022 | ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗೆ ಏನು ಓದಿರಬೇಕು ಗೊತ್ತೇ?

Exit mobile version