ಚಿಕ್ಕಮಗಳೂರು: ಹೆಲ್ಮೆಟ್ ಹಾಕದ ಕಾರಣಕ್ಕೆ ಪ್ರೀತಮ್ ಎಂಬ ಯುವ ವಕೀಲನ ಮೇಲೆ ನಗರ ಠಾಣೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಪ್ರಕರಣದಲ್ಲಿ ಪಿಎಸ್‌ಐ, ಎಎಸ್‌ಐ, ಮುಖ್ಯ ಪೇದೆ ಹಾಗೂ ಮೂವರು ಪೇದೆಗಳು ಸೇರಿ ಒಟ್ಟು ಆರು ಪೊಲೀಸರನ್ನು ಎಸ್‌ಪಿ ವಿಕ್ರಮ್ ಅಮಟೆ ಅಮಾನತು ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಪೊಲೀಸ್ ಕುಟುಂಬಸ್ಥರು ಶನಿವಾರ (ಡಿ.2) ಅಹೋರಾತ್ರಿ ಪ್ರತಿಭಟನೆಯನ್ನು (Police Protest) ನಡೆಸಿದ್ದರು.
ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿಯೇ ಟಾರ್ಪಲ್ ಹಾಕಿ ಮಲಗಿ ಪ್ರತಿಭಟಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಂಗಳವಾರ ವರದಿ ನೀಡಲು ಸೂಚನೆ ನೀಡಿತ್ತು. ಹೀಗಾಗಿ ಆರು ಮಂದಿ ಪೊಲೀಸರನ್ನು ಬಂಧಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಇತರೆ ಸಿಬ್ಬಂದಿ ಶನಿವಾರ ಅಹೋರಾತ್ರಿ ಪ್ರತಿಭಟನೆಗೆ ಮುಂದಾದರು.
ನಗರದ 6 ಠಾಣೆಗಳ 300ಕ್ಕೂ ಹೆಚ್ಚು ಪೊಲೀಸರು ಕೆಲಸ ನಿಲ್ಲಿಸಿ ಪ್ರತಿಭಟನೆಗೆ ಆಗಮಿಸಿ, ನಾವ್ಯಾರು ಕೆಲಸ ಮಾಡಲ್ಲ. ಪೊಲೀಸರಿಗೆ ರಕ್ಷಣೆ ಇಲ್ಲ, ಪೊಲೀಸ್ ಕುಟುಂಬಗಳಿಗೆ ಅನ್ಯಾಯ ಆಗಿದೆ. ಒಂದು ವೇಳೆ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಸ್‌ಪಿಗೆ ಎಚ್ಚರಿಕೆ ನೀಡಿದ್ದರು. ಸಿಬ್ಬಂದಿ ಹೋರಾಟಕ್ಕೆ ಮಣಿದ ಹಿರಿಯ ಅಧಿಕಾರಿಗಳು ವಕೀಲರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದರು. ಇದಾದ ಬಳಿಕ ಪೊಲೀಸರು ಹಾಗೂ ಅವರ ಕುಟುಂಬಸ್ಥರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ತರೀಕೆರೆ ಡಿವೈಎಸ್‌ಪಿ ಹಾಲಮೂರ್ತಿ, ಡಿಸಿಆರ್‌ಬಿ ಡಿವೈಎಸ್‌ಪಿ ಶಿವಪ್ರಸಾದ್ ನಾಯ್ಕ್, ಸೆನ್ ಪಿಎಸ್ಐ ಗವಿರಾಜ್ ಹಾಗೂ ಎಸ್‌ಪಿ ವಿಕ್ರಂ ಅಮಟೆ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯು ಯಶಸ್ವಿಯಾಗಿದೆ. ಪೊಲೀಸ್ ಸಿಬ್ಬಂದಿ ಅಮಾನತ್ತು ವಾಪಸ್ಸು ಪಡೆಯಲು ಎಸ್‌ಪಿ ವಿಕ್ರಂ ಅಮಟೆ ಸಮಯ ಕೇಳಿದ್ದಕ್ಕೆ ಪ್ರತಿಭಟನೆಯನ್ನು ಕೈಬಿಟ್ಟರು. ಇದೇ ವೇಳೆ ವಶಕ್ಕೆ ಪಡೆದಿದ್ದ ಪೇದೆ ಗುರುಮೂರ್ತಿಯನ್ನು ಬಿಡುಗಡೆ ಮಾಡಲಾಯಿತು. ಜತೆಗೆ ವಕೀಲರ ಮೇಲೂ ನಾಲ್ಕು ಪ್ರತ್ಯೇಕ ಎಫ್ಐಆರ್ ದಾಖಲಾಯಿತು.
ಇದನ್ನೂ ಓದಿ: Atrocity on Lawyer: ವಕೀಲರ ಮೇಲಿನ ಹಲ್ಲೆಗೆ ಹೈಕೋರ್ಟ್ ಗರಂ; 6 ಪೊಲೀಸರ ಅಮಾನತು
ಕಪ್ಪಾಳಕ್ಕೆ ಹೊಡೆದಿದ್ದ ಪ್ರೀತಮ್!
ಸಿಬ್ಬಂದಿ ಹೋರಾಟಕ್ಕೆ ಮಣಿದ ಹಿರಿಯ ಅಧಿಕಾರಿಗಳು ವಕೀಲರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದರು. ಪೇದೆ ಗುರುಪ್ರಸಾದ್ ನೀಡಿದ ದೂರಿನ ಮೇಲೆ ವಕೀಲ ಪ್ರೀತಮ್ ಮೇಲೂ ಎಫ್‌ಐಆರ್ ದಾಖಲಾಗಿದೆ. ವಕೀಲ ಪ್ರೀತಮ್ ಗುರುಪ್ರಸಾದ್ ಕಪ್ಪಾಳಕ್ಕೆ ಹೊಡಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಮೂರು ಬೇಡಿಕೆ ಇಟ್ಟ ಪೊಲೀಸರು
- ಅಮಾನತು ಆದೇಶ ವಾಪಸ್ ಪಡೆಯಬೇಕು.
- ಪ್ರಕರಣ ದಾಖಲಾದ ಸಿಬ್ಬಂದಿ ಬಂಧನ ಮಾಡುವಂತಿಲ್ಲ.
- ಪ್ರಕರಣ ದಾಖಲಾದ ವಕೀಲರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು.
ಏನಿದು ಪ್ರಕರಣ?
ಹೆಲ್ಮೆಟ್ ಹಾಕದಿರುವ ವಿಚಾರಕ್ಕೆ ವಕೀಲರನ್ನು ಠಾಣೆಗೆ ಕರೆದೊಯ್ದು ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ಪೊಲೀಸರ ವಿರುದ್ಧ ಸಿಡಿದೆದ್ದ ರಾಜ್ಯ ವಕೀಲರ ಸಂಘ ಬೀದಿಗಿಳಿದು ಪ್ರತಿಭಟನೆ ನಡೆಸಿ ಖಾಕಿ ವಿರುದ್ಧ ಕೆಂಡ ಕಾರಿದ್ದರು. ಕಾಫಿನಾಡಲ್ಲಿ ವಕೀಲರ ಪ್ರತಿಭಟನೆ ಕ್ಷಣ ಕ್ಷಣಕ್ಕೂ ಕಾವು ಪಡೆಯುತ್ತಿದ್ದು, ಹಲ್ಲೆ ನಡೆಸಿದ ಪೊಲೀಸರನ್ನು ಬಂಧಿಸದಿದ್ದರೆ ಮುಂದೆ ಏನಾದರೂ ನಮಗೆ ಗೊತ್ತಿಲ್ಲ ಎಂದು ವಕೀಲರ ಪಡೆ ಖಡಕ್ ವಾರ್ನಿಂಗ್ ಕೊಟ್ಟಿತ್ತು.
ಅಂದಹಾಗೇ ಕಳೆದ ನವೆಂಬರ್ 30ರ ರಾತ್ರಿ 7 ಗಂಟೆ ಸುಮಾರಿಗೆ ಹೆಲ್ಮೆಟ್ ಧರಿಸಿದೆ ಹೋಗುತ್ತಿದ್ದ ವಕೀಲ ಪ್ರೀತಮ್‌ನನ್ನು ತಡೆದ ಪೊಲೀಸರು ಬೈಕ್‌ನಿಂದ ಕೆಳಗಿಳಿಸಿ ಕೀ ಕಿತ್ತುಕೊಂಡಿದ್ದರು. ಈ ವಿಚಾರ ದೊಡ್ಡದಾಗಿ ಬೈಕ್ ಸವಾರನನ್ನು ಠಾಣೆಗೆ ಕರೆದು ಕರೆದೊಯ್ದು ಹಿಗ್ಗಾ ಮುಗ್ಗ ಹಲ್ಲೆ ನಡೆಸಿರುವ ವಿಚಾರ ಇತರೆ ವಕೀಲರು ಸಿಟ್ಟಿಗೆಳುವಂತೆ ಮಾಡಿತ್ತು.
ದಂಡ ಹಾಕುವ ಬದಲು ಠಾಣೆಯಲ್ಲಿ ವಕೀಲ ಪ್ರೀತಮ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಚಿಕ್ಕಮಗಳೂರು ನಗರ ಠಾಣೆಯ ಮುಂದೆ ರಾತ್ರಿ ಇಡೀ ಪ್ರತಿಭಟನೆ ನಡೆಸಿ ಸುಖಾ ಸುಮ್ಮನೆ ಹಲ್ಲೆ ನಡೆಸಿದ ಪೊಲೀಸರನ್ನು ಬಂಧಿಸುವಂತೆ ವಕೀಲರು ಪಟ್ಟು ಹಿಡಿದಿದ್ದರು. ಚಿಕ್ಕಮಗಳೂರು ಎಸ್‌ಪಿ ವಿಕ್ರಂ ಅಮಟೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದರು ಪಟ್ಟು ಬಿಡದ ನೂರಾರು ವಕೀಲರು ಪೊಲೀಸರನ್ನು ಬಂಧಿಸಿಲೇ ಬೇಕೆಂದು ಒತ್ತಾಯ ಮಾಡಿದರು. ಬಳಿಕ ವಕೀಲರ ಪ್ರತಿಭಟನೆಗೆ ಮಣಿದ ಎಸ್‌ಪಿ ವಿಕ್ರಂ, ಓರ್ವ ಪಿಎಸ್ಐ, ಎಎಸ್‌ಐ ಸೇರಿ ಆರು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಕೋರ್ಟ್ ಕಲಾಪ ಬಹಿಷ್ಕರಿಸಿದ್ದ ವಕೀಲರು
ಇನ್ನೂ ಶುಕ್ರವಾರ ಜಿಲ್ಲಾ ನ್ಯಾಯಾಲಯದ ಮುಂದೆ ಪ್ರತಿಭಟನೆಗಳಿದ್ದ ನೂರಾರು ವಕೀಲರು, ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರತಿಭಟನೆಗೆ ಬಂದಿದ್ದ ವಕೀಲರು, ತಪ್ಪಿತಸ್ಥ ಪೊಲೀಸರನ್ನು ಬಂಧಿಸಬೇಕು, ಹಲ್ಲೆಗಳಾದ ವಕೀಲ ಪ್ರೀತಂಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.