ಕಾರವಾರ: ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯ ಮೇಲೆ ದೇಶದಾದ್ಯಂತ 5 ವರ್ಷಗಳ ಕಾಲ ನಿಷೇಧ ಹೇರಿದ ಬೆನ್ನಲ್ಲೇ ಉತ್ತರಕನ್ನಡ ಜಿಲ್ಲೆಯ ಶಿರಸಿ ಹಾಗೂ ಭಟ್ಕಳದಲ್ಲಿ ಪಿಎಫ್ಐ ಕಾರ್ಯಕರ್ತರ ಮನೆಗಳ ಮೇಲೆ ಪೊಲೀಸರು ಬುಧವಾರ ದಿಢೀರ್ ದಾಳಿ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶದ ಮೇರೆಗೆ ಶಿರಸಿಯಲ್ಲಿ ತಹಸೀಲ್ದಾರ್ ಶ್ರೀಧರ್ ಹಾಗೂ ಡಿವೈಎಸ್ಪಿ ರವಿ ಡಿ ನಾಯ್ಕ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಪಿಎಫ್‌ಐ ಮಾಜಿ ಜಿಲ್ಲಾಧ್ಯಕ್ಷ ಶಿರಸಿಯ ನೆಹರೂ ನಗರದ ನಿವಾಸಿ ಅಬ್ದುಲ್ ಗಫೂರ್ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಇದನ್ನೂ ಓದಿ | PFI BANNED | ಮಂಗಳೂರು, ಹಾಸನದಲ್ಲಿ ಪಿಎಫ್‌ಐ ಕಚೇರಿಗಳಿಗೆ ಬೀಗ, ಉಳಿದ ಕಡೆಯಲ್ಲೂ ಸೀಜ್‌ಗೆ ಪ್ಲ್ಯಾನ್
ಕೆಲ ದಿನಗಳ ಹಿಂದಷ್ಟೇ ಗಫೂರ್ ಮೇಲೆ ಸಾಮಾಜಿಕ ಶಾಂತಿ ಭಂಗ ಹಾಗೂ ಗುಂಪು ಸೇರಿಸುವಿಕೆ ಆರೋಪದ ಮೇಲೆ 107 ಕೇಸ್ ದಾಖಲಿಸಿ ಬಿಡುಗಡೆ ಮಾಡಲಾಗಿತ್ತು, ಇನ್ನು ಭಟ್ಕಳದ ಮದೀನಾ ಕಾಲನಿ ನಿವಾಸಿಗಳಾದ ಪಿಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಲ್ಮಾನ್ ಹಾಗೂ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಭಟ್ಕಳ ಎಸಿ ಮಮತಾದೇವಿ ಹಾಗೂ ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಪಿಎಫ್ಐ ಸಂಘಟನೆಗೆ ಸಂಬಂಧಿಸಿದ ದಾಖಲೆಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಭಟ್ಕಳ ನಗರ ಮತ್ತು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಪಿಎಫ್ಐ ಸದಸ್ಯರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳ ಏಕಾಏಕಿ ದಾಳಿಯಿಂದ ಪಿಎಫ್‌ಐ ಸದಸ್ಯರ ಕುಟುಂಬಸ್ಥರು ಗಲಾಟೆ ಸಹ ನಡೆಸುವ ಮೂಲಕ ದಾಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಎಸ್‌ಡಿಪಿಐ ಕಚೇರಿ, ಮುಖಂಡರ ಮನೆಗಳ ಮೇಲೆ ದಾಳಿ
ಶಿವಮೊಗ್ಗ ನಗರದ ಬೈಪಾಸ್ ರಸ್ತೆಯಲ್ಲಿರುವ ಎಸ್‌ಡಿಪಿಐ ಕಚೇರಿ ಹಾಗೂ ನಾಲ್ವರು ಎಸ್‌ಡಿಪಿಐ ಮುಖಂಡರ ಮನೆಗಳ ಮೇಲೆ ತಹಸೀಲ್ದಾರ್ ನಾಗರಾಜ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಮೊಬೈಲ್ ಸೇರಿದಂತೆ ಹಲವು ದಾಖಲಾತಿ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ | Murder Case | ಖಾರದ ಪುಡಿ ಎರಚಿ ಸರ್ಕಲ್ ಮಧ್ಯದಲ್ಲೇ ಅಕ್ಕಿ ವ್ಯಾಪಾರಿಯ ಬರ್ಬರ ಹತ್ಯೆ