ತುಮಕೂರು: ಮಧುಗಿರಿ ಬೆಟ್ಟದ (Madhugiri Hills) ಮಧ್ಯದಲ್ಲಿ ಸಿಲುಕಿಕೊಂಡಿದ್ದ ತಂದೆ-ಮಗನನ್ನು ಪೊಲೀಸರು ರಕ್ಷಣೆ ಮಾಡಿದ ಪ್ರಸಂಗ ವರದಿಯಾಗಿದೆ.
ಬೆಂಗಳೂರಿನ ಉದ್ಯಮಿ ಅರ್ಜುನ್ ರೆಡ್ಡಿ ಎಂಬುವವರು ತಮ್ಮ ಮಗ ತರುಣ್ ರೆಡ್ಡಿ ಜತೆ ಮಧುಗಿರಿ ಬೆಟ್ಟಕ್ಕೆ ಚಾರಣಕ್ಕಾಗಿ ಆಗಮಿಸಿದ್ದರು. ಈ ವೇಳೆ ಬೆಟ್ಟದಿಂದ ಇಳಿಯುವಾಗ ಮಳೆ ಬಂದಿದ್ದರಿಂದ ಕಾಲು ಜಾರಿದೆ. ಇದರಿಂದ ಹೆದರಿದ ತಂದೆ-ಮಗ ಬೆಟ್ಟದ ಕಿರಿದಾದ ರಸ್ತೆಯಲ್ಲಿ ಇಳಿಯಲು ಹಿಂಜರಿದಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಬೆಟ್ಟದಿಂದ ಇಳಿಸುವಂತೆ ಮನವಿ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ತಂದೆ-ಮಗನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಏನಿದು ಪ್ರಕರಣ?
ತುಮಕೂರಿನಲ್ಲಿರುವ ಪ್ರಸಿದ್ಧ ಮಧುಗಿರಿ ಬೆಟ್ಟಕ್ಕೆ ಬೆಂಗಳೂರಿನಿಂದ ಸಾಕಷ್ಟು ಜನರು ಆಗಮಿಸುತ್ತಾರೆ. ಅದರಂತೆ ಉದ್ಯಮಿಯಾದ ಅರ್ಜುನ್ ರೆಡ್ಡಿ ಮತ್ತು ಮಗ ತರುಣ್ ರೆಡ್ಡಿ ಕೂಡ ಸೋಮವಾರ (ಜು.18) ಆಗಮಿಸಿದ್ದರು. ಬೆಟ್ಟ ಹತ್ತುವಾಗ ಬಹಳ ಉತ್ಸಾಹದಿಂದ ಹತ್ತಿದ್ದಾರೆ. ಆದರೆ, ಬೆಟ್ಟದಿಂದ ಇಳಿಯುವ ಹೊತ್ತಿಗೆ ಸಣ್ಣದಾಗಿ ಮಳೆ ಸುರಿದಿದೆ. ಹೀಗಾಗಿ ಬೆಟ್ಟದಲ್ಲಿನ ಬಂಡೆಕಲ್ಲುಗಳು ಸೇರಿದಂತೆ ಕಿರಿದಾದ ಸ್ಥಳಗಳಲ್ಲಿ ಇಳಿಯುವಾಗ ತಂದೆ-ಮಗ ಇಬ್ಬರಿಗೂ ಕಾಲು ಜಾರಿದೆ. ಇದರಿಂದ ಇಬ್ಬರೂ ಭಯಗೊಂಡಿದ್ದಾರೆ. ಇನ್ನು ಒಂದು ಹೆಜ್ಜೆಯನ್ನಿಡಲೂ ಸಾಧ್ಯವಿಲ್ಲ ಎಂದು ಭಾವಿಸಿದ್ದಾರೆ. ಅಲ್ಲಿಯೇ ಹೆದರಿ ನಿಂತವರಿಗೆ ಕೊನೆಗೆ ಪೊಲೀಸರ ರಕ್ಷಣೆ ಪಡೆಯುವ ಉಪಾಯ ಹೊಳೆದಿದೆ. ಹಾಗಾಗಿ ಅರ್ಜುನ್ ರೆಡ್ಡಿ ಕೂಡಲೇ ನೆರವಿಗಾಗಿ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಸಹಾಯ ಕೋರಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವವರೆಗೂ ತಮ್ಮ ಮಗನ ಜತೆ ಬೆಟ್ಟದ ಮೇಲೆಯೇ ಕುಳಿತಿದ್ದಾರೆ. ನಂತರ ಪೊಲೀಸರು ಬಂದು ಇಬ್ಬರನ್ನು ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.