Site icon Vistara News

Yakshagana Performance : ಕುಂದಾಪುರದಲ್ಲಿ ಮಕ್ಕಳ ಯಕ್ಷಗಾನ ಪ್ರದರ್ಶನ ತಡೆದ ಪೊಲೀಸ್‌!

children yakshagana in kundapura

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಹೇರಿಕುದ್ರು ಎಂಬಲ್ಲಿ ಮಕ್ಕಳ ಯಕ್ಷಗಾನ ಪ್ರದರ್ಶನ (Yakshagana Performance) ನಡೆಯುತ್ತಿತ್ತು. ಮಕ್ಕಳು ಉತ್ಸಾಹದಿಂದ ಪ್ರದರ್ಶನ (Childrens Performance) ನೀಡುತ್ತಿದ್ದರೆ, ಪ್ರೇಕ್ಷಕರು ಸಹ ಅಷ್ಟೇ ಆಸ್ಥೆಯಿಂದ ವೀಕ್ಷಿಸುತ್ತಿದ್ದರು. ಆಗ ಒಮ್ಮೆಲೆ ಮೈಕ್‌ನಲ್ಲಿ ಕಾರ್ಯಕ್ರಮ ಆಯೋಜಕರ ಧ್ವನಿ ಕೇಳಿ ಬಂತು. ಈ ಯಕ್ಷಗಾನವನ್ನು ಅರ್ಧಕ್ಕೆ ನಿಲ್ಲಿಸಲಾಗುತ್ತಿದೆ. ಪೊಲೀಸರು ಬಂದು ಪ್ರದರ್ಶನವನ್ನು ಸ್ಥಗಿತಗೊಳಿಸುವಂತೆ ಹೇಳುತ್ತಿದ್ದಾರೆ. ಹಾಗಾಗಿ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ. ಆಗ ರಂಗದ ಮೇಲಿದ್ದ ಮಕ್ಕಳ ಮುಖ ಪೆಚ್ಚಾಗಿದ್ದು, ಅಲ್ಲಿಂದ ನಿರ್ಗಮಿಸಿದರು.

ಹೇರಿಕುದ್ರು ಎಂಬಲ್ಲಿ ಈ ಪ್ರಕರಣ ನಡೆದಿದೆ. ಮಕ್ಕಳ ಯಕ್ಷಗಾನದ ಬಗ್ಗೆ ದೂರೊಂದು ಬಂದಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಂದು ಪ್ರದರ್ಶನವನ್ನು ಸ್ಥಗಿತಗೊಳಿಸಿದ್ದಾರೆ. ಈ ವಿಡಿಯೊ ಈಗ ಸಖತ್‌ ವೈರಲ್ (Video Viral) ಆಗಿದೆ.

ಇದು 15 ವರ್ಷಗಳ ಒಳಗಿನ ಮಕ್ಕಳ ಯಕ್ಷಗಾನ ಪ್ರದರ್ಶನವಾಗಿತ್ತು. ಮಹಾಬಲ ಹೇರಿಕುದ್ರು ಎಂಬುವವರು ಐದು ವರ್ಷಗಳಿಂದ ಮಕ್ಕಳ ತಂಡವನ್ನು ಕಟ್ಟಿಕೊಂಡು ಯಕ್ಷಗಾನ ಮಾಡಿಸುತ್ತಾ ಬಂದಿದ್ದಾರೆ. ಸ್ಥಳೀಯ ಹವ್ಯಾಸಿ ತಂಡಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಇವರು. ನವೆಂಬರ್ ತಿಂಗಳಲ್ಲಿ 10 ದಿವಸ ದಿನಕ್ಕೊಂದರಂತೆ ಹತ್ತು ತಂಡಗಳ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿಕೊಂಡು ಬಂದಿದ್ದಾರೆ. ಶನಿವಾರ ಹೇರಿಕುದ್ರುವಿನಲ್ಲಿ ಮಕ್ಕಳಿಂದ ಪ್ರಸಂಗವೊಂದರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಅದಕ್ಕೆ ಅರ್ಧದಲ್ಲೇ ವಿಘ್ನ ಎದುರಾಗಿ ಸ್ಥಗಿತಗೊಂಡಿದೆ. ಇದರಿಂದ ಆಯೋಜಕ ಮಹಾಬಲ ಪೂಜಾರಿ ಸಿಟ್ಟಾಗಿ, ಮಕ್ಕಳ ಯಕ್ಷಗಾನವನ್ನು ಅರ್ಧದಲ್ಲಿಯೇ ಮೊಟಕುಗೊಳಿಸುತ್ತಿದ್ದೇವೆ. ಇದಕ್ಕೆ ಉದಯ ಪೂಜಾರಿ ಎಂಬುವವರೇ ಕಾರಣ. ನಾಳೆ ಪ್ರದರ್ಶನಕ್ಕೆ ಒಂದು ಗಂಟೆ ಹೆಚ್ಚಿಗೆ ಸಮಯವನ್ನು ಕೇಳುವೆ. ಒಂದು ವೇಳೆ ಸಮಯ ಕೊಡದಿದ್ದರೆ ಪ್ರದರ್ಶನವನ್ನು ನಿಲ್ಲಿಸುವುದು ಅನಿವಾರ್ಯ” ಎಂದು ಅಸಮಾಧಾನವನ್ನು ಮೈಕ್‌ ಮೂಲಕ ಹೊರಹಾಕಿದ್ದರು.

ಏಕೆ ದೂರು ನೀಡಲಾಗಿದೆ?

ಆನಗಳ್ಳಿ ಗ್ರಾಮ ಪಂಚಾಯತ್ ಸದಸ್ಯ ಎಚ್. ಉದಯ ಪೂಜಾರಿ ಎಂಬುವವರು ದೂರು ನೀಡಿದ್ದಾರೆ. ಇದಕ್ಕೆ ಕಾರಣ, ಮಕ್ಕಳ ಯಕ್ಷಗಾನ ಎನ್ನುವುದಕ್ಕಿಂತ ಪ್ರದರ್ಶನವಾಗುತ್ತಿರುವ ಕಟ್ಟಡದ್ದು ಎಂದು ಹೇಳಲಾಗುತ್ತಿದೆ. ಈ ಸಂಬಂಧ ಉದಯ ಪೂಜಾರಿ ಅವರು ಯಕ್ಷಗಾನ ಆಯೋಜಕ ಮಹಾಬಲ ಪೂಜಾರಿ ಅವರಿಗೆ ಗ್ರಾಮ ಪಂಚಾಯಿತಿ ನೀಡಿದ್ದ ತಿಳಿವಳಿಕೆ ಪತ್ರವನ್ನೂ ನೀಡಿದ್ದಾರೆ ಎಂದು ಹೇಳಲಾಗಿದೆ.

ಅಕ್ರಮ ಕಟ್ಟಡದಲ್ಲಿ ಪ್ರದರ್ಶನ?

ಮಹಾಬಲ ಪೂಜಾರಿ ಎಂಬುವವರು ಕುಂದಾಪುರ ತಾಲೂಕು ಆನಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೇರಿಕುದ್ರು ಮಾನಸ ಮಂದಿರ ಎಂಬ ಕಟ್ಟಡವನ್ನು ಅಕ್ರಮವಾಗಿ ನಿರ್ಮಾಣ ಮಾಡಿದ್ದಾರೆ. ಆ ಕಟ್ಟಡಕ್ಕೆ ನೀರಿನ ಸಂಪರ್ಕವನ್ನೂ ಅಕ್ರಮವಾಗಿ ಪಡೆದುಕೊಂಡಿದ್ದು, ಅಲ್ಲಿ ಲಾಭದಾಯಕ ವ್ಯವಹಾರ ನಡೆಸಲಾಗುತ್ತಿದೆ ಎಂದು ಉದಯ್‌ ಪೂಜಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನೀರಿನ ಸಂಪರ್ಕವನ್ನು ಈಗಾಗಲೇ ಕಡಿತಗೊಳಿಸಲಾಗಿದೆ. ಇದಕ್ಕೆ ದಂಡವನ್ನೂ ಹಾಕಲಾಗಿದ್ದು, ಗ್ರಾಮ ಪಂಚಾಯಿತಿಗೆ ಈವರೆಗೂ ಪಾವತಿ ಮಾಡಲಾಗಿಲ್ಲ. ಕಟ್ಟಡದ ಪರವಾನಗಿ ಸಂಬಂಧ ದಾಖಲೆ ನೀಡಬೇಕು, ದಂಡದ ಹಣ ಪಾವತಿಸಬೇಕು, ಲಾಭದಾಯಕ ವ್ಯವಹಾರ ನಡೆಸಬಾರದು. ಜತೆಗೆ ಆ ಕಟ್ಟಡದಲ್ಲಿ ಯಾವುದೇ ಕಾರ್ಯಕ್ರಮ ನಡೆಸಬಾರದು. ಈ ಕುರಿತು ಕ್ರಮ ಕೈಗೊಳ್ಳಿ ಎಂದು ಉದಯ ಪೂಜಾರಿ ಅವರು ಗ್ರಾಮ ಪಂಚಾಯತ್ ಸಭೆಯಲ್ಲಿ ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯ ಗ್ರಾಮ ಪಂಚಾಯಿತಿಯಿಂದ ಮಹಾಬಲ ಪೂಜಾರಿ ಅವರಿಗೆ ನ. 2ರಂದು ತಿಳಿವಳಿಕೆ ಪತ್ರ ನೀಡಿ, ಮೂರು ದಿನಗಳ ಒಳಗೆ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿತ್ತು.

ಇದನ್ನೂ ಓದಿ: Dalit CM : ಮತ್ತೆ ಕೇಳಿ ಬಂದ ದಲಿತ ಸಿಎಂ ಕೂಗು; ಸತೀಶ್‌ ಜಾರಕಿಹೊಳಿ ಪರ ಪ್ರಸನ್ನಾನಂದ ಸ್ವಾಮೀಜಿ ವಕಾಲತು

ಈ ಕಾರಣದಿಂದ ಉದಯ್‌ ಪೂಜಾರಿ ಅವರು ದೂರು ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ, ಮಕ್ಕಳ ಪ್ರದರ್ಶನ ಇದಾಗಿದ್ದರಿಂದ ಇದಕ್ಕೆ ಅಡ್ಡಿಪಡಿಸಿರುವುದು ತಪ್ಪು ಎಂಬ ರೀತಿಯಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.

Exit mobile version