ಬೆಂಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ (Amrit Mahotsav) ಆ.15ರಂದು ಬೆಂಗಳೂರಿನಲ್ಲಿ ಸೋಮವಾರ ಸಾಲು ಸಾಲು ಕಾರ್ಯಕ್ರಮಗಳು ನಡೆಯಲಿವೆ. ಪ್ರಮುಖವಾಗಿ ಮಾಣೆಕ್ ಶಾ ಪರೇಡ್ ಗ್ರೌಂಡ್, ವಿವಾದಿತ ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ, ಕಾಂಗ್ರೆಸ್ ಸ್ವಾಂತಂತ್ರ್ಯ ನಡಿಗೆ ಹಾಗೂ ಬಿಜೆಪಿ ಕಾರ್ಯಕ್ರಮಗಳು ನಡೆಯುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಅಭೂತಪೂರ್ವ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಡ್ರೋನ್ ಕ್ಯಾಮೆರಾ ಮೂಲಕ ಪ್ರಮುಖ ಪ್ರದೇಶಗಳಲ್ಲಿ ನಿಗಾ ಇಡಲಾಗಿದೆ.
ಪ್ರತಿ ವರ್ಷ ಮಾಣೆಕ್ ಶಾ ಪರೇಡ್ ಗ್ರೌಂಡ್ ಭದ್ರತೆಗಾಗಿ ಸುಮಾರು 2 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆಯಾಗುತ್ತಿತ್ತು. ಆದರೆ ಸೋಮವಾರ ಹೆಚ್ಚು ಕಡಿಮೆ ಐದು ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಗಸ್ಟ್ 15ರ ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗ್ಗೆ 8.45ಕ್ಕೆ ಮುಖ್ಯಮಂತ್ರಿ ಮೈದಾನಕ್ಕೆ ಆಗಮಿಸಲಿದ್ದು, 9 ಗಂಟೆಗೆ ಧ್ವಜಾರೋಹಣ ಮಾಡಲಿದ್ದಾರೆ.
ಮಾಣಿಕ್ ಶಾ ಪರೇಡ್ ಗ್ರೌಂಡ್‌ಗೆ ಸುಮಾರು 3 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಒಬ್ಬ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 10 ಡಿಸಿಪಿಗಳು, 19 ಎಸಿಪಿಗಳು, 50 ಇನ್‌ಸ್ಪೆಕ್ಟರ್, ಪಿಎಸ್‌ಐ 100, ಮಹಿಳಾ ಪಿಎಸ್‌ಐ 15, ಎಎಸ್‌ಐ 80 ಕಾನ್‌ಸ್ಟೇಬಲ್ 650, ಗಸ್ತು ಪೊಲೀಸ್ 150, ಕೆಎಸ್‌ಆರ್‌ಪಿ 10 ತುಕಡಿ, ಕ್ಯುಆರ್‌ಟಿ 1, ಡಿ ಸ್ವ್ಯಾಟ್ 1, ಆರ್‌ಎಎಫ್ 1 ಪಡೆಗಳು ಗ್ರೌಂಡ್ ಬಳಿ ಭದ್ರತೆ ಒದಗಿಸಲಿದೆ.
ಇದನ್ನೂ ಓದಿ | Amritha JOSH! ತಂದೆ ಆಸೆ ಈಡೇರಿಸಲು ಬೈಕಲ್ಲಿ ದೇಶ ಸುತ್ತಿದ ಮಗಳು, 5 ತಿಂಗಳಲ್ಲಿ 23,000 ಕಿ.ಮೀ ಪ್ರಯಾಣ
ಕಾಲ್ನಡಿಗೆ ಜಾಥಾ ಭದ್ರತೆ ಡಿಸಿಪಿಗಳ ಹೆಗಲಿಗೆ
ಕಾಂಗ್ರೆಸ್ ಕಾಲ್ನಡಿಗೆ ಜಾಥಾದ ಭದ್ರತೆಯನ್ನು ಡಿಸಿಪಿಗಳಿಗೆ ವಹಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ಶಾಂತಿ ನೋಡಿಕೊಳ್ಳುವ ಜವಾಬ್ದಾರಿ ಡಿಸಿಪಿಗಳಿಗಿದೆ. ಇನ್ನು ಜಾಥಾಗೆ ನಾಲ್ವರು ಡಿಸಿಪಿಗಳು, ಎಸಿಪಿಗಳು 15, ಇನ್‌ಸ್ಪೆಕ್ಟರ್ 20, ಪಿಎಸ್‌ಐ 24, ಮಹಿಳಾ ಪಿಎಸ್‌ಐ 3, ಎಎಸ್‌ಐ 15, ಕಾನ್‌ಸ್ಟೇಬಲ್ 500, ಕೆಎಸ್‌ಆರ್‌ಪಿ 5 ತುಕಡಿ ಮತ್ತು ಎಆರ್ 6 ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಬಿಜೆಪಿಯ ಕಾರ್ಯಕ್ರಮಕ್ಕೆ ಸುಮಾರು 300 ಪೊಲೀಸರನ್ನು ನಿಯೋಜಿಸಲಾಗಿದೆ. ಹಾಗೆ ಚಾಮರಾಜಪೇಟೆ ಮೈದಾನದಲ್ಲಿ ಕೂಡ ಒಬ್ಬ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬಂದೋಬಸ್ತ್ ಇರಲಿದೆ.ನಿ
ಚಾಮರಾಜಪೇಟೆ ಮೈದಾನದತ್ತ ಎಲ್ಲರ ಕಣ್ಣು
ಚಾಮರಾಜಪೇಟೆ ಮೈದಾನ ಈ ಬಾರಿ ಭಾರಿ ಗಮನ ಸೆಳೆದಿದೆ. ಮೈದಾನದಲ್ಲಿ ಆಗಸ್ಟ್ 15ರಂದು ಬೆಳಗ್ಗೆ 8ಕ್ಕೆ ಕಂದಾಯ ಇಲಾಖೆ ಉಪ ವಿಭಾಗಾಧಿಕಾರಿ ಶಿವಣ್ಣ ಅವರು ಧ್ವಜಾರೋಹಣ ಮಾಡಲಿದ್ದಾರೆ. 75 ವರ್ಷಗಳಲ್ಲೇ ಮೊದಲ ಬಾರಿ ಈ ಮೈದಾನದಲ್ಲಿ ಧ್ವಜಾರೋಹಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ಹಾಗೂ ಕಬ್ಬಿಣದ ಗೇಟ್‌ಗಳನ್ನ ಅಳವಡಿಸಲಾಗಿದೆ. ಯಾರೂ ಒಳ ಬಾರದ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ. ಹಾಗೆಯೇ ಮೈದಾನದ ಸುತ್ತ ಸೂಕ್ತ ಭದ್ರತಾ ಏರ್ಪಾಡು ಮಾಡಲಾಗಿದೆ.
800 ಪೊಲೀಸರ ಬಂದೋಬಸ್ತ್
ರ‍್ಯಾಪಿಡ್ ಆಕ್ಷನ್ ಫೋರ್ಸ್, ಲಾ ಆ್ಯಂಡ್ ಆರ್ಡರ್, ಕೆಎಸ್‌ಆರ್‌ಪಿ ಸೇರಿ 800 ಪೊಲೀಸ್ ಸಿಬ್ಬಂದಿಯನ್ನು ಮೈದಾನದ ಭದ್ರತೆಗೆ ನಿಯೋಜಿಸಲಾಗಿದೆ. ಒಬ್ಬ ಹೆಚ್ಚುವರಿ ಪೊಲೀಸ್ ಆಯುಕ್ತರ ಸುಪರ್ದಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ಭಾನುವಾರ ರ‍್ಯಾಪಿಡ್ ಆಕ್ಷನ್ ಫೋರ್ಸ್ ಜತೆ 300 ಪೊಲೀಸ್ ಸಿಬ್ಬಂದಿ ಚಾಮರಾಜಪೇಟೆಯ ಸುಮಾರು ಐದು ಕಿಲೋಮೀಟರ್ ಮಾರ್ಗದಲ್ಲಿ ರೂಟ್ ಮಾರ್ಚ್ ಮಾಡಿದದ್ದಾರೆ.
ಇನ್ನು ಸ್ಥಳಕ್ಕೆ ಬಂದಿದ್ದ ಕಂದಾಯ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿ, ಧ್ವಜಾರೋಹಣ ಕಂಬಗಳನ್ನ ನೆಟ್ಟು ಅಂತಿಮ ತಯಾರಿ ನಡೆಸಿದ್ದಾರೆ. ಸಾರ್ವಜನಿಕರ ಎಂಟ್ರಿ ಪಾಯಿಂಟ್‌ಗಳನ್ನು ಗುರುತಿಸಿರುವ ಪೊಲೀಸರು, ಪರಿಶೀಲನೆ ನಡೆಸಿದ ಬಳಕವಷ್ಟೆ ಒಳ ಬಿಡಲು ನಿರ್ಧರಿಸಿದ್ದಾರೆ. ವಂದೇ ಮಾತರಂ, ಭಾರತ್ ಮಾತಾ ಕಿ ಜೈ ಎಂಬ ಘೊಷಣೆ ಬಿಟ್ಟರೆ ಬೇರೇ ಯಾವುದೇ ಘೋಷಣೆ ಕೂಗುವಂತಿಲ್ಲ. ಯಾವುದೇ ಪಕ್ಷದ ಜೈಕಾರ ಕೂಗುವಂತಿಲ್ಲ.
ಮೈದಾನದ ಸುತ್ತಮುತ್ತ ಯಾವುದೇ ಫ್ಲೆಕ್ಸ್‌ಗಳನ್ನು ಹಾಕಬಾರದು ಎಂದು ಪೊಲೀಸರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಆದರೆ ಚಾಮರಾಜಪೇಟೆ ನಾಗರಿಕರ ಒಕ್ಕೂಟದವರು ಶುಭಾಷಯದ ಫ್ಲೆಕ್ಸ್‌ಗಳನ್ನು ಹಾಕಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಪೊಲೀಸರು ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ಹೋದಾಗ, ಚಾಮರಾಜಪೇಟೆ ಒಕ್ಕೂಟದ ಸದಸ್ಯರು ವಾಗ್ವಾದಕ್ಕಿಳಿದರು. ಬಳಿಕ ಸ್ಥಳೀಯರ ಮನವೊಲಿಸಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಯಿತು.
ಇದನ್ನೂ ಓದಿ | Har Ghar Tiranga | ಜೀಸಸ್ ಎಂದು ಬರೆದು ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಿದವನ ಸೆರೆ!