Site icon Vistara News

Police Transfer : ವರ್ಗಾವಣೆ ದಂಧೆ ಆರೋಪದ ನಡುವೆಯೇ 211 ಇನ್ಸ್‌ಪೆಕ್ಟರ್‌ಗಳ ವರ್ಗ, ದಿಢೀರ್‌ ರದ್ದು!

Karnataka Police

ಬೆಂಗಳೂರು: ರಾಜ್ಯದಲ್ಲಿ ವರ್ಗಾವಣೆ ದಂಧೆ (Transfer Scam) ನಡೆಯುತ್ತಿದೆ ಎಂಬ ಜೆಡಿಎಸ್‌ ಮತ್ತು ಬಿಜೆಪಿ ನಾಯಕರ ಆರೋಪದ ನಡುವೆಯೇ ಮಂಗಳವಾರ ರಾತ್ರಿ ರಾಜ್ಯ ಸರ್ಕಾರ 211 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳು (211 Police Inspectors) ಹಾಗೂ 32 ಸಬ್‌ ಇನ್ಸ್‌ಪೆಕ್ಟರ್‌ಗಳ (32 Sub Inspectors) ವರ್ಗಾವಣೆಯನ್ನು ಮಾಡಿತ್ತು. ಆದರೆ, ಬುಧವಾರ ಬೆಳಗ್ಗೆ 11 ಅಧಿಕಾರಿಗಳ ವರ್ಗಾವಣೆಯನ್ನು (Police Transfer) ತಡೆ ಹಿಡಿದ ಸರ್ಕಾರ, ಮಧ್ಯಾಹ್ನದ ಹೊತ್ತಿಗೆ ವರ್ಗಾವಣೆಯ ಸಂಪೂರ್ಣ ಪಟ್ಟಿಯನ್ನೇ ಹಿಂಪಡೆಯಿತು. ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಆಡಳಿತಾರೂಢ ಪಕ್ಷದ ನಾಯಕರಲ್ಲಿ ಮೂಡಿದ ಗುದ್ದಾಟವೇ ವರ್ಗಾವಣೆ ರದ್ದತಿಗೆ (Stay on Police Transfer) ಕಾರಣ ಎಂದು ಹೇಳಲಾಗಿದೆ.

ಮಂಗಳವಾರ ರಾತ್ರಿ ಪೊಲೀಸ್‌ ಇಲಾಖೆ 211 ಇನ್ಸ್‌ಪೆಕ್ಟರ್‌ಗಳು ಹಾಗೂ 32 ಎಸ್‌ಐಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇಷ್ಟೊಂದು ದೊಡ್ಡ ಪ್ರಮಾಣದ ವರ್ಗಾವರ್ಗಿಯ ಬಗ್ಗೆ ಭಾರಿ ಚರ್ಚೆಗಳು ನಡೆದವು. ಇದು ಇತ್ತೀಚೆಗೆ ಅತೃಪ್ತಿ ವ್ಯಕ್ತಪಡಿಸಿದ ಕಾಂಗ್ರೆಸ್‌ ಶಾಸಕರ ಬೇಡಿಕೆಯ ಹಿನ್ನೆಲೆಯಲ್ಲಿ ನಡೆಸಿದ ವರ್ಗಾವಣೆ ಇರಬಹುದು ಎಂಬ ಸಂಶಯ ಜೋರಾಗಿತ್ತು. ಈ ನಡುವೆ, ವರ್ಗಾವಣೆ ವಿಚಾರದಲ್ಲಿ ಕಾಂಗ್ರೆಸ್‌ ಶಾಸಕರ ನಡುವೆಯೇ ಅಸಮಾಧಾನ ಭುಗಿಲೆದ್ದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಕೆಲವರ ವರ್ಗಾವಣೆಗೆ ತಡೆ ಒಡ್ಡಲಾಯಿತು. ಬುಧವಾರ ಮುಂಜಾನೆಯ ಹೊತ್ತಿಗೆ ವರ್ಗಾವಣೆಯನ್ನು ತಡೆ ಹಿಡಿದವರ ಸಂಖ್ಯೆ 19ಕ್ಕೇರಿತು. ಸಂಜೆಯ ಹೊತ್ತಿಗೆ ಪೊಲೀಸ್‌ ಇಲಾಖೆ ಯಾವುದೇ ಇನ್ಸ್‌ಪೆಕ್ಟರ್‌ಗಳು ಮತ್ತು ಸಬ್‌ ಇನ್ಸ್‌ಪೆಕ್ಟರ್‌ಗಳು ತಮ್ಮ ಹುದ್ದೆಯಿಂದ ರಿಲೀವ್‌ ಆಗಬಾರದು ಎಂದು ಸೂಚಿಸಿದೆ.

ರಾತ್ರಿ ವರ್ಗಾವಣೆ ಆದೇಶ ಹೊರಡಿಸಿದ ಇಲಾಖೆ ಮುಂಜಾನೆಯ ಹೊತ್ತಿಗೆ ಗೊಂದಲದ ಗೂಡಾಗಿತ್ತು. ಬೆಳಗ್ಗೆ ಇಲಾಖೆಯಿಂದ ಸುಮಾರು 19 ಜನರಿಗೆ ನಿಮ್ಮ ವರ್ಗಾವಣೆಯನ್ನು ತಡೆಹಿಡಿಯಲಾಗಿದೆ ಎಂದು ಸೂಚಿಸಲಾಯಿತು. ಕೇಂದ್ರ ಕಚೇರಿಯಿಂದಲೇ ಇನ್ಸ್‌ಪೆಕ್ಟರ್‌ಗಳಿಗೆ ಸೂಚನೆ ಹೊರಟಿತ್ತು.

ಮುಂಜಾನೆ ವರ್ಗಾವಣೆ ತಡೆ ಆದ ಇನ್ಸ್‌ಪೆಕ್ಟರ್‌ಗಳಲ್ಲಿ ಬೆಂಗಳೂರಿನ ಅಧಿಕಾರಿಗಳೇ ಹೆಚ್ಚಾಗಿದ್ದರು. ರವಿ ಗೌಡ ಬಿ- ಯಶವಂತಪುರ ಟ್ರಾಫಿಕ್ ಸಂಚಾರ, ಧನಂಜಯ್- ಯಶವಂತಪುರ, ಲಾ ಅಂಡ್ ಆರ್ಡರ್, ಲಕ್ಷ್ಮಣ್ ಜೆ – ನಂದಿನಿ ಲೇಔಟ್ ಪೊಲೀಸ್ ಠಾಣೆ, ಅಶತ್ಥಗೌಡ- ಜಾನ್ಞಭಾರತಿ ಪೊಲೀಸ್ ಠಾಣೆ, ಗೋವಿಂದರಾಜು – ಪೀಣ್ಯ ಪೊಲೀಸ್ ಠಾಣೆ, ಕೃಷ್ಣಕುಮಾರ್- ಬೇಗೂರು ಪೊಲೀಸ್ ಠಾಣೆ, ಜಗದೀಶ್ – ಕೆ.ಎಸ್ ಲೇಔಟ್ ಠಾಣೆ, ವಜ್ರಮುನಿ – ಕೆಆರ್ ಮಾರ್ಕೆಟ್, ರವಿಕುಮಾರ್ – ಪುಟ್ಟೇನಹಳ್ಳಿ, ಅನಿಲ್‌ಕುಮಾರ್ – ಮಲ್ಲೇಶ್ವರಂ, ಜಿಗಣಿ – ಎಡ್ವಿನ್ ಪ್ರದೀಪ್ ಅವರು ಸೇರಿದಂತೆ 19 ಮಂದಿಯ ವರ್ಗಾವಣೆ ತಡೆಯಲಾಗಿತ್ತು.

ವರ್ಗಾವಣೆ ತಡೆಗೆ ಕಾರಣಗಳೇನು?

ವರ್ಗಾವಣೆ ಮಾಡಿ, ಕೆಲವೇ ಗಂಟೆಗಳಲ್ಲಿ ಕೆಲವರ ವರ್ಗಾವಣೆಗೆ ತಡೆ ಒಡ್ಡಿರುವುದು ಮತ್ತು ಕೊನೆಗೆ ಇಡೀ ಪ್ರಕ್ರಿಯೆಯನ್ನೇ ರದ್ದುಪಡಿಸಿರುವುದು ಇದೆಲ್ಲವೂ ದಂಧೆಯ ಭಾಗವಾಗಿ ನಡೆದ ವರ್ಗಾವಣೆಯ ಎಂಬ ಸಂಶಯ ಮತ್ತು ಆರೋಪಗಳಿಗೆ ಪುಷ್ಟಿ ನೀಡಿತು.

ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ವಿಚಾರದಲ್ಲಿ ಶಾಸಕರು, ಸಚಿವರ ನಡುವೆ ಭಾರಿ ಪೈಪೋಟಿ ನಡೆದಿದೆ ಎಂಬ ಆರೋಪವಿತ್ತು. ಶಾಸಕರು ಇತ್ತೀಚೆಗೆ ಮಾಡಿದ ಆರೋಪಗಳಲ್ಲಿ ಪೊಲೀಸರ ವರ್ಗಾವಣೆಯಲ್ಲೂ ತಮ್ಮ ಶಿಫಾರಸಿಗೆ ಬೆಲೆ ಇಲ್ಲ ಎನ್ನುವುದೂ ಒಂದಾಗಿತ್ತು. ಇದರ ನಡುವೆ, ಸಿಎಂ ಸಿದ್ದರಾಮಯ್ಯ ಬಣ ಹಾಗೂ ಡಿ.ಕೆ. ಶಿವಕುಮಾರ್‌ ಬಣಗಳ ಜಗಳವೂ ಇತ್ತೆಂದು ಹೇಳಲಾಗಿದೆ.

ಇದನ್ನೂ ಓದಿ: Tahsildar Transfer : ಕಂದಾಯ ಇಲಾಖೆಯಲ್ಲಿ ಮೇಜರ್‌ ಸರ್ಜರಿ; 46 ತಹಸೀಲ್ದಾರ್‌ ವರ್ಗಾವಣೆ

ರಾತ್ರೋರಾತ್ರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಯನ್ನು ತಡೆ ಹಿಡಿದಿರುವುದು ನೋಡಿದರೆ ಇದರಲ್ಲಿ ಡಿ.ಕೆ. ಶಿವಕುಮಾರ್‌ ಮತ್ತು ಸೋದರ ಡಿ.ಕೆ. ಸುರೇಶ್‌ ಬಣಕ್ಕೆ ಹಿನ್ನಡೆಯಾದಂತೆ ಕಂಡುಬರುತ್ತಿದೆ. ಹೀಗಾಗಿ ಅವರ ವರ್ಗಾವಣೆಯನ್ನು ತಡೆ ಹಿಡಿಯಲಾಗಿದೆ ಎಂದು ಹೇಳಲಾಗಿದೆ.

ಉಳಿದ ಕಡೆಗಳಲ್ಲೂ ಬೇರೆ ಬೇರೆ ಹಿತಾಸಕ್ತಿಗಳು ಪರವಿರುದ್ಧ ಹೋರಾಟಕ್ಕೆ ಇಳಿದ ಹಿನ್ನೆಲೆಯಲ್ಲಿ ವರ್ಗಾವಣೆ ಎನ್ನುವುದು ಗೊಂದಲದ ಗೂಡಾಗಿ ಅಂತಿಮವಾಗಿ ಒಟ್ಟಾರೆ ಪ್ರಕ್ರಿಯೆಗೇ ತಡೆ ನೀಡಲಾಗಿದೆ.

Exit mobile version