Site icon Vistara News

Bellary Mining | ಗಣಿ ಬಾಧಿತರ ಬದುಕು ಸುಧಾರಿಸಲು ಸಂಗ್ರಹಿಸಿದ 22 ಸಾವಿರ ಕೋಟಿ ಮೇಲೆ ಪಕ್ಷಗಳ ಕಣ್ಣು!

Bellary Mining political parties supreme court money

ಶಶಿಧರ ಮೇಟಿ, ಬಳ್ಳಾರಿ
ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲ ರಾಜಕೀಯ ಪಕ್ಷಗಳ ಕಣ್ಣು ಗಣಿಬಾಧಿತ ಪ್ರದೇಶಗಳ (Bellary Mining) ಅಭಿವೃದ್ಧಿಗೆ ಮೀಸಲಿಟ್ಟಿರುವ 22 ಸಾವಿರ ಕೋಟಿ ರೂ. ಮೇಲೆ ನೆಟ್ಟಿದೆ. ಈ ಹಣ ಯಾವುದೇ ರಾಜಕೀಯ ಪಕ್ಷಗಳ ಮತ್ತು ಸರಕಾರದ ಸ್ವತ್ತಲ್ಲ, ಅದು ಗಣಿಬಾಧಿತರ ಸ್ವತ್ತು. ಗಣಿ ಬಾಧಿತರ ಬದುಕು ಸುಧಾರಿಸಲು ಗಣಿ ಉದ್ಯಮಿಗಳ ಅದಿರು ಮಾರಾಟದಿಂದ ಸಂಗ್ರಹಿಸಿದ ಹಣ. ಆದರೆ ರಾಜಕೀಯ ಪಕ್ಷಗಳು ಇಲ್ಲಿನ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ತರುತ್ತಿದ್ದೇವೆ ಎಂದು ದಾರಿ ತಪ್ಪಿಸುತ್ತಿವೆ. ಈ ಹಣ ಬಳಕೆಯು ಸುಪ್ರೀಂಕೋರ್ಟ್ ಕಣ್ಗಾವಲಿನಲ್ಲಿಯೇ ನಡೆಯಲಿದೆ.

ಕ್ರೆಡಿಟ್ ಪಡೆಯಲು ಮುಂದಾದ ಪಕ್ಷಗಳು
ಬಳ್ಳಾರಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ದೇಶದಲ್ಲಿಯೇ ಸದ್ದು ಮಾಡಿತ್ತು, ಇದರಿಂದಾಗಿ ತನಿಖಾ ಸಂಸ್ಥೆಗಳು ಗಣಿನಾಡಿಗೆ ಲಗ್ಗೆ ಇಟ್ಟಿದ್ದವು, ಎಸ್.ಆರ್.ಹಿರೇಮಠ್ ಸೇರಿದಂತೆ ಇತರರ ಹೋರಾಟದ ಫಲವಾಗಿ ಸುಪ್ರೀಂಕೋರ್ಟ್ ಮುತುವರ್ಜಿಯೇ ಈ ಗಣಿ ಹಣ ಸಂಗ್ರಹಕ್ಕೆ ಕಾರಣವಾಯಿತೇ ಹೊರತು ಯಾವುದೇ ರಾಜಕೀಯ ಪಕ್ಷ ಮತ್ತು ಜನಪ್ರತಿನಿಧಿಗಳ ಶ್ರಮದ ಫಲವಲ್ಲ. ಆದರೆ ಸಾವಿರಾರು ಕೋಟಿ ರೂ. ಸಂಗ್ರಹವಾಗಿ ಇದು ಗಣಿಬಾಧಿತ ಪ್ರದೇಶದ ಬಳಕೆಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿಸುತ್ತಿದ್ದಂತೆ ಗಣಿ ಹಣ ಬಳಕೆ ವಿಚಾರದಲ್ಲಿ ಕ್ರೆಡಿಟ್ ತೆಗೆದುಕೊಳ್ಳಲು ರಾಜಕೀಯ ನಾಯಕರು ಮುಂದಾಗಿದ್ದಾರೆ. ಇದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಹೊರತಾಗಿಲ್ಲ.

ಈ ಹಣ ಸಂಗ್ರಹವಾಗಿದ್ದು ಹೇಗೆ?
ಈಗ ವರ್ಷವೊಂದಕ್ಕೆ ಸಾವಿರಾರು ಕೋಟಿ ರೂ. ಸಂಗ್ರಹವಾಗುತ್ತಿದೆ. ಸುಪ್ರೀಂಕೋರ್ಟ್ ಸೂಚನೆಯ ಹಿನ್ನೆಲೆಯಲ್ಲಿ ಮೂರು ವಿಧದಲ್ಲಿ ಈವರೆಗೆ ಸುಮಾರು 22 ಸಾವಿರ ಕೋಟಿ ರೂ. ಸಂಗ್ರಹವಾಗಿದೆ. ಸಿಇಸಿ(ಸುಪ್ರೀಂಕೋರ್ಟ್ ರಚಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿ) ಗಣಿಗಾರಿಕೆಯಲ್ಲಿ ಅಕ್ರಮತೆ ಆಧಾರದ ಮೇಲೆ ಎ, ಬಿ. ಮತ್ತು ಸಿ ಕೆಟಗರಿ ಎಂದು ವಿಂಗಡಿಸಿತು. ಎ ಮತ್ತು ಬಿ ಕೆಟಗರಿ ಗಣಿ ಗುತ್ತಿಗೆಗೆ ಕೆಲವೊಂದು ದಂಡ ವಿಧಿಸಿ ಗಣಿಗಾರಿಕೆ ನಡೆಸಲು ಅವಕಾಶ ಕೊಟ್ಟರೆ, ಸಿ ಕೆಟಗರಿ ಗಣಿ ಗುತ್ತಿಗೆಗೆ ಅವಕಾಶ ನೀಡಿಲ್ಲ. ಸಿ ಕೆಟಗರಿಯ ಗಣಿ ಗುತ್ತಿಗೆ ಯಲ್ಲಿ ಸಂಗ್ರಹವಾಗಿರುವ ಅದಿರು ಮಾರಾಟ ಬಂದಿರುವ ಹಣ, ಸಿ ಕೆಟಗರಿ ಗಣಿಗುತ್ತಿಗೆ ಹರಾಜಿನಲ್ಲಿ ಬಂದ ಶೇ.25ರಷ್ಟು ಹಣ ಮತ್ತು ಎ, ಬಿ ಗಣಿ ಗಣಿಗುತ್ತಿಗೆಯಲ್ಲಿನ ಅದಿರು ಮಾರಾಟದಲ್ಲಿನ ಶೇ.10ರಷ್ಟು ಹಣ ಸಂಗ್ರಹದಿಂದಾಗಿ ಇಲ್ಲಿಯವರೆಗೆ 22 ಸಾವಿರ ಕೋಟಿ ರೂ. ಸಂಗ್ರಹವಾಗಿದೆ.

ಇದನ್ನೂ ಓದಿ | ಮಂಗಳೂರು ಸ್ಫೋಟ | ಕೊಡಗಿನ ಹೋಮ್‌ಸ್ಟೇನಲ್ಲಿ ತಂಗಿದ್ದರೇ ಕುಕ್ಕರ್‌ ಬಾಂಬ್‌ ಸ್ಫೋಟದ ಹಿಂದಿನ 11 ಆರೋಪಿಗಳು?

ಮೂರು ಬಾರಿ ರಿಜೆಕ್ಟ್
ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆ ಪ್ರಭಾವಕ್ಕೆ ಒಳಗಾಗಿರುವ ವಲಯದ ಸುಧಾರಣೆಗೆ ಮತ್ತು ಪುರ್ನವಸತಿಗೆ ಗಣಿಗಾರಿಕೆಯ ಪ್ರಭಾವಕ್ಕೆ ಒಳಗಾದ ವಲಯಗಳಿಗೆ ಸಮಗ್ರ ಪರಿಸರ ಯೋಜನೆಯನ್ನು (ಸಿಇಪಿಎಂಐಜೆಡ್)ಹತ್ತು ವರ್ಷದ ಅವಧಿ ಅನುಷ್ಠಾನಗೊಳಿಸಲು ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಇದಕ್ಕಾಗಿಯೇ ಎಸ್‍ಪಿವಿ(ವಿಶೇಷ ಉದ್ದೇಶಗಳ ಸಂಸ್ಥೆ) ರಚನೆಯಾಯಿತು. ಇದರ ಬೆನ್ನಲ್ಲೇ 2014ರಲ್ಲಿ ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ನಿಗಮವನ್ನು(ಕೆಎಂಇಆರ್‌ಸಿ) ಅಸ್ತಿತ್ವಕ್ಕೆ ತಂದಿತು. ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗೆ ಸಿದ್ಧಪಡಿಸಿರುವ ಸಮಗ್ರ ವರದಿಯನ್ನು ಕೆಎಂಆರ್‍ಇಸಿ ಸಲ್ಲಿಸುವಂತೆ 2018ರ ಮಾರ್ಚ್‍ನಲ್ಲಿ ಆದೇಶಿಸಿತು. ಪ್ರಸ್ತಾವನೆಯಲ್ಲಿ ಸರಕಾರ ಮತ್ತು ಜನಪ್ರತಿನಿಧಿಗಳ ಗಣಿಬಾಧಿತ ಪ್ರದೇಶಗಳಿಗೆ ಸಂಬಂಧಿಸಿದ ಬೇರೆ ಕಾಮಗಾರಿ ಸೇರಿಸಿ ಜಿಲ್ಲಾಡಳಿತಗಳು ಸಲ್ಲಿಸಿರುವ ಪ್ರಸ್ತಾವನೆಯು ನಾನಾ ಕಾರಣಕ್ಕೆ ಮೂರು ಬಾರಿ ಸುಪ್ರೀಂಕೋರ್ಟ್ ರಿಜೆಕ್ಟ್ ಮಾಡಿತ್ತು. 2019ರಲ್ಲಿ ಯೋಜನೆ ಅಂದಾಜು 24,996 ಕೋಟಿ ರೂ. ಪ್ರಸ್ತಾವನೆಯನ್ನು ಕೆಎಂಆರ್‍ಇಸಿಯು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.

ಮೇಲುಸ್ತುವಾರಿ ಪ್ರಾಧಿಕಾರ ರಚನೆ
ಕೆಎಂಇಆರ್‌ಸಿ ಸಲ್ಲಿಸಿರುವ ಪ್ರಸ್ತಾವನೆಯನ್ನು 2022ರ ಏಪ್ರಿಲ್ ನಲ್ಲಿ ಸುಪ್ರೀಂಕೋರ್ಟ್ ಅನುಮೋದಿಸಿ ಪ್ರತಿ ಯೋಜನೆಯ ಅನುಮೋದನೆ ಹಾಗೂ ಅನುಷ್ಠಾನ ಉಸ್ತುವಾರಿಗಾಗಿ ನಿವೃತ್ತ ನ್ಯಾಯಾಧೀಶರಾದ ಸುದರ್ಶನ ರೆಡ್ಡಿ ಅವರನ್ನು ಮೇಲುಸ್ತುವಾರಿ ಪ್ರಾಧಿಕಾರವನ್ನಾಗಿ ನೇಮಕ ಮಾಡಿತು. ಮೇ ತಿಂಗಳಲ್ಲಿಯೇ ಮೇಲುಸ್ತುವಾರಿ ಪ್ರಾಧಿಕಾರ ತನ್ನ ಕಾರ್ಯ ಆರಂಭಿಸಿತು. ಪ್ರತಿಯೊಂದು ಪೈಸೆಯನ್ನು ಪ್ರಾಧಿಕಾರದ ಕಣ್ಗಾವಲಿನಲ್ಲಿಯೇ ವೆಚ್ಚ ಮಾಡಬೇಕಾಗಿದೆ. ಈಗಾಗಲೇ ಸುಪ್ರೀಂಕೋರ್ಟ್ 158 ಕಾಮಗಾರಿಗೆ ಅನುಮೋದನೆ ನೀಡಿದೆ. ಆದರೆ ಕೆಎಂಇಆರ್ ಸಿಯೇ ಯೋಜನೆ ಅನುಷ್ಠಾನಗೊಳಿಸುವ ಜೊತೆಗೆ ಕಾಮಗಾರಿಯನ್ನು ವಿವಿಧ ಏಜೆನ್ಸಿಗಳ ಮೂಲಕ ತಾನೇ ಮಾಡಿದರೆ ಉತ್ತಮ ಏಕೆಂದರೆ ಬೇರೆ ಬೇರೆ ಇಲಾಖೆಗೆ ಅನುಷ್ಠಾನ ಜವಾಬ್ದಾರಿ ಕೊಟ್ಟರೆ ಪರ್ಸೆಂಟೇಜ್ ದಂಧೆಗೆ ಅವಕಾಶ ನೀಡಿದಂತಾಗುತ್ತದೆ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.

ವಿಮಾನ ನಿಲ್ದಾಣ ಸಾಧ್ಯವೇ?
ಕೆಎಂಇಆರ್‌ಸಿ ಸಹಯೋಗದಲ್ಲಿ ಬಳ್ಳಾರಿಯಲ್ಲಿ 2008ರಿಂದ ನನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಯೋಜನೆಯನ್ನು ಅನುಷ್ಠಾನಗೊಳಿಸಲು ನ.3ರಂದು ನಡೆದ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೇವಲ ಗಣಿ ಬಾಧಿತ ಪ್ರದೇಶಗಳಿಗೆ ಮಾತ್ರ ಈ ಹಣ ಬಳಕೆಗೆ ಅವಕಾಶ ಇರುವುದರಿಂದ ಈ ಹಿಂದೆ ಸುಪ್ರೀಂಕೋರ್ಟ್‍ಗೆ ರಾಜ್ಯ ಸರಕಾರ(ಜಿಲ್ಲಾಡಳಿತ) ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಬೇರೆ ಕಾಮಗಾರಿ ಮತ್ತು ರಾಜ್ಯ ಸರಕಾರದ ವಿವಿಧ ಇಲಾಖೆಗಳ ಅನುದಾನದಲ್ಲಿ ಅಭಿವೃದ್ಧಿಪಡಿಸಿರುವ ಕಾಮಗಾರಿಯನ್ನು ಒಳಗೊಂಡಿದ್ದರಿಂದ ಈ ಬಗ್ಗೆ ಗಣಿ ಮಾಲೀಕರ ಸಂಘ ಫಿಮಿ ವಿರೋಧದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಪ್ರಸ್ತಾವನೆಯನ್ನು ರಿಜೆಕ್ಟ್ ಮಾಡಿತ್ತು. ರಾಜ್ಯ ಸರಕಾರದ ವಿಮಾನ ನಿಲ್ದಾಣದ ಪ್ರಸ್ತಾವನೆಯನ್ನು ಮೇಲುಸ್ತುವಾರಿ ಸಮಿತಿಯು ಒಪ್ಪವುದೇ ಎಂಬುದು ಯಕ್ಷ ಪ್ರಶ್ನೆ. ಬಿಜೆಪಿ ಸರಕಾರವ ಸಾವಿರಾರು ಕೋಟಿ ರೂ. ಬರುತ್ತಿದೆ, ಇದರಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಎಂಬುದು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದಂತಿದೆ.

ಇಂದ್ರಲೋಕ ಸೃಷ್ಟಿಸಬಹುದು
2010ರ ಪೂರ್ವದಲ್ಲಿ ರಾಜ್ಯದಲ್ಲಿ 100ಕ್ಕೂ ಹೆಚ್ಚು ಗಣಿ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ತನಿಖಾ ಸಂಸ್ಥೆಗಳ ತನಿಖೆಯಿಂದ ಮತ್ತು ಗಣಿ ಗುತ್ತಿಗೆ ಅವಧಿ ಪೂರ್ಣಗೊಂಡಿರುವುದರಿಂದ ಈ ಸಂಖ್ಯೆಯು ರಾಜ್ಯದಲ್ಲಿ 45ಕ್ಕೆ ಇಳಿಕೆಯಾಗಿದೆ. ಈ ಹಿಂದೆ ಪ್ರತಿ ವರ್ಷ 35 ಮಿಲಿಯನ್ ಟನ್ ಅದಿರು ಉತ್ಪಾದನೆ ಮಾಡಲಾಗಿತ್ತು. ಆದರೆ ಸುಪ್ರೀಂಕೋರ್ಟ್ ಮೇ ತಿಂಗಳ ಆದೇಶದಲ್ಲಿ ಈ ಪ್ರಮಾಣ 50 ಮಿಲಿಯನ್ ಟನ್‍ಗೆ ಹೆಚ್ಚಿಸಿದೆ. ಆದರೆ ಈಗಿರುವ ಗಣಿ ಗುತ್ತಿಗೆಗಳಿಗೆ ಕೇವಲ 44 ಮಿಲಿಯನ್ ಟನ್ ಅದಿರು ಉತ್ಪಾದನೆ ಸಾಮರ್ಥ್ಯ ಇದೆ. ರಾಜ್ಯದ 45 ಗಣಿ ಗುತ್ತಿಗೆಗಳಲ್ಲಿ ಅದಿರು ಮಾರಾಟದ ಶೇ.10ರಷ್ಟು ಹಣವನ್ನು ಗಣಿಬಾಧಿತ ಪ್ರದೇಶಗಳ ನಿಧಿಗೆ ನೀಡುತ್ತಿದೆ. ಇದರಿಂದಾಗಿ ವರ್ಷಕ್ಕೆ ಸಾವಿರಕ್ಕೂ ಹಚ್ಚು ಕೋಟಿ ಸಂಗ್ರಹವಾಗುತ್ತಿದೆ. ಈ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿದ್ದೇ ಆದರೆ ಗಣಿಬಾಧಿತ ಪ್ರದೇಶದಲ್ಲಿ ಇಂದ್ರಲೋಕವನ್ನೇ ಸೃಷ್ಟಿ ಮಾಡಬಹುದು! ಹಾಗಾಗಿ ಈ ಹಣವು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಕೆಯಾಗದಿರಲಿ‌ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ | Defacement | ನಾಗದೇವರ ಮೂರ್ತಿ ವಿರೂಪಗೊಳಿಸಿದ ಕಿಡಿಗೇಡಿಗಳು, ಆರೋಪಿಗಳ ಪತ್ತೆಗೆ ಸಿಸಿ ಟಿವಿ ಜಾಲಾಟ

Exit mobile version