ಪ್ರತಾಪ್ ಹಿರೀಸಾವೆ, ಹಾಸನ
ಈವರೆಗೂ 15 ವಿಧಾನಸಭೆ ಚುನಾವಣೆ ಕಂಡಿರುವ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ 16ನೇ ಚುನಾವಣಾ ಕಣ ಕುತೂಹಲದಿಂದ ಕೂಡಿದೆ. ಕ್ಷೇತ್ರದಲ್ಲಿ ಒಕ್ಕಲಿಗರು, ದಲಿತರು ಹಾಗೂ ಕುರುಬರು ಅತ್ಯಧಿಕ ಸಂಖ್ಯೆಯಲ್ಲಿದ್ದು, ಮೂರು ಸಮುದಾಯದ ಮತಗಳು ಗೆಲುವಿನ ಅಭ್ಯರ್ಥಿ ಲೆಕ್ಕ್ಕಾಚಾರದಲ್ಲಿ ದಾಖಲಾಗಿರುತ್ತವೆ. ಇದುವರೆಗೂ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳೇ ಶಾಸಕರಾಗಿ ಆಯ್ಕೆಗೊಂಡಿದ್ದು, ಇತರೆ ಸಮಾಜದವರಿಗೆ ರಾಜಕೀಯವಾಗಿ ಅವಕಾಶ ನೀಡಿಲ್ಲ.
2008ರಿಂದ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿಯನ್ನು ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಲಾಗಿದೆ. ಇಲ್ಲಿ ಕುರುಬರು ಮೊದಲ ಸ್ಥಾನದಲ್ಲಿದ್ದರೆ, ನಂತರದಲ್ಲಿ ದಲಿತರು, ಇತರರು ಇದ್ದಾರೆ. ಅರಕಲಗೂಡು ಮತ್ತು ಹಳ್ಳಿಮೈಸೂರು ಹೋಬಳಿಯನ್ನು ಸೇರ್ಪಡೆಗೊಂಡಂತೆ ಒಕ್ಕಲಿಗರ ಸಂಖ್ಯೆಗೆ ಸರಿಸಮಾನವಾಗಿ ದಲಿತರು, ಕುರುಬರು ಇದ್ದಾರೆ.
ರಾಜಕೀಯ ಹಿನ್ನೆಲೆ
1952ರಿಂದ 1972ರ ನಡುವೆ ನಡೆದಿರುವ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ತಿಮ್ಮಪ್ಪಗೌಡ ಜಯಗಳಿಸಿದರೆ, ಎರಡನೇ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಪುಟ್ಟೇಗೌಡ(1957)ಗೆದ್ದರು. 1967ರ ಚುನಾವಣೆಯಲ್ಲಿಯೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್.ಎನ್. ನಂಜೇಗೌಡ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ನಂತರದಲ್ಲಿನ ರಾಜಕೀಯ ಬದಲಾವಣೆಯಿಂದ ಕಾಂಗ್ರೆಸ್ ಪಕ್ಷ ಇಬ್ಭಾಗವಾದಾಗ ರೆಡ್ಡಿ ಕಾಂಗ್ರೆಸ್‌ನಿಂದ ಮರು ಆಯ್ಕೆ ಬಯಸಿ ನಂಜೇಗೌಡ(1972) ವಿಜೇತರಾದರು. ಈ ಸಂದರ್ಭದಲ್ಲಿಯೂ ತ್ರಿಕೋನ ಸ್ಪರ್ಧೆ ಇತ್ತು.
1978ರಿಂದ 1985ರ ತನಕ ಇಬ್ಬರ ನಡುವೆ ಪ್ರಬಲ ಪೈಪೋಟಿ ಇದ್ದ ಕಾರಣ ಕೆ.ಬಿ. ಮಲ್ಲಪ್ಪ ಅವರು ಜನತಾ ಪಕ್ಷದಿಂದ ಸ್ಪರ್ಧಿಸಿ ಸತತ ಮೂರು ಬಾರಿ ಜಯಗಳಿಸಿ ಹ್ಯಾಟ್ರಿಕ್ ಸಾಧಿಸಿದ್ದಾರೆ. ಇದನ್ನು ಅಳಿಸುವ ನಿಟ್ಟಿನಲ್ಲಿ ಪ್ರಬಲ ಸ್ಪರ್ಧೆ ಒಡ್ಡಿದ ಎ.ಟಿ. ರಾಮಸ್ವಾಮಿ 1989-1994ರ ಚುನಾವಣೆಯಲ್ಲಿ ಸತತ ಜಯ ಕಂಡಿದ್ದಾರೆ. ಜನತಾ ಪರಿವಾರದ ಅಬ್ಬರ ಸ್ವಲ್ಪ ಮಟ್ಟಿನಲ್ಲಿ ಕುಸಿತ ಕಂಡ ಹಿನ್ನೆಲೆಯಲ್ಲಿ ಹಾಗೂ ಎ. ಮಂಜು ಮೂರನೇ ಶಕ್ತಿಯಾಗಿ ಗಣನೀಯವಾಗಿ ಜನರೊಂದಿಗೆ ವಿಶ್ವಾಸ ಹೊಂದಿದ ಪರಿಣಾಮ 1999ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
ಈ ಅವಧಿಯಲ್ಲಿ ರಾಜಕೀಯ ಭವಿಷ್ಯ ಕಟ್ಟಿಕೊಂಡ ಮಂಜು ಬಿಜೆಪಿಯಿಂದ ಗೆದ್ದು, ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡರು. ಇದರಿಂದ ಬೇಸತ್ತು ರಾಮಸ್ವಾಮಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡು 2004ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು, ಮೂರನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. ಜೆಡಿಎಸ್‌ನ ಆಂತರಿಕ ಕಲಹ ಹಾಗೂ ಜನಪ್ರಿಯತೆ ಹೆಚ್ಚಿಸಿಕೊಂಡ ಎ.ಮಂಜು ಅವರು 2008 ಮತ್ತು 2013ರಲ್ಲಿ ನಡೆದ ಚುನಾವಣೆಯಲ್ಲಿ ಸತತ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದರು.
2013ರ ಚುನಾವಣೆಯಲ್ಲಿ ಕೆಜೆಪಿ ಪಕ್ಷದಿಂದ ನಿವೃತ್ತ ಜಿಲ್ಲಾಧಿಕಾರಿ ಪುಟ್ಟಸ್ವಾಮಿ, ಪೊಟ್ಯಾಟೋ ಕ್ಲಬ್ ಸ್ಥಾಪಿಸಿ ಕ್ಷೇತ್ರದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ಸಾರಿಗೆ ಅಧಿಕಾರಿ ಯೋಗಾ ರಮೇಶ್ ಸ್ವಯಂನಿವೃತ್ತಿ ಪಡೆದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಮಂಜು ಗೆಲುವಿಗೆ ಪರೋಕ್ಷ ಕಾರಣ ಎಂದು ಹೇಳಲಾಗುತ್ತಿದೆ. ಸಚಿವರಾಗಿ ಆಡಳಿತ ವಿರೋಧಿ ಅಲೆಯಿಂದ 2018ರ ಚುನಾವಣೆಯಲ್ಲಿ ಎ. ಮಂಜು ಸೋಲಬೇಕಾಯಿತು. ನಾಲ್ಕನೇ ಬಾರಿಗೆ ಎ.ಟಿ.ರಾಮಸ್ವಾಮಿ ಜೆಡಿಎಸ್‌ನಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದರು.
ಪಕ್ಷಕ್ಕಿಂತ ವ್ಯಕ್ತಿಗೆ ಪ್ರಾಮುಖ್ಯತೆ
ಇದುವರೆಗೂ ಕಂಡಿರುವ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿ ಆಧಾರದ ಮೇಲೆಯೇ ಚುನಾವಣೆ ನಡೆದಿವೆ. ಕೇವಲ ಒಂದೇ ಕುಟುಂಬದ ರಾಜಕಾರಣ ಕಂಡುಬಂದಿಲ್ಲ. ಹೊಸಬರು ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಾರೆ. ನಿಧನ ಹೊಂದಿರುವ ತಿಮ್ಮಪ್ಪಗೌಡ, ಪುಟ್ಟೇಗೌಡ, ಮಲ್ಲಪ್ಪ, ನಂಜೇಗೌಡರ ಕುಟುಂಬದ ಸದಸ್ಯರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಆದರೆ, ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಕಂಡುಬಂದಿದೆ. ಇದರಿಂದ ಒಂದೇ ಪಕ್ಷಕ್ಕೆ, ಕುಟುಂಬಕ್ಕೆ ಸೀಮಿತವಾಗಿ ವ್ಯಕ್ತಿಗಳು ಸೋಲು ಗೆಲುವು ಕಾಣದೇ ವ್ಯಕ್ತಿಗತವಾಗಿ ಚುನಾವಣೆ ನಡೆಯುತ್ತಿದೆ. ಹಳ್ಳಿಮೈಸೂರು ಹೋಬಳಿ ಸೇರ್ಪಡೆಗೊಂಡ ಬಳಿಕ ಜೆಡಿಎಸ್ ಒಂದು ಬಾರಿ ಮಾತ್ರ ಜಯಗಳಿಸಿದೆ. ಈ ಸಂಗತಿ ಮನಗಂಡಿರುವ ಮಾಜಿ ಸಚಿವ ಎ. ಮಂಜು ಮತ್ತೊಂದು ಗೆಲವು ಕನಸು ಕಾಣುತ್ತಿದ್ದಾರೆ. ಅದು ಯಾವ ಪಕ್ಷದಿಂದ ಎಂಬುದು ಮಾತ್ರ ಇನ್ನೂ ನಿರ್ಧಾರವಾಗಿಲ್ಲ.
ಕುರುಬ ಜನಾಂಗ ಹಾಗೂ ಒಕ್ಕಲಿಗರ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಟಿಕೆಟ್‌ಗಾಗಿ ಬಿಗ್ ಫೈಟ್ ಏರ್ಪಟ್ಟಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ ಎನ್ನುವುದಕ್ಕೆ, ಸ್ವತಃ ಜೆಡಿಎಸ್‌ನ ಹಾಲಿ ಶಾಸಕ ಎ.ಟಿ. ರಾಮಸ್ವಾಮಿ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನ ಮಾಡುತ್ತಿರುವುದು ಸಾಕ್ಷಿ. 2019ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿದ್ದ ಎ. ಮಂಜು ಕೂಡಾ ಕಾಂಗ್ರೆಸ್ ಸೇರಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸುವುದಕ್ಕೆ ಪ್ರಬಲವಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಇವರಷ್ಟೇ ಅಲ್ಲದೇ, ಕೃಷ್ಣೇಗೌಡ, ಶ್ರೀಧರ್ ಗೌಡ ಸೇರಿ ಹಲವರು ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಇವರಲ್ಲಿ ಯಾರಿಗಾದರೂ ಕಾಂಗ್ರೆಸ್ ಟಿಕೆಟ್ ಸಿಗದೇ ಇದ್ದರೂ, ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಪಕ್ಕಾ. ಎಂಪಿ ಚುನಾವಣೆ ಸಂದರ್ಭ ಎ. ಮಂಜು ಬಿಜೆಪಿಗೆ ಬಂದಿದ್ದರಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಯೋಗಾ ರಮೇಶ್, ವಾಪಸ್ಸು ಬಿಜೆಪಿಗೆ ಮರಳಿದ್ದು, ಬಹುತೇಕ ಅವರೇ ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತವಾಗಿದೆ. ಕಾಂಗ್ರೆಸ್ ಟಿಕೆಟ್ ತಂದವರಿಗೆ ಚಾನ್ಸ್ ಇದೆ, ಆದರೆ ಕೊನೆಯ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದಾದ ಕ್ಷೇತ್ರ ಇದಾಗಿದೆ.
ಸಕ್ರಿಯ ರಾಜಕಾರಣದತ್ತ ಕೆ.ಬಿ.ಮಲ್ಲಪ್ಪ ಕುಟುಂಬ
ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೆ ಹ್ಯಾಟ್ರಿಕ್ ಬಾರಿಸಿದ ಏಕೈಕ ಶಾಸಕರಾಗಿದ್ದ ಕೆ.ಬಿ.ಮಲ್ಲಪ್ಪ ಅವರ ಕುಟುಂಬ ಈ ಬಾರಿ ಜೆಡಿಎಸ್ ಟಿಕೆಟ್ ನಿರೀಕ್ಷೆಯಲ್ಲಿದೆ. ಮಲ್ಲಪ್ಪ ಅವರ ಪುತ್ರ, ಬೆಂಗಳೂರು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿರುವ ಡಾ. ಮೋಹನ್‍ಕುಮಾರ್ ಕ್ಷೇತ್ರಾದ್ಯಂತ ಮೌನವಾಗಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. 1972ರಲ್ಲಿ ಮೊದಲ ಬಾರಿಗೆ ನ್ಯಾಷನಲ್ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಎಚ್.ಎನ್.ನಂಜೇಗೌಡರ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದ ಮಲ್ಲಪ್ಪ ನಂತರ 1978, 1983, 1985 ರಲ್ಲಿ ಮೂರು ಬಾರಿ ಜನತಾ ಪಾರ್ಟಿಯಿಂದ ಶಾಸಕರಾಗಿದ್ದರು. ಈ ವೇಳೆ ರಾಮಕೃಷ್ಟ ಹೆಗಡೆ ನೇತೃತ್ವದ ಮೂರು ಸರ್ಕಾರದಲ್ಲಿಯೂ (1983-84, 1985-1986, 1986-1988) ಸಚಿವರಾಗಿದ್ದರು. ನಂತರ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಯುವಕ ಎ.ಟಿ.ರಾಮಸ್ವಾಮಿ ವಿರುದ್ಧ 1989ರಲ್ಲಿ ಪರಾಭವಗೊಂಡ ನಂತರ ರಾಮಸ್ವಾಮಿ- ಎ.ಮಂಜು ನಡುವಿನ ಹಣಾಹಣಿಯಲ್ಲಿ ಮಲ್ಲಪ್ಪ ರಾಜಕೀಯವಾಗಿ ಮೇಲೇಳಲೇ ಇಲ್ಲ. 2004ರಲ್ಲಿ ಜೆಡಿಎಸ್‍ನಿಂದ ತಮ್ಮ ಪುತ್ರ ಡಾ. ಮೋಹನ್ ಅವರನ್ನು ಕಣಕ್ಕಿಳಿಸಲು ಬಯಸಿದ್ದರಾದರೂ ಅಲ್ಲಿಗೆ ಎ.ಟಿ.ರಾಮಸ್ವಾಮಿ ವಲಸೆ ಬಂದುದರಿಂದ ಬೇಸರಗೊಂಡ ಮಲ್ಲಪ್ಪ ಡಾ. ಮೋಹನ್ ಅವರನ್ನು ಪಕ್ಷೇತರವಾಗಿ ಕಣಕ್ಕಿಳಿಸಿದಿದ್ದರು. ಈಗ ಹಾಲಿ ಶಾಸಕ ಎ.ಟಿ.ರಾಮಸ್ವಾಮಿ ಮರಳಿ ಕಾಂಗ್ರೆಸ್ ಹೋಗುವ ಮಾತುಗಳು ಕೇಳಿಬರುತ್ತಿದ್ದು, ಮಲ್ಲಪ್ಪ ಕುಟುಂಬಕ್ಕೆ ಮತ್ತೆ ಟಿಕೆಟ್ ನೀಡುವ ಬಗ್ಗೆ ದೇವೇಗೌಡರ ಕುಟುಂಬ ಒಲವು ವ್ಯಕ್ತಪಡಿಸಿದೆ ಎನ್ನಲಾಗುತ್ತಿದೆ.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಎ.ಟಿ.ರಾಮಸ್ವಾಮಿ (ಜೆಡಿಎಸ್) (ಈ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಪ್ರಯತ್ನ ಮಾಡುತ್ತಿದ್ದಾರೆ)
2. ಎ.ಮಂಜು, ಕೃಷ್ಣೇಗೌಡ, ಶ್ರೀಧರ್ ಗೌಡ (ಕಾಂಗ್ರೆಸ್)
3. ಯೋಗಾ ರಮೇಶ್ (ಬಿಜೆಪಿ)
4. ಡಾ. ಮೋಹನ್‍ಕುಮಾರ್ (ಜೆಡಿಎಸ್)
ಇದನ್ನೂ ಓದಿ | ಎಲೆಕ್ಷನ್ ಹವಾ | ಹೊಳೆನರಸೀಪುರ | ಎಚ್.ಡಿ. ರೇವಣ್ಣ ವಿರುದ್ಧ ಪಂಚೆ ಕಟ್ಟಿ ನಿಲ್ಲುವವರಿಗಾಗಿ ಹುಡುಕಾಟ ಜಾರಿಯಲ್ಲಿದೆ !