Site icon Vistara News

Polluted Water: ಕಲುಷಿತ ನೀರಿಗೆ ಮತ್ತೊಂದು ಬಲಿ; ಚಿಕಿತ್ಸೆ ಫಲಿಕಾರಿಯಾಗದೆ ಮಹಿಳೆ ಸಾವು

Polluted Water

ದಾವಣಗೆರೆ: ರಾಜ್ಯದಲ್ಲಿ ಕಲುಷಿತ ನೀರು (Polluted Water) ಸೇವಿಸಿ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕ ಸೃಷ್ಟಿಸಿದೆ. ಈ ಪಟ್ಟಿಗೆ ದಾವಣಗೆರೆಯ ಮಹಿಳೆಯೊಬ್ಬರು ಸೇರಿದ್ದಾರೆ. ಕಲುಷಿತ ನೀರು ಕುಡಿದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹುಣದಘಟ್ಟದಲ್ಲಿ ಈ ಘಟನೆ ನಡೆದಿದೆ.

ಕಲುಷಿತ ನೀರು ಕುಡಿದು ಗ್ರಾಮದ 7 ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಚಂದ್ರಮ್ಮ (60) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾರೆ. ಕಲುಷಿತ ನೀರು ಸೇವಿಸಿ ತೀವ್ರ ಆಸ್ಪಸ್ಥರಾಗಿದ್ದ ಚಂದ್ರಮ್ಮ ಅವರನ್ನು ಆಗಸ್ಟ್‌ 21ರಂದು ಮೆಗ್ಗನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು (ಆಗಸ್ಟ್‌ 25) ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ವಾಂತಿ ಬೇಧಿ, ಜ್ವರದಿಂದ ಬಳಲುತ್ತಿದ್ದ ಚಂದ್ರಮ್ಮ ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನುಳಿದ ಆರು ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಕುಡಿಯುವ ನೀರಿನ ಪೈಪು ಒಡೆದು ಚರಂಡಿ ನೀರು ಮಿಶ್ರಣವಾದ ಹಿನ್ನಲೆ ನೀರು ಕಲುಷಿತಗೊಂಡಿತ್ತು. ಘಟನೆಯಾದ ನಂತರ ಗ್ರಾಮಕ್ಕೆ ಭೇಟಿ ನೀಡಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ನೀರು ಕಲುಷಿತಗೊಳ್ಳದಂತೆ ನೋಡಿಕೊಳ್ಳಲು ಜಾಗೃತಿ ಮೂಡಿಸಿದ್ದರು.

ಕೆಲವೇ ದಿನಗಳ ಅಂತರದಲ್ಲಿ ಮತ್ತೊಂದು ದುರಂತ

ಕೆಲವು ದಿನಗಳ ಹಿಂದೆಯಷ್ಟೇ ಕಲುಷಿತ ನೀರು ಸೇವಿಸಿ 6 ಮಂದಿ ಮೃತಪಟ್ಟ ಘಟನೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದಿತ್ತು. ಆ ದುರಂತ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಜೂನ್‌ನಲ್ಲಿ ಕಲುಷಿತ ನೀರು ಸೇವಿಸಿ ಕೋಲಾರ ಮತ್ತು ಬೆಳಗಾವಿಯಲ್ಲಿ ಇಬ್ಬರು ಮೃತಪಟ್ಟಿದ್ದರು. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕನಸಗೇರಿ ಗ್ರಾಮದ ಹೊಳೆವ್ವಾ ಬಾಳಪ್ಪ ಧನದವರ (38) ಮತ್ತು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಿಣಜೇನಹಳ್ಳಿಯ ವೆಂಕಟರಮಣಪ್ಪ (60) ಮೃತರು.

ಅದಕ್ಕೂ ಮುನ್ನ ಕಲುಷಿತ ನೀರು ಸೇವಿಸಿ ಉಂಟಾದ ಅಸ್ವಸ್ಥೆಯಿಂದ ಒಂದೇ ಗ್ರಾಮದಲ್ಲಿ ನಾಲ್ವರು ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರದಲ್ಲಿ ವರದಿಯಾಗಿತ್ತು. ವೀರಪ್ಪಲ್ಲಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆ ಪ್ರಕರಣದಿಂದ ನಾಲ್ವರು ಮೃತಪಟ್ಟಿದ್ದರು. ಅದೇ ರೀತಿ ವೀರಾಪುರ ಗ್ರಾಮದಲ್ಲಿಯೂ ‌ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಗಂಗಮ್ಮ (70) ಮುನಿನಾರಾಯಣಮ್ಮ (74), ಲಕ್ಷ್ಮಮ್ಮ (70). ನರಸಿಂಹಪ್ಪ (75) ಎಂಬವರು ಮೃತಪಟ್ಟಿದ್ದರು.

ಗ್ರಾಮ ಪಂಚಾಯತ್‌ ವತಿಯಿಂದ ಪೂರೈಸಿದ್ದ ನೀರು ಕಲುಷಿತಗೊಂಡಿದ್ದ ಕಾರಣ ಆರೋಗ್ಯ ಸಮಸ್ಯೆ ಉಂಟಾಗಿದೆ ಎಂದು ಆರೂಪಿಸಿದ್ದ ಗ್ರಾಮಸ್ಥರು ನೀರು ಸರಬರಾಜು ಮಾಡಿರುವ ಕೋಟಗಲ್ ಗ್ರಾಮ ಪಂಚಾಯತ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಒಂದೇ ವಾರದಲ್ಲಿ ಗ್ರಾಮದಲ್ಲಿ ನಾಲ್ಕು ಸರಣಿ ಸಾವಾದರೂ ಪಿಡಿಒ ಎಚ್ಚೆತ್ತುಕೊಂಡಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದರು. ಗ್ರಾಮದಲ್ಲಿ ಚರಂಡಿಗಳು ಕಟ್ಟಿಕೊಂಡು ವಾಸನೆ ಬರುತ್ತಿವೆ. ಅದನ್ನೆಲ್ಲ ರಿಪೇರಿ ಮಾಡದ ಕಾರಣ ಕುಡಿಯುವ ನೀರಿನೊಂದಿಗೆ ಮಿಶ್ರಣಗೊಳ್ಳುತ್ತಿದೆ. ಅದರಿಂದಾಗಿಯೇ ಸಮಸ್ಯೆ ಎದುರಾಗಿದೆ ಎಂದೂ ದೂರಿದ್ದರು.

ಇದನ್ನೂ ಓದಿ: Contaminated Water : ಬೆಳಗಾವಿ, ಕೋಲಾರದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವು

Exit mobile version