ಬೆಂಗಳೂರು: ʼಮುಂಗಾರು ಮಳೆʼ (Mungaru Male) ಚಿತ್ರದ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಪೂಜಾ ಗಾಂಧಿ(Pooja Gandhi) ಅವರ ವಿವಾಹ ನಾಳೆ (ನವೆಂಬರ್ 29) ನಡೆಯಲಿದೆ. ಬೆಂಗಳೂರಿನ ವಿಜಯ್ ಘೋರ್ಪಡೆ ಅವರೊಂದಿಗೆ ಪೂಜಾ ಗಾಂಧಿ ಸಪ್ತಪದಿ ತುಳಿಯಲಿದ್ದಾರೆ. ಈ ಬಗ್ಗೆ ಸ್ವತಃ ನಟಿಯೇ ಅಧಿಕೃತವಾಗಿ ತಿಳಿಸಿದ್ದಾರೆ. ತಮ್ಮ ಮದುವೆಯ ಕರೆಯೋಲೆಯನ್ನು ಪೂಜಾ ಗಾಂಧಿ ಸ್ವತಃ ಕನ್ನಡದಲ್ಲೇ ಬರೆದಿರುವುದು ಗಮನ ಸೆಳೆದಿದೆ. ಮಂತ್ರ ಮಾಂಗಲ್ಯ ಪದ್ಧತಿ ಪ್ರಕಾರ ಪೂಜಾ ಗಾಂಧಿ ಸರಳವಾಗಿ ಮದುವೆಯಾಗಲಿದ್ದಾರೆ.
ಪೂಜಾ ಗಾಂಧಿ ಬರೆದ ಕರೆಯೋಲೆಯಲ್ಲೇನಿದೆ?
ಪ್ರೀತಿಯ ಮಾಧ್ಯಮ ಮಿತ್ರರಿಗೆ,
ಆತ್ಮೀಯರೇ, ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ನನ್ನ ಚಿತ್ರ ಜೀವನದ ಎಲ್ಲ ಬೆಳವಣಿಗೆಯಲ್ಲಿ ನೀವು ನನ್ನ ಜತೆಗಿದ್ದೀರಿ. ನವೆಂಬರ್ 29ರಂದು ಸಂಜೆ ಕುವೆಂಪು ಆಶಯದ ʼಮಂತ್ರ ಮಾಂಗಲ್ಯʼದ ಮೂಲಕ ವಿಜಯ್ ಘೋರ್ಪಡೆಯವರೊಂದಿಗೆ ಮದುವೆಯಾಗುತ್ತಿದ್ದೇನೆ. ಕುಟುಂಬದವರಾಗಿ ನೀವು ಬಂದು ಹರಸಿ, ಆಶೀರ್ವದಿಸಿ.
ತಮ್ಮಲ್ಲಿ ನನ್ನ ಮನವಿ: ಮದುವೆಯ ಸಮಯದಲ್ಲಿ ಯಾವುದೇ ಕ್ಯಾಮೆರಾಗಳಿಗೆ ಅವಕಾಶವಿರುವುದಿಲ್ಲ. ಅನ್ಯಥಾ ಭಾವಿಸಬೇಡಿ. ನಾವೇ ನಿಮಗೆ ಸಾಧ್ಯವಾದಷ್ಟು ಫೋಟೊಗಳನ್ನು ಮತ್ತು ದೃಶ್ಯಗಳನ್ನು ತಲುಪಿಸುತ್ತೇವೆ. ಮದುವೆಯ ಸಮಯ ಮತ್ತು ಸ್ಥಳವನ್ನು ನಾಳೆ ಬೆಳಗ್ಗೆ ನಮ್ಮ ಪಿಆರ್ಒ ಸುಧೀಂದ್ರ ವೆಂಕಟೇಶ್ ತಿಳಿಸುತ್ತಾರೆ. ಈ ಶುಭ ಸಂದರ್ಭದಲ್ಲಿ ಮತ್ತೊಮ್ಮೆ ನಿಮಗೆಲ್ಲರಿಗೂ ನನ್ನ ಮನದಾಳದ ಧನ್ಯವಾದಗಳು ಎಂದು ಪೂಜಾ ಗಾಂಧಿ ಕರೆಯೋಲೆಯಲ್ಲಿ ಬರೆದಿದ್ದಾರೆ.
ಮೂಲತಃ ಉತ್ತರ ಪ್ರದೇಶದವರಾದ ಪೂಜಾ ಗಾಂಧಿ ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತ ಬೆಂಗಳೂರಿನಲ್ಲೇ ಕೆಲವು ಸಮಯದಿಂದ ನೆಲೆಸಿದ್ದಾರೆ. ತಮ್ಮ ಕನ್ನಡ ಪ್ರೀತಿಯಿಂದಲೇ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಕನ್ನಡ ಮಾತನಾಡಲು ಅಷ್ಟೇ ಅಲ್ಲ ಓದಲು ಮತ್ತು ಬರೆಯಲು ಅವರು ಕಲಿತಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.
ವಿಜಯ್ ಅವರೇ ಪೂಜಾ ಗಾಂಧಿಯವರಿಗೆ ಕನ್ನಡ ಕಲಿಸಿರುವುದಾಗಿ ಮಾಹಿತಿ ಇದೆ. ಪೂಜಾ ಗಾಂಧಿ ಹಾಗೂ ವಿಜಯ್ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದರು. ಕನ್ನಡ ಕಲಿತು ಕನ್ನಡಿಗನನ್ನು ಮದುವೆಯಾಗುವ ಮೂಲಕ ಕರ್ನಾಟಕದ ಸೊಸೆ ಆಗಲು ಪೂಜಾ ಸಿದ್ಧರಾಗಿದ್ದಾರೆ. ಪೂಜಾ ಗಾಂಧಿ ಕನ್ನಡ ಕಲಿತಿರುವುದು ಮಾತ್ರವಲ್ಲ ಅವರ ತಾಯಿಗೂ ಕನ್ನಡ ಹೇಳಿ ಕೊಟ್ಟಿದ್ದಾರೆ ಎನ್ನುವುದು ವಿಶೇಷ. 2012ರಲ್ಲಿ ಪೂಜಾ ಗಾಂಧಿ ಅವರಿಗೆ ಉದ್ಯಮಿ ಆನಂದ್ ಗೌಡ ಜತೆ ನಿಶ್ಚಿತಾರ್ಥವಾಗಿತ್ತು. ನಂತರ ಅದು ಮುರಿದು ಬಿದ್ದಿತ್ತು.
ಇದನ್ನೂ ಓದಿ: Pooja Gandhi: ಮಳೆ ಹುಡುಗಿಗೆ ಕೂಡಿಬಂತು ಕಂಕಣ ಭಾಗ್ಯ; ವರ ಯಾರು?
ಹಿಂದಿ, ಬಂಗಾಳಿ ಚಿತ್ರಗಳಲ್ಲಿ ನಟಿಸುತ್ತಿದ್ದ ಪೂಜಾ ಗಾಂಧಿ 2006ರಲ್ಲಿ ತೆರೆಕಂಡ ʼಮುಂಗಾರು ಮಳೆʼ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟರು. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ ಕನ್ನಡದಲ್ಲಿ ದಾಖಲೆಯ ಕಲೆಕ್ಷನ್ ಮಾಡಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪೂಜಾ ಗಾಂಧಿ ಈ ಚಿತ್ರದ ಮೂಲಕ ಸ್ಟಾರ್ ಆಗಿ ಹೊರ ಹೊಮ್ಮಿದ್ದರು. ಬಳಿಕ ಪೂಜಾ ಗಾಂಧಿ ಪುನೀತ್ ರಾಜ್ ಕುಮಾರ್, ಯಶ್, ಉಪೇಂದ್ರ ಮುಂತಾದವರ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಜತೆಗೆ ತಮಿಳು, ತೆಲುಗು, ಮಲೆಯಾಳಂ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ