ಬೆಂಗಳೂರು: ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿಗೆ (Pooja Gandhi) ಕಂಕಣ ಭಾಗ್ಯ ಕೂಡಿಬಂದಿದೆ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನ ಜತೆ ವಿವಾಹ ಜೀವನಕ್ಕೆ ಕಾಲಿಡಲು ನಟಿ ಸಜ್ಜಾಗಿದ್ದು, ಬೆಂಗಳೂರಿನ ಲಾಜಿಸ್ಟಿಕ್ ಕಂಪನಿಯ ಮಾಲೀಕನ ಜತೆ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದ್ದು, ನವೆಂಬರ್ 29ರಂದು ಬೆಂಗಳೂರಿನ ಯಲಹಂಕದಲ್ಲಿ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಸರಳವಾಗಿ ನಟಿಯ ಮದುವೆ ನಡೆಯಲಿದೆ ಎಂಬ ಮಾಹಿತಿ ಇದೆ. ಬೆಂಗಳೂರಿನ ಲಾಜೆಸ್ಟಿಕ್ ಕಂಪನಿ ಓನರ್ ವಿಜಯ್, ಪೂಜಾ ಗಾಂಧಿ ಅವರನ್ನು ವರಿಸಲಿದ್ದಾರೆ ಎಂದು ತಿಳಿದುಬಂದಿದೆ.
ವಿಜಯ್ ಅವರೇ ಪೂಜಾ ಗಾಂಧಿಯವರಿಗೆ ಕನ್ನಡ ಕಲಿಸಿರುವುದಾಗಿ ಮಾಹಿತಿ ಇದೆ. ಮುಂಗಾರುಮಳೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಪೂಜಾ ಗಾಂಧಿ, ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದಾರೆ.
ಕನ್ನಡವನ್ನು ಕಲಿತು ಕನ್ನಡಿಗರಿಂದ ಬೇಷ್ ಎನಿಸಿಕೊಂಡಿರೋ ಮುಂಗಾರು ಮಳೆ ಬೆಡಗಿ ಹಾಗೂ ವಿಜಯ್ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದರು, ಇದೀಗ ಮದುವೆಗೆ ರೆಡಿ ಆಗಿದ್ದಾರೆ. ಕನ್ನಡ ಕಲಿತು ಕನ್ನಡಿಗನನ್ನು ಮದುವೆಯಾಗುವ ಮೂಲಕ ಕರ್ನಾಟಕದ ಸೊಸೆ ಆಗಲು ಪೂಜಾ ಸಿದ್ಧವಾಗುತ್ತಿದ್ದಾರೆ ಎನ್ನಲಾಗಿದೆ.
ಕುಟುಂಬಸ್ಥರು, ಬಂದು-ಮಿತ್ರರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಲು ನಟಿ ನಿಶ್ಚಯಿಸಿದ್ದಾರೆ. ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾಗಲು ಪೂಜಾ ಗಾಂಧಿ ನಿರ್ಧರಿಸಿದ್ದಾರೆ.
ಇದನ್ನೂ ಓದಿ | ಆಲಿಯಾ ಭಟ್, ಮನೋಜ್ ಬಾಜಪೇಯಿಗೆ ಫಿಲ್ಮ್‌ಫೇರ್ ಒಟಿಟಿ ಅವಾರ್ಡ್, ಮತ್ತೆ ಯಾರೆಲ್ಲ ಪ್ರಶಸ್ತಿ ಪಡೆದರು?
2012ರಲ್ಲಿ ಪೂಜಾ ಗಾಂಧಿ ಅವರಿಗೆ ಉದ್ಯಮಿ ಆನಂದ್ ಗೌಡ ಜತೆ ನಿಶ್ಚಿತಾರ್ಥವಾಗಿ, ನಂತರ ಮುರಿದು ಬಿದ್ದಿತ್ತು. ಆದರೆ, ಈಗ ಹರಿದಾಡುತ್ತಿರುವ ಮದುವೆ ವಿಷಯದ ಬಗ್ಗೆ ನಟಿ ಎಲ್ಲಿಯೂ ಮಾಹಿತಿ ಹಂಚಿಕೊಂಡಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ