ಬೆಂಗಳೂರು: ರಾಜ್ಯದಲ್ಲೀಗ ಪೋಸ್ಟರ್ ಪೊಲಿಟಿಕ್ಸ್ (Poster Politics) ಜೋರಾಗಿದೆ. ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಭ್ರಷ್ಟಾಚಾರ ಆರೋಪ ಮಾಡುವ ಜತೆಗೆ ನೇರವಾಗಿ ಕ್ಯೂಆರ್ ಕೋಡ್‌ನಲ್ಲಿ ಸಿಎಂ ಭಾವಚಿತ್ರದೊಂದಿಗೆ “ಪೇಸಿಎಂ, 40 ಪರ್ಸೆಂಟ್ ಆ್ಯಕ್ಸೆಪ್ಟೆಡ್” ಎಂದು ಬರೆದ ಪೋಸ್ಟರ್ ಅಂಟಿಸಿದವರನ್ನು ಬಂಧಿಸಿ, ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದೆ. ಇಷ್ಟೆಲ್ಲ ಮಾಡಿದ ಬಿಜೆಪಿ ಸರ್ಕಾರವೀಗ ಈಗ ಪೋಸ್ಟರ್, ಪುಸ್ತಕದ ರಾಜಕೀಯಕ್ಕೆ ಇಳಿದಿದೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಸಿದ್ದರಾಮಯ್ಯ ಅಧಿಕಾರದ ಅವಧಿಯಲ್ಲಿ ಶೇ.೧೦೦ರಷ್ಟು ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಬಿಂಬಿಸುವ “ಸ್ಕ್ಯಾಮ್ ರಾಮಯ್ಯ” ಎಂಬ ಪುಸ್ತಕವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಿಡುಗಡೆ ಮಾಡಿದರು. ಹಾಗೆಯೇ, “ಪೇ ಸಿಎಂ ಎಂದರೆ ಪೇ ಕಾಂಗ್ರೆಸ್ ಮೇಡಂ ಎಂದು ಟೀಕಿಸಿದರು. ಆ ಮೂಲಕ ಪೋಸ್ಟರ್ ಅಂಟಿಸಿದವರನ್ನು ಬಂಧಿಸಿ, ಸಿಸಿಬಿಗೆ ವಹಿಸಿದ್ದ ಸರ್ಕಾರವೀಗ, ತಾನೇ ಪೋಸ್ಟರ್, ಪುಸ್ತಕದ ರಾಜಕೀಯವನ್ನು ಇಮ್ಮಡಿಗೊಳಿಸಿದೆ.
ಸ್ಕ್ಯಾಮ್ ರಾಮಯ್ಯ ಪುಸ್ತಕ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಕಟೀಲ್, “ಕಾಂಗ್ರೆಸ್ ಮೇಡಂಗೆ (ಸೋನಿಯಾ ಗಾಂಧಿ) ಮಾಡುವ ಪೇಮೆಂಟ್ ಬಗ್ಗೆ ಇರುವ ಪುಸ್ತಕ ಇದಾಗಿದೆ. ಡಿ.ಕೆ.ಶಿವಕುಮಾರ್ ಅವರು ಚೀಟಿ ನುಂಗಿದ್ದನ್ನು ನೋಡಿದ್ದೀರಿ. ಹಾಗಾಗಿ, ಅವರು ಚೀಟಿ ಶಿವಕುಮಾರ್ ಆಗಿದ್ದಾರೆ” ಎಂದು ಟೀಕಿಸಿದರು. “ದೇಶದಲ್ಲಿ ಸುದೀರ್ಘ ಅವಧಿಯ ಆಡಳಿತ ನಡೆಸಿದ ಕಾಂಗ್ರೆಸ್, ಭ್ರಷ್ಟಾಚಾರಕ್ಕೆ ಅತಿದೊಡ್ಡ ಕೊಡುಗೆ ಕೊಟ್ಟಿದೆ. ನೆಹರು ಅವರಿಂದ ಮನಮೋಹನ್ ಸಿಂಗ್ ಅವಧಿಯವರೆಗೆ ಕಾಂಗ್ರೆಸ್ ಭ್ರಷ್ಟಾಚಾರ ಎಸಗಿದೆ” ಎಂದು ಆರೋಪಿಸಿದರು.
ನಾನೇ ಪೋಸ್ಟರ್ ಅಂಟಿಸುವೆ ಎಂದು ಸಿದ್ದು ಸವಾಲು
ಪೇ ಸಿಎಂ ಪೋಸ್ಟರ್ ಅಂಟಿಸಿದವರನ್ನು ಬಂಧಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. “ರಾಜ್ಯ ಸರ್ಕಾರದ ಲಂಚುಗುಳಿತನದ ಬಗ್ಗೆ ಪಕ್ಷದ ಕಾರ್ಯಕರ್ತರ ಜತೆ ನಾನೇ ಪೋಸ್ಟರ್ ಅಂಟಿಸುತ್ತೇನೆ. ತಾಕತ್ತಿದ್ದರೆ ನಮ್ಮನ್ನೂ ಬಂಧಿಸಲಿ. ರಾಜ್ಯದಲ್ಲಿ ಹೊಸ ಕಾನೂನು ಜಾರಿಯಲ್ಲಿದೆ. ಇಲ್ಲಿ ಲಂಚ ತಿಂದರೆ ಅಪರಾಧ ಅಲ್ಲ. ತಿಂದಿದ್ದನ್ನು ಹೇಳಿದರೆ ಅಪರಾಧ. ಅಷ್ಟಕ್ಕೂ ಪೊಲೀಸರ ಮೂಲಕ ಎಷ್ಟು ಜನರ ಬಾಯಿ ಮುಚ್ಚಿಸುತ್ತೀರಿ? ಎಷ್ಟು ಮಂದಿಯನ್ನು ಜೈಲಿಗೆ ಹಾಕುತ್ತೀರಿ? ನಾನೂ ಪೋಸ್ಟರ್ ಅಂಟಿಸುತ್ತೇನೆ. ತಾಕತ್ತಿದ್ದರೆ ಬಂಧಿಸಿ” ಎಂದು ಸವಾಲು ಹಾಕಿದರು.
“ನನ್ನ ಮತ್ತು ಡಿ.ಕೆ.ಶಿವಕುಮಾರ್ ಬಗ್ಗೆ ಪೋಸ್ಟರ್ ಅಂಟಿಸಿದ್ದರಲ್ಲ, ಅದರ ಬಗ್ಗೆ ಮುಖ್ಯಮಂತ್ರಿಗಳು ಯಾಕೆ ಮೌನವಾಗಿದ್ದಾರೆ? ಪೊಲೀಸರ ಕಣ್ಣು ಯಾಕೆ ಕುರುಡಾಗಿದೆ? ಬಿಜೆಪಿಯ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿಯೇ ನನ್ನ ವಿರುದ್ಧ ಕುತ್ಸಿತ ಹೇಳಿಕೆಗಳು, ವಿರೂಪಗೊಳಿಸಿದ ಫೋಟೊಗಳ ವಿವರ ಕೊಡುತ್ತೇನೆ, ಅವರನ್ನೂ ಬಂಧಿಸಿ ನೋಡೋಣ. ಏನು ಮುಖ್ಯಮಂತ್ರಿಗಳೇ, ಬೇರೆಯವರಿಗೆ ಚುಚ್ಚಿದಾಗ ಖುಷಿಪಟ್ಟಿರಿ, ಈಗ ಯಾರೋ ನಿಮಗೆ ಚುಚ್ಚಿದಕ್ಕೆ ನೋವಾಯ್ತಾ?” ಎಂದು ಕುಟುಕಿದರು.
ನಗರ ಪೊಲೀಸ್ ಆಯುಕ್ತರಿಗೂ ಸಿದ್ದರಾಮಯ್ಯ ತರಾಟೆ
ಪೇ ಸಿಎಂ ಪೋಸ್ಟರ್ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರಿಗೆ ದೂರವಾಣಿ ಕರೆ ಮಾಡಿದ ಸಿದ್ದರಾಮಯ್ಯ, ತರಾಟೆಗೆ ತೆಗೆದುಕೊಂಡರು. “ಐಪಿಸಿಯ ಯಾವ ಸೆಕ್ಷನ್ ಅಡಿ ಬಂಧಿಸಿದ್ದೀರಿ? ನಮ್ಮ ಕಾರ್ಯಕರ್ತರನ್ನು ಮಾತ್ರ ಏಕೆ ಟಾರ್ಗೆಟ್ ಮಾಡುತ್ತಿದ್ದೀರಿ? ಬಿಜೆಪಿಯವರು ನಮ್ಮ ಪೋಸ್ಟರ್ ಅಂಟಿಸುವ ಜತೆಗೆ ಜಾಲತಾಣಗಳಲ್ಲೂ ಹರಿದಾಡುವಂತೆ ಮಾಡಿದ್ದಾರೆ. ಹಾಗಾದರೆ, ಅವರನ್ನು ಏಕೆ ಬಂಧಿಸಿಲ್ಲ? ಒಂದು ಪಕ್ಷದ ಪರವಾಗಿ ಕೆಲಸ ಮಾಡಬೇಡಿ” ಎಂಬುದಾಗಿ ಹೇಳಿದ್ದಾರೆ.
ಇದನ್ನೂ ಓದಿ | PAYCM ಪೋಸ್ಟರ್ ಪ್ರಕರಣ | ಐದು ಕೇಸ್‌ಗಳ ತನಿಖೆ ಸಿಸಿಬಿಗೆ ವರ್ಗಾವಣೆ