ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುಂಡಿ ಮುಚ್ಚಲು (Pothole) ಕೊಟ್ಟಿದ್ದ ಗಡುವು ಇಂದಿಗೆ (ನವೆಂಬರ್ ೧೫) ಅಂತ್ಯವಾಗಿದೆ. ಆದರೆ, ಬೆಂಗಳೂರು ತುಂಬೆಲ್ಲ ಮೃತ್ಯು ಸ್ವರೂಪಿ ಗುಂಡಿ, ಗಟಾರಗಳು ರಾಚುತ್ತಿವೆ. ಗಡುವಿಗೆ ಬದ್ಧವಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಅಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಕ್ಷಣ ಬೆಂಗಳೂರಿನ ಎಲ್ಲ ವಿಧಾನಸಭೆ ಕ್ಷೇತ್ರಗಳ ಶಾಸಕರು, ಚುನಾಯಿತ ಪ್ರತಿನಿಧಿಗಳ ಸಭೆ ಕರೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ, ಜೆಡಿಎಸ್ ಉಪ ನಾಯಕ ಟಿ.ಎ. ಶರವಣ ಆಗ್ರಹಿಸಿದ್ದಾರೆ.
ಇದೊಂದು ಸುಳ್ಳು ಹೇಳುವ ಸರ್ಕಾರವಾಗಿದೆ. ದಪ್ಪ ಚರ್ಮದ ಜನದ್ರೋಹಿ ಪಾಲಿಕೆ ಎಂದು ವಾಗ್ದಾಳಿ ನಡೆಸಿರುವ ಶರವಣ, ನಿಗದಿತ ಅವಧಿಯಲ್ಲಿ ಕೊಟ್ಟ ಗಡುವಿನ ಅನುಸಾರ ಕಾರ್ಯನಿರ್ವಹಿಸಿಲ್ಲ. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಗುಂಡಿಗಳನ್ನು ಮುಚ್ಚದೆ ಹಾಗೆ ಬಿಟ್ಟ ಅಧಿಕಾರಿಗಳ ಹೆಸರನ್ನು ಪಟ್ಟಿ ಮಾಡಿ, ಸಮಗ್ರ ವಿವರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ ಎಂದು ಶರವಣ ಒತ್ತಾಯಿಸಿದ್ದಾರೆ.
ಪಾಲಿಕೆಯ ಬೇಜವಾಬ್ದಾರಿತನಕ್ಕೆ ಸೋಮವಾರ (ನ.೧೪) ರಾಜಾಜಿನಗರದಲ್ಲಿ ಇನ್ನೊಂದು ಬಲಿಯಾಗಿದೆ. ಗುಂಡಿಗಳಿಂದಾಗಿ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಇವು ಅಪಘಾತಗಳಲ್ಲ, ಸರ್ಕಾರ, ಪಾಲಿಕೆಯ ನಿರ್ಲಕ್ಷ್ಯದ ಕಾರಣಕ್ಕೆ ನಡೆಯುತ್ತಿರುವ ರಸ್ತೆ ಹತ್ಯೆಗಳಾಗಿವೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ | Pothole | ರಸ್ತೆಗುಂಡಿಗಳ ಮೇಲೆ ಸಂಪತ್ತಿನ ಗೋಪುರ ಕಟ್ಟುವ ಬಿಜೆಪಿ ಸರ್ಕಾರ: ಎಚ್.ಡಿ.ಕುಮಾರಸ್ವಾಮಿ ಆಕ್ರೋಶ
ಗಡುವಿಗೆ ಬದ್ಧವಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಏಳು ಮಂದಿ ಮಂತ್ರಿಗಳು ಇಲ್ಲಿನವರಾಗಿದ್ದು, ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಬೆಂಗಳೂರು ಉಸ್ತುವಾರಿ ಆಗಿದ್ದಾರೆ. ಆದರೂ ಇಲ್ಲಿ ಹೇಳುವವರು, ಕೇಳುವವರು ಗತಿ ಇಲ್ಲದಂತಾಗಿದೆ. ದಿಕ್ಕು ತಪ್ಪಿರುವ ಬೆಂಗಳೂರು ರಸ್ತೆಗಳಲ್ಲಿ ಈಗ ಸಂಭವಿಸಿರುವ ಸಾವುಗಳಿಗೆ ಮುಖ್ಯಮಂತ್ರಿಯೇ ಹೊಣೆ ಎಂದು ಶರವಣ ಟೀಕಿಸಿದ್ದಾರೆ.
ಬಿಬಿಎಂಪಿ ಆಯುಕ್ತರು ಕೊಟ್ಟಿದ್ದ ಗಡುವು
ಇದೇ ನವೆಂಬರ್ ೧೫ರೊಳಗೆ ಬೆಂಗಳೂರಿನ ಎಲ್ಲ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದರು. ಬೆಂಗಳೂರಿನಲ್ಲಿ ಬಿಬಿಎಂಪಿ ವತಿಯಿಂದ ೩೨,೦೧೧ ರಸ್ತೆ ಗುಂಡಿಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ೨೯೫೧೭ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಬಾಕಿ ಇರುವ ೨,೪೯೪ ರಸ್ತೆ ಗುಂಡಿಗಳನ್ನು ಈ ಅವಧಿಯಲ್ಲಿ ಮುಚ್ಚುವುದಾಗಿ ಹೇಳಿಕೆ ನೀಡಿದ್ದರು. ಆದರೆ, ಈಗ ಮಾತಿಗೆ ಬಿಬಿಎಂಪಿ ತಪ್ಪಿದೆ ಎಂದು ಟಿ.ಎ. ಶರವಣ ಆಕ್ರೋಶವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ | Pothole | ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಮತ್ತೊಬ್ಬ ಬೈಕ್ ಸವಾರ ಬಲಿ; ಸಾರ್ವಜನಿಕರ ಆಕ್ರೋಶ