ಬಳ್ಳಾರಿ: ಇಲ್ಲಿನ ವಿಜಯನಗರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ವಿಮ್ಸ್) ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದ್ದರಿಂದ ಆಸ್ಪತ್ರೆಯ ಹಳೆ ಐಸಿಯುನಲ್ಲಿದ್ದ ಇಬ್ಬರು ವೆಂಟಿಲೇಟರ್ ಸಮಸ್ಯೆಯಿಂದ ಮೃತ ಪಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ.
ಈ ರೀತಿ ಆರೋಪ ಮಾಡಿರುವ ಒಂದು ವಿಡಿಯೊ ಹರಿದಾಡುತ್ತಿದೆ. ಅಲ್ಲಿನ ರೋಗಿಗಳ ಸಂಬಂಧಿಗಳೇ ವಿಡಿಯೊ ಮಾಡಿದ್ದಾರೆಂದು ಹೇಳಲಾಗುತ್ತಿದೆ. ವಿದ್ಯುತ್ ವ್ಯತ್ಯಯವಾಗಿ ವಿಮ್ಸ್ ಐಸಿಯುನಲ್ಲಿರುವ ರೋಗಿಗಳು ಮೃತ ಪಟ್ಟಿದ್ದಾರೆಂಬ ಧ್ವನಿಯು ವಿಡಿಯೋದಲ್ಲಿದೆ. ಆದರೆ ಮೃತ ರೋಗಿಗಳ ಯಾವೊಬ್ಬ ಸಂಬಂಧಿಗಳೂ ಈ ಬಗ್ಗೆ ದೂರು ಕೊಟ್ಟಿಲ್ಲ, ಮಾಧ್ಯಮಗಳಿಗೆ ಹೇಳಿಕೆಯನ್ನೂ ನೀಡಿಲ್ಲ.
ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೌಲಾ ಹುಸೇನ್ ಮತ್ತು ಚೆಟ್ಟೆಮ್ಮ ಎನ್ನುವವರು ಕರೆಂಟ್ ಇಲ್ಲದೆ ಮೃತ ಪಟ್ಟಿದ್ದಾರೆಂದು ವಿಡಿಯೊದಲ್ಲಿ ಆರೋಪಿಸಲಾಗಿದೆ. ಆದರೆ ವಿಮ್ಸ್ ಮೂಲಗಳ ಪ್ರಕಾರ ಇದು ಕರೆಂಟ್ ವ್ಯತ್ಯಯದಿಂದ ಉಂಟಾಗಿರುವ ಸಮಸ್ಯೆಯಲ್ಲ, ತೀವ್ರ ಅನಾರೋಗ್ಯದಿಂದ ಮೃತ ಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತವಾಗಿ ವಿಮ್ಸ್ ಯಾವುದೇ ಸ್ವಷ್ಟನೆ ನೀಡಿಲ್ಲ. ವಿಮ್ಸ್ ನಿರ್ದೇಶಕರು ಕರೆಯನ್ನು ಸ್ವೀಕರಿಸಿಲ್ಲ.
ಐಸಿಯುನಲ್ಲಿ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟದ ವ್ಯವಸ್ಥೆ, ಕಾರ್ಡಿಯಾಕ್ ಮಾನಿಟರ್ ಮೂಲಕ ಹೃದಯದ ಚಲನವಲನ ತಿಳಿಯಲು ವಿದ್ಯುತ್ ಸಂಪರ್ಕ ಕಡ್ಡಾಯವಾಗಿ ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ವಿದ್ಯುತ್ ವ್ಯತ್ಯಯವಾದರೆ ರೋಗಿಗಳಿಗೆ ಸಮಸ್ಯೆಯಾಗಲಿದೆ ಎಂದು ಹೇಳಲಾಗುತ್ತಿದೆ.
ವಿದ್ಯುತ್ ವ್ಯತ್ಯಯವಾಗಿದ್ದು ನಿಜ?
ವಿಡಿಯೊದಲ್ಲಿ ಆರೋಪ ಮಾಡಿರುವ ಅವಧಿಯಲ್ಲಿ ವಿಮ್ಸ್‌ನಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದು ನಿಜ ಎಂದು ಹೇಳಲಾಗುತ್ತಿದೆ. ವಿದ್ಯುತ್ ಸಮಸ್ಯೆಯಿಂದ ಎಕ್ಸ್ ರೇ ಸೇರಿದಂತೆ ಇತರ ಘಟಕಗಳಿಗೆ ತೊಂದರೆಯಾಗಿತ್ತು ಎಂದು ಹೇಳಲಾಗುತ್ತಿದೆ. ಬುಧವಾರ 10 ಗಂಟೆಯ ನಂತರದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆಯನ್ನು ಸರಿಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕರೆಂಟ್ ಸಮಸ್ಯೆಯಾಗಿರುವುದು, ಹರಿದಾಡುತ್ತಿರುವ ಶಂಕಿತ ವಿಡಿಯೊದ ಬಗ್ಗೆ, ಮೃತ ಪಟ್ಟಿದ್ದಾರೆಂಬ ಆರೋಪದ ಬಗ್ಗೆಯೂ ವಿಮ್ಸ್ ದೃಢಪಡಿಸಿಲ್ಲ ಮತ್ತು ಸ್ವಷ್ಟನೆ ನೀಡದಿರುವುದು ಅನುಮಾನ ಮೂಡಿಸುತ್ತದೆ.