ಚಿಕ್ಕಬಳ್ಳಾಪುರ: ʼನಮಸ್ತೆ ಚಿಕ್ಕಬಳ್ಳಾಪುರʼ ಕಾರ್ಯಕ್ರಮದ ಮೂಲಕ ಮನೆಮಾತಾಗಿರುವ ಶಾಸಕ ಪ್ರದೀಪ್ ಈಶ್ವರ್ ಅವರು ಇದೀಗ, ಪೌರಕಾರ್ಮಿಕರಿಗೆ ಪಾದ ಪೂಜೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಪೌರ ಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ನಗರಸಭೆ ಆವರಣದಲ್ಲಿ ಶಾಸಕರು (Pradeep Eshwar) ಪಾದ ಪೂಜೆ ಮಾಡಿ ಗೌರವ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಅವರು, ಪೌರ ಕಾರ್ಮಿಕರು ಪ್ರಾಣದ ಹಂಗು ತೊರೆದು ನಗರ ಸ್ವಚ್ಛತೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಅವರಿಗೆ ಗೌರವ ಸಮರ್ಪಣೆ ಮಾಡಲಾಗಿದೆ. ಯಾರೂ ಪೌರಕಾರ್ಮಿಕರನ್ನು ಯಾರು ಕೀಳಾಗಿ ಕಾಣಬಾರದು. ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಈ ಬಾರಿ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಪ್ರಭಾವಿ ಸಚಿವ, ಬಿಜೆಪಿಯ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದರು. ʼಪರಿಶ್ರಮ ನೀಟ್ ಅಕಾಡೆಮಿʼ ಮೂಲಕ ಪರಿಚಿತರಾಗಿದ್ದ ಪ್ರದೀಪ್ ಈಶ್ವರ್ ಅವರು, ಶಾಸಕರಾದ ಬಳಿಕ ʼನಮಸ್ತೆ ಚಿಕ್ಕಬಳ್ಳಾಪುರʼ ಎಂಬ ಕಾರ್ಯಕ್ರಮದ ಮೂಲಕ ಕ್ಷೇತ್ರದ ಗ್ರಾಮಗಳಲ್ಲಿ ಮನೆಮನೆಗೆ ಹೋಗಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.
ಇದನ್ನೂ ಓದಿ | Congress Politics : ಮೂರಲ್ಲ ಐದು ಡಿಸಿಎಂ ಬೇಕು; ಬಸವರಾಜ ರಾಯರೆಡ್ಡಿ ಹೊಸ ಬೇಡಿಕೆ; ಡಿಕೆಶಿ principal DCM ಆಗಲಿ!
ಮನೆಮನೆ ಭೇಟಿ ವೇಳೆ ವಿದ್ಯಾರ್ಥಿಗಳು, ವೃದ್ಧರಿಗೆ ನೆರವು ನೀಡುವ ಜತೆಗೆ ಅನಾರೋಗ್ಯ ಸಮಸ್ಯೆಯುಳ್ಳವರಿಗೆ ಚಿಕಿತ್ಸೆಯ ಭರವಸೆ ನೀಡುತ್ತಿದ್ದಾರೆ. ಇತ್ತೀಚೆಗೆ ಕ್ಷೇತ್ರದಲ್ಲಿ ತಾಯಿಯ ಸ್ಮರಣಾರ್ಥ ʼಅಮ್ಮʼ ಹೆಸರಿನ ಐದು ಆಂಬ್ಯುಲೆನ್ಸ್‌ಗಳನ್ನು ಜನರ ಸೇವೆಗಾಗಿ ನೀಡಿದ್ದಾರೆ. ಅದೇ ರೀತಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬಟ್ಟೆ ವಿತರಣೆ ಜತೆಗೆ ಇನ್ನೂ ಹಲವು ಸಮಾಜ ಸೇವಾ ಕಾರ್ಯಗಳನ್ನು ಪ್ರದೀಪ್ ಈಶ್ವರ್ ಅವರು ಮಾಡುತ್ತಿದ್ದಾರೆ.