ಬೆಂಗಳೂರು: ವಿಪಕ್ಷ ನಾಯಕ ಹೇಗೆ ಕೆಲಸ ಮಾಡಬೇಕು ಎಂಬುವುದು ಆರ್. ಅಶೋಕ್ ಅವರಿಗೆ ಗೊತ್ತಿಲ್ಲ. ಅವರಿಗೆ ಗೊತ್ತಿಲ್ಲ ಎಂದರೆ ಸಿದ್ದರಾಮಯ್ಯ ಅವರ ಬಳಿ ಕೋಚಿಂಗ್ ತೆಗೆದುಕೊಳ್ಳಲಿ. ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಬಿಜೆಪಿಯಲ್ಲಿ ಬೇರೆ ನಾಯಕ ಗತಿ ಇರಲಿಲ್ಲ ಎನಿಸುತ್ತೆ, ಯಾರೂ ಗತಿ ಇಲ್ಲದ ಕಾರಣ ಅಶೋಕ್‌ರನ್ನು ಕೂರಿಸಿದ್ದಾರೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಬದಲಾವಣೆ ಚರ್ಚೆ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್. ಅಶೋಕ್ ಕರ್ನಾಟಕದ ಅತ್ಯಂತ ಅಸಮರ್ಥ ಪ್ರತಿಪಕ್ಷ ನಾಯಕ. ಯಾರೂ ಗತಿ ಇಲ್ಲದ ಕಾರಣ ಅಶೋಕ್‌ರನ್ನು ಪ್ರತಿಪಕ್ಷ ನಾಯಕ ಸ್ಥಾನದಲ್ಲಿ ಕೂರಿಸಿದ್ದಾರೆ. ಬಿಜೆಪಿಯಲ್ಲಿ ನಾಯಕರೇ ಇಲ್ಲ, ಪ್ರತಿಪಕ್ಷ ನಾಯಕರಾಗಿ ವಿಷಯಗಳ ಮೇಲೆ ಮಾತನಾಡಬೇಕು. ಅದು ಬಿಟ್ಟು ನಮ್ಮ ಪಕ್ಷದ ಆಂತರಿಕ ವಿಚಾರ ಬಗ್ಗೆ ಮಾತಾಡಲು ಅವರು ಯಾರು ಎಂದು ಪ್ರಶ್ನಿಸಿದ್ದಾರೆ.
ನಮ್ಮ ಪಕ್ಷದ ಆಂತರಿಕ ವಿಚಾರ ನಾವು ಬಗೆಹರಿಸಿಕೊಳ್ಳುತ್ತೇವೆ. ಅವರಿಗ್ಯಾಕೆ ಅದೆಲ್ಲಾ?, ಬಳ್ಳಾರಿವರೆಗೆ ಸಿದ್ದರಾಮಯ್ಯ ಪಾದಯಾತ್ರೆ ನಡೆಸಿದ್ದರು, ಅದು ಅವರ ತಾಕತ್ತು. ಬಿಜೆಪಿಯವರು ಗಂಭೀರ ವಿಚಾರದ ಬಗ್ಗೆ ಮಾತನಾಡಿದ್ದೇ ನಾನು ನೋಡಿಲ್ಲ ಎಂದು ಅಶೋಕ್ ಬಗ್ಗೆ ಟೀಕಿಸಿದ್ದಾರೆ.
ಇದನ್ನೂ ಓದಿ | Actor Darshan: ಎಲ್ಲಾ ಹಣೆಬರಹ ಸ್ವಾಮಿ ಏನು ಮಾಡೋದು? ದರ್ಶನ್ ಕೇಸ್ ಬಗ್ಗೆ ಶಿವಣ್ಣ ಮಾತು!
ಹಾಲಿನ ದರ ಏರಿಕೆ ಮಾಡಲು ಯಾರು ಅರ್ಜಿ ಕೊಟ್ಟಿದ್ದಾರೆ ಎಂದಿದ್ದಾರೆ. ಸಿಎಂ, ಯಾರಾದರೂ ಅರ್ಜಿ ಹಾಕುವವರೆಗೂ ಕಾಯಬೇಕಾ? ಕೋಲಾರ, ಚಿಕ್ಕಬಳ್ಳಾಪುರ ಭಾಗದ ಜನರ ಕಷ್ಟ ನಿಮಗೇನು ಗೊತ್ತು?, ಅಶೋಕ್ ಅವರು ಒಂದು ವಿಕೆಟ್ ಬೀಳಿಸಿದ್ದೇವೆ, ಮತ್ತೊಂದು ವಿಕೆಟ್ ಬೀಳಿಸ್ತೀವಿ ಎನ್ನುತ್ತಾರೆ. ಆದರೆ, ಅಶೋಕ್ ಅವರೇ ನಿಮ್ಮನ್ನು ಫೀಲ್ಡ್‌ಗೆ ಇಳಿಯೋದಕ್ಕೇ ನಾವು ಬಿಡಲ್ಲ ಎಂದು ಹೇಳಿದ್ದಾರೆ.
ಪ್ರತಿ ಕುಟುಂಬದಿಂದ 8-10 ಸಾವಿರ ರೂ. ದರೋಡೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ: ಆರ್.ಅಶೋಕ್ ಆರೋಪ
ಚಿಕ್ಕಬಳ್ಳಾಪುರ: ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನದ ಕುರಿತು ಕಚ್ಚಾಟ ನಡೆಯುತ್ತಿದ್ದು, ಅಭಿವೃದ್ಧಿ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕಾಗಿ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನದ ಕುರಿತು ಕಾಂಗ್ರೆಸ್ ಪಕ್ಷದೊಳಗೆ ಒಡಕು ಉಂಟಾಗಿದೆ. ಈ ಬಗ್ಗೆ ಒಕ್ಕಲಿಗ ಸ್ವಾಮೀಜಿ ಕೂಡ ಮಾತಾಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಹಾಗೂ ಮೂರು ಡಿಸಿಎಂ ಮಾಡುವಲ್ಲಿ ಎಲ್ಲರೂ ಮುಳುಗಿದ್ದು, ಅಭಿವೃದ್ಧಿ ಕೆಲಸ ಮಾಡಲು ಯಾರೂ ಮುಂದಾಗುತ್ತಿಲ್ಲ. ಈ ಸರ್ಕಾರಕ್ಕೆ ಕುಡಿಯುವ ನೀರು ಕೊಡುವ ಯೋಗ್ಯತೆಯೂ ಇಲ್ಲವಾಗಿ, ಜನರು ಕಲುಷಿತ ನೀರು ಸೇವಿಸಿ ಸಾಯುತ್ತಿದ್ದಾರೆ. ಡೆಂಘೀ ಸೋಂಕು ಹರಡಿ ಜನರು ತೊಂದರೆಗೊಳಗಾಗಿದ್ದರೂ ಅದಕ್ಕೆ ಸೂಕ್ತ ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.
ಈಗ ಒಕ್ಕಲಿಗರು ಹಾಗೂ ಲಿಂಗಾಯತರು ಮಾತಾಡುತ್ತಿದ್ದಾರೆ. ಮುಂದೆ ಕುರುಬ ಸಮುದಾಯದವರು ಮಾತಾಡುತ್ತಾರೆ. ಜಾತಿಗಳ ನಡುವೆ ಕಾಂಗ್ರೆಸ್ ಕಚ್ಚಾಟ ಹುಟ್ಟುಹಾಕಿರುವುದು ಒಳ್ಳೆಯದಲ್ಲ. ಜಾತಿಗಳನ್ನು ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ ಎಂದು ದೂರಿದರು.
ಇದನ್ನೂ ಓದಿ | Karave Protest: ಕನ್ನಡಿಗರಿಗೆ ಉದ್ಯೋಗಕ್ಕಾಗಿ ಆಗ್ರಹ; ನಾಳೆ ಕರುನಾಡಲ್ಲಿ ಮೊಳಗಲಿದೆ ಕರವೇ ಕಹಳೆ
ಒಂದು ಕುಟುಂಬಕ್ಕೆ 2,000 ರೂ. ನೀಡುತ್ತೇವೆಂದು ಹೇಳಿದ ಕಾಂಗ್ರೆಸ್, 8-10 ಸಾವಿರ ರೂ. ದರೋಡೆ ಮಾಡುತ್ತಿದೆ. ಹಾಲಿನ ದರವನ್ನು ಕಳೆದ ವರ್ಷ 3 ರೂ. ಹೆಚ್ಚಿಸಿ, ಈಗ 2 ರೂ. ಹೆಚ್ಚಿಸಿದ್ದಾರೆ. ಪೆಟ್ರೋಲ್-ಡೀಸೆಲ್ ದರವನ್ನು ನಿರ್ದಾಕ್ಷಿಣ್ಯವಾಗಿ ಏರಿಸಿದ್ದರಿಂದ ಎಲ್ಲ ದರಗಳು ಏರಿಕೆಯಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಾದ ಕೂಡಲೇ ಬಸ್ ಟಿಕೆಟ್ ದರ ಹೆಚ್ಚಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಸಾರಿಗೆ ನಿಗಮಗಳಿಗೆ ಇನ್ನೂ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ಹಾಲಿನ ಪೋತ್ಸಾಹಧನವೂ ಬಾಕಿ ಇದೆ ಎಂದರು.