ಹೆಜಮಾಡಿ: ಕೊಲೆಯಾದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ, ಸುಳ್ಯದ ನೆಟ್ಟಾರಿನ ಪ್ರವೀಣ್ ಅವರ ಮನೆಗೆ ಸಾಂತ್ವನ ಹೇಳಲೆಂದು ಹೊರಟಿದ್ದ ಶ್ರೀರಾಮ ಸೇನೆ ರಾಜ್ಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗಡಿ ಭಾಗದ ಹೆಜಮಾಡಿಯಲ್ಲಿ ತಡೆಯಲಾಗಿದೆ.
ಪ್ರಮೋದ್ ಮುತಾಲಿಕ್ ಅವರ ದಕ್ಷಿಣ ಕನ್ನಡ ಜಿಲ್ಲಾ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಹೀಗಾಗಿ ಮುತಾಲಿಕ್ ಅವರು ಹೆಜಮಾಡಿ ಮೂಲಕ ಜಿಲ್ಲೆ ಪ್ರವೇಶಿಸಲು ಮುಂದಾಗುತ್ತಿದ್ದಂತೆಯೇ ಅವರನ್ನು ತಡೆಯಲಾಯಿತು. ಜುಲೈ 28ರಿಂದ ಈ ನಿಷೇಧ ಜಾರಿಗೆ ಬಂದಿದ್ದು, ಮುಂದಿನ ಆದೇಶದವರೆಗೆ ಚಾಲ್ತಿಯಲ್ಲಿ ಇರಲಿದೆ.
ಹೆಜಮಾಡಿ ಟೋಲ್ ಗೇಟ್ ಬಳಿ ಪೊಲೀಸರು ತಡೆಯುತ್ತಿದ್ದಂತೆಯೇ ಮುತಾಲಿಕ್ ಅವರು ಸ್ಥಳದಲ್ಲೇ ಕುಳಿತು ಪ್ರತಿಭಟನೆ ಮಾಡಿದರು. ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಅವಕಾಶ ಕೋರಿದರಾದರೂ ಯಾರೂ ಅವರ ಕರೆಗೆ ಸ್ಪಂದಿಸಲಿಲ್ಲ. ಕೊನೆಗೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿದರು.
ಪ್ರಮೋದ್ ಮುತಾಲಿಕ್ ಅವರು ಬಂದರೆ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆ ಉಂಟಾದೀತು ಎಂಬ ಆತಂಕದಲ್ಲಿ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಅವರು ನಿಷೇಧ ವಿಧಿಸಿದ್ದರು. ದ.ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ತಾಲೂಕಿನ ಯಾವುದೇ ಭಾಗಕ್ಕೂ ಅವರು ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿತ್ತು.
ಜಿಲ್ಲೆಯ ಪ್ರಸ್ತುತ ವಿದ್ಯಮಾನಗಳು ಮತ್ತು ಪ್ರಮೋದ್ ಮುತಾಲಿಕ್ ಅವರ ಹಿಂದಿನ ಪ್ರಚೋದನಾಕಾರಿ ಹೇಳಿಕೆಗಳು ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಿರುವುದನ್ನು ಪರಿಗಣಿಸಿ ನಿಷೇಧ ವಿಧಿಸಲಾಗಿತ್ತು.
ಕಾಂಗ್ರೆಸ್‌ನವರು ಮಾಡಿದ್ರೆ ಸರಿ.. ಇವರು..
ಈ ನಡುವೆ, ಬಿಜೆಪಿ ಸರಕಾರ ತಮಗೆ ನಿರ್ಬಂಧ ವಿಧಿಸಿರುವುದನ್ನು ಮುತಾಲಿಕ್ ತೀವ್ರವಾಗಿ ಆಕ್ಷೇಪಿಸಿದ್ದಾರೆ. ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ನನಗೆ ಹಲವು ಜಿಲ್ಲೆಗಳಿಗೆ ಪ್ರವೇಶ ಮಾಡುವುದನ್ನು ನಿರ್ಬಂಧಿಸಿದ್ದರು. ಅವರು ಮಾಡಿದ್ರೆ ಏನೋ ತುಷ್ಟೀಕರಣಕ್ಕೆ ಮಾಡುತ್ತಿದ್ದಾರೆ, ಸರಿ ಅನ್ನಬಹುದು. ಆದರೆ, ಹಿಂದೂಗಳ ಮತ ಪಡೆದು ಗೆದ್ದ ಬಿಜೆಪಿ ಸರಕಾರ ಹೀಗೆ ಮಾಡಿದರೆ ಏನು ಹೇಳುವುದು. ಧರ್ಮವಿರೋಧಿಗಳು, ಹಿಂದೂ ವಿರೋಧಿಗಳು ಇವರುʼʼ ಎಂದು ಆಕ್ಷೇಪಿಸಿದರು.
ಬಿಜೆಪಿ ನಾಯಕರು ನಾಲ್ಕು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದಾರೆ. ಆದರೆ, ದಿನದ 24 ಗಂಟೆಯೂ ಪಕ್ಷಕ್ಕಾಗಿ ದುಡಿಯುವ ಪ್ರವೀಣನಂಥವರು ಒಂದು ಮನೆ ಕೂಡಾ ಕಟ್ಟಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು ಮುತಾಲಿಕ್.
ಹಿಂಜಾವೇ ನಾಯಕ ಆಕ್ರೋಶಕ
ಈ ನಡುವೆ, ಪ್ರಮೋದ್ ಮುತಾಲಿಕ್ ಅವರ ಪ್ರವೇಶಕ್ಕೆ ತಡೆ ಒಡ್ಡಿದ್ದನ್ನು ಬೆಳ್ತಂಗಡಿಯ ಮಾಜಿ ಹಿಂದೂ ಜಾಗರಣಾ ವೇದಿಕೆ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಆಕ್ಷೇಪಿಸಿದ್ದಾರೆ.
ʻʻನಾವು ಧರ್ಮದ ರಕ್ಷಣೆಗೆ ಮತ ನೀಡಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದೇವೆ. ನೀವು ಎಲ್ಲಿ ಧರ್ಮ ರಕ್ಷಣೆ ಮಾಡಿದ್ದೀರಿ ಎಂದು ತೋರಿಸಿʼʼ ಎಂದು ತಿಮರೋಡಿ ಸವಾಲು ಹಾಕಿದರು.
ಇದನ್ನೂ ಓದಿ| Praveen Nettaru | ಅಂತಿಮಯಾತ್ರೆ ವೇಳೆ ಲಾಠಿ ಚಾರ್ಜ್ ಮಾಡಿದ್ದ ಪಿಎಸ್‌ಐಗಳ ವರ್ಗಾವಣೆ