ಬೆಂಗಳೂರು: ಚಂದ್ರನ ಅಂಗಳದಲ್ಲಿ ಅಧ್ಯಯನ (Chandrayaan 3) ನಡೆಸುತ್ತಿರುವ ಪ್ರಜ್ಞಾನ್ ರೋವರ್, ಗಂಧಕ, ಆಮ್ಲಜನಕ ಸೇರಿ ಹಲವು ಕೆಮಿಕಲ್‌ಗಳನ್ನು ಪತ್ತೆ ಹಚ್ಚಿದೆ. ಇದರ ಜತೆಗೆ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆದ ಒಂದು ವಾರದ ಬಳಿಕ ಪ್ರಜ್ಞಾನ್ ರೋವರ್ (Pragyan Rover), ವಿಕ್ರಮ್ ಲ್ಯಾಂಡರ್‌ನ (Vikram lander) ಫೋಟೊಗಳನ್ನು ಕಳುಹಿಸಿದೆ. ವಿಕ್ರಮ್ ಲ್ಯಾಂಡರ್ ಫೋಟೊಗಳನ್ನು ಇಸ್ರೋ (ISRO) ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಹಂಚಿಕೊಂಡಿದೆ.
“ವಿಕ್ರಮ್ ಲ್ಯಾಂಡರ್‌ನ ಫೋಟೊವನ್ನು ಪ್ರಜ್ಞಾನ್ ರೋವರ್ ಕಳುಹಿಸಿದೆ. ಇದು ಇಂದು (ಆಗಸ್ಟ್ 30) ಬೆಳಗ್ಗೆ ತೆಗೆದ ಫೋಟೊ ಆಗಿದೆ. ರೋವರ್‌ನ ನ್ಯಾವಿಗೇಷನ್ ಕ್ಯಾಮೆರಾದಿಂದ (NavCam) ಫೋಟೊ ತೆಗೆಯಲಾಗಿದೆ. ಚಂದ್ರಯಾನ 3 ಮಿಷನ್‌ಗಾಗಿ ನ್ಯಾವಿಗೇಷನ್ ಕ್ಯಾಮೆರಾವನ್ನು ಲ್ಯಾಬೊರೇಟರಿ ಫಾರ್ ಎಲೆಕ್ಟ್ರೋ-ಆಫ್ಟಿಕ್ಸ್ ಸಿಸ್ಟಮ್ಸ್ (LEOS) ಅಭಿವೃದ್ಧಿಪಡಿಸಿದೆ” ಎಂದು ಇಸ್ರೋ ಮಾಹಿತಿ ನೀಡಿದೆ.
ಪ್ರಜ್ಞಾನ್ ರೋವರ್ ಕಳುಹಿಸಿದ ಫೋಟೊ
ಚಂದ್ರನ ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಗಂಧಕದ ಜತೆಗೆ ಅಲ್ಯೂಮಿನಿಯಂ (AI), ಕ್ಯಾಲ್ಶಿಯಂ (Ca), ಐರನ್ (Fe), ಟೈಟಾನಿಯಂ (Ti), ಮ್ಯಾಂಗನೀಸ್ (Mn), ಸಿಲಿಕಾನ್ (Si) ಹಾಗೂ ಆಮ್ಲಜನಕದ (O) ಅಂಶಗಳನ್ನೂ ಪ್ರಜ್ಞಾನ್ ರೋವರ್ ಪತ್ತೆಹಚ್ಚಿದೆ. ಇನ್ನೂ ಹೆಚ್ಚಿನ ಅಂಶಗಳ ಕುರಿತು ಅಧ್ಯಯನ ಮುಂದುವರಿದಿದ್ದು, ಯಾವ ಅಂಶಗಳು ಪತ್ತೆಯಾಗುತ್ತವೆ ಎಂಬ ನಿರೀಕ್ಷೆ ಹೆಚ್ಚಾಗಿದೆ.
ಜುಲೈ 14ರಂದು ಇಸ್ರೋ ಚಂದ್ರಯಾನ 3 ಮಿಷನ್ ಉಡಾವಣೆ ಮಾಡಿದೆ. ಮಿಷನ್‌ನ ನೌಕೆಯು ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್‌ಲ್ಯಾಂಡ್ ಆಗಿದೆ. ಇದರೊಂದಿಗೆ ಜಗತ್ತಿನಲ್ಲೇ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಮಾಡಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾಗಿ, ಇಸ್ರೋ ವಿಜ್ಞಾನಿಗಳಿಗೆ ಭಾರತ ಸೇರಿ ಜಗತ್ತಿನಾದ್ಯಂತ ಅಭಿನಂದನೆ, ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.