ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಅವರು ಎಷ್ಟೆಲ್ಲ ಭರವಸೆ ಕೊಟ್ಟಿದ್ದರು, ಅದರಲ್ಲಿ ಒಂದಾದರೂ ಈಡೇರಿಸಿದ್ದಾರಾ? ಜನಧನ್ ಖಾತೆ ತೆರೆಸಿದರು, 15 ಲಕ್ಷ ರೂ. ಅಕೌಂಟ್‌ಗೆ ಹಾಕುತ್ತೇನೆ ಎಂದು ಹೇಳಿದರು. ಆ ಹಣ ಬಂತಾ? ಈಗ ಇದೆಲ್ಲವನ್ನೂ ಕೇಳುವ ಸಮಯ ಬಂದಿದೆ. ಕೊಟ್ಟ ಭರವಸೆಗಳನ್ನು ಈಡೇರಿಸದ ಬಗ್ಗೆ ಎಲ್ಲರೂ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ವಣಕೇರಿ ಲೇಔಟ್‌ನಲ್ಲಿ ಆಯೋಜಿಸಿದ್ದ ಬೃಹತ್ ಪ್ರಜಾಧ್ವನಿ ಸಮಾವೇಶದಲ್ಲಿ (Prajadhwani) ಅವರು ಜನತೆಗೆ ಕರೆ ನೀಡಿದರು.
ಅಧಿಕಾರ ಇದ್ದಾಗ ನಾನು ಏನು ಆಗಿದ್ದೆ ಎಂಬುದು ಮುಖ್ಯವಲ್ಲ. ಜನರಿಗಾಗಿ ಏನು ಕೆಲಸವಾಗಿದೆ ಎನ್ನುವುದು ಮುಖ್ಯ. ನಾನು ಪ್ರಧಾನ ಮಂತ್ರಿ ಮೋದಿ ಅವರಿಗೆ ಕೇಳಲು ಬಯಸುತ್ತೇನೆ, ಕಲ್ಯಾಣ ಕರ್ನಾಟಕ ಹಿಂದುಳಿದ ಭಾಗವಾಗಿದ್ದು, ನಿಮ್ಮ ಅಧಿಕಾರದ ಅವಧಿಯಲ್ಲಿ ಏನಾದರೂ ಅಭಿವೃದ್ಧಿ ಮಾಡಿದ್ದೀರಾ ಎಂದು ಪ್ರಶ್ನಿಸಿದರು.
ಈ ಭಾಗದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಹಿಂದೆ ವಾಜಪೇಯಿ ಸರ್ಕಾರದಲ್ಲಿ 371 ಜೆ ವಿಧಿ ಜಾರಿಗೆ ಅಡ್ಡಿಪಡಿಸಿದರು. ನಮ್ಮ ಕೈಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ 371ಜೆ ಜಾರಿಗೆ ತರಲು ಆಗಲ್ಲ ಎಂದು ಪತ್ರ ಬರೆದಿದ್ದರು. ನಂತರ ಕಾಂಗ್ರೆಸ್ ಸರ್ಕಾರದ ಅವಧಿ ಬಂದಾಗ ಖರ್ಗೆಯವರ ಪ್ರಯತ್ನದಿಂದ ಕಾನೂನು ತಿದ್ದುಪಡಿ ಮಾಡಿ ಜಾರಿಗೆ ಮಾಡಲಾಯಿತು. ಇದು ಕಲ್ಯಾಣ ಕರ್ನಾಟಕಕ್ಕೆ ಅತಿ ದೊಡ್ಡ ವರದಾನವಾಗಿದೆ ಎಂದು ಹೇಳಿದರು.
ಇದನ್ನೂ ಓದಿ | Amit Shah : 6 ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಯ ಅಪರಾಧಕ್ಕೆ ಫೊರೆನ್ಸಿಕ್ ಸಾಕ್ಷಿ ಕಡ್ಡಾಯ: ಬೆಳಗಾವಿಯಲ್ಲಿ ಅಮಿತ್ ಶಾ ಹೇಳಿಕೆ
ಕೆಲ ದಿನಗಳ ಹಿಂದೆ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಬಸವಸಾಗರದ ಸ್ಕಾಡಾ ಗೇಟ್‌ಗಳನ್ನು ಉದ್ಘಾಟಿಸಿದರು. ಈ ಯೋಜನೆ ನಿಮ್ಮ ಸರ್ಕಾರದ ಅವಧಿಯದ್ದಲ್ಲ, ನಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವುದು. ನಾನು ನೀರಾವರಿ ಸಚಿವನಿದ್ದಾಗ ಮಾಡಿದ ಯೋಜನೆಯಾಗಿದೆ ಎಂದರು.
10 ಯೋಜನೆ ಜಾರಿಗೆ ತರುವುದಾಗಿ ನಿಮಗೆ ಮಾತು ಕೊಟ್ಟಿದ್ದೇವೆ. 12 ತಿಂಗಳಲ್ಲಿ ಬ್ಯಾಕ್‌ಲಾಗ್ ಹುದ್ದೆ ಭರ್ತಿ ಮಾಡುತ್ತೇವೆ ಎಂದ ಡಿಕೆಶಿ, ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಿಂದ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುತ್ತಿದ್ದಾರೆ. ಸಮಾವೇಶಕ್ಕೆ ಬರುವಾಗ ಒಬ್ಬ ಹೆಣ್ಣುಮಗಳು ಬಂದು ಕಣ್ಣೀರು ಹಾಕಿದಳು. ಪರೀಕ್ಷೆ ಬರೆದು ಪಾಸ್ ಆಗಿದ್ದೇವೆ. ಅಕ್ರಮ ನಡೆದಿದ್ದರಿಂದ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ತಡೆ ನೀಡಿದೆ ಎಂದು ಅಲವತ್ತುಕೊಂಡಿರುವುದಾಗಿ ಹೇಳಿದರು.
ಫೆಬ್ರವರಿ 3ರಿಂದ ಕ್ಷೇತ್ರ ಪ್ರವಾಸ– ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಮತ್ತೆ ಫೆಬ್ರವರಿ 3ರಿಂದ ಬಸವಕಲ್ಯಾಣದಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪ್ರವಾಸ ಮಾಡುತ್ತೇವೆ. ಡಿಕೆಶಿ ಹಳೇ ಮೈಸೂರು ಭಾಗದಲ್ಲಿ ಪ್ರಜಾಧ್ವನಿ ಪ್ರವಾಸ ಮಾಡುತ್ತಾರೆ. ನನ್ನ ಜತೆ ರಾಜ್ಯ ಮಟ್ಟದ ನಾಯಕರು ಇರುತ್ತಾರೆ. 224 ಕ್ಷೇತ್ರಗಳಿಗೆ ಭೇಟಿ ಮಾಡಿ ಜನರನ್ನು ಮಾತನಾಡಿಸುತ್ತೇನೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ಕರ್ಮಕಾಂಡ ಎತ್ತಿ ಹಿಡಿಯತ್ತೇವೆ. ಈಗಾಗಲೇ ಚಾರ್ಜ್ ಶೀಟ್ ಜನರ ಮುಂದಿಡುತ್ತಿದ್ದೇವೆ, ಬಿಜೆಪಿ ಸರ್ಕಾರದ ಪಾಪದ ಪುರಾಣವನ್ನು ಬಹಿರಂಗಪಡಿಸುತ್ತೇವೆ ಎಂದ ಅವರು, ನಾವು ಮಾಡಿದ್ದ ಯೋಜನೆ ಉದ್ಘಾಟನೆಗೆ ನರೇಂದ್ರ ಮೋದಿ ಅವರನ್ನು ಕರೆತಂದಿದ್ದರು. ಬಂಜಾರ ಜನಾಂಗದ ತಾಂಡಾ ಜನರಿಗೆ ಯಾವುದೇ ದಾಖಲೆಗಳಿರಲಿಲ್ಲ. 2013ರಲ್ಲಿ ನಾವು ಅಧಿಕಾರಕ್ಕೆ ಬಂದಾಗ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ತೀರ್ಮಾನ ಮಾಡಿದ್ದೆವು ಎಂದರು.
ಅಡುಗೆ ಮಾಡಿದ್ದವರು ನಾವು, ಮೋದಿಯವನ್ನು ಕರೆತಂದು ಊಟ ಬಡಿಸಿದರು. 2014ರಲ್ಲಿ ನಾರಾಯಣಪುರ ಎಡದಂಡೆಗೆ 3500 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಕಾಡಾ ಗೇಟ್ ನಿರ್ಮಾಣ ಕಾಮಗಾರಿಯನ್ನು ನಾವು ಮಾಡಿದ್ದೆವು. ಇವರ ಬಂಡವಾಳವೇ ನರೇಂದ್ರ ಮೋದಿ. ಬಸವರಾಜ್ ಬೊಮ್ಮಾಯಿ ಸರ್ಕಾರ ಆಲಿಬಾಬಾ ಮತ್ತು 40 ಮಂದಿ ಕಳ್ಳರು ಇದ್ದ ಹಾಗೆ. ಇವರ ಮುಖ ನೋಡಿದರೆ ಜನ ವೋಟು ಕೊಡಲ್ಲ ಅಂತ ಗೊತ್ತು. ಅದಕ್ಕೆ ಅಮಿತ್ ಶಾ, ಮೋದಿ, ನಡ್ಡಾ ಅವರನ್ನು ಕರೆದುಕೊಂಡು ಬರುತ್ತಿದ್ದಾರೆ. ಜನ ಬಡಿಗೆ ತೆಗೆದುಕೊಂಡು ಹೊಡೆಯುತ್ತಾರೆ ಎಂಬ ಭಯ ಅವರಿಗೆ ಇದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ಜನ ಮನ್ನಣೆ ನೀಡುತ್ತಿದ್ದಾರೆ. ನಾನು ಸಿಎಂ ಆದಾಗ ಪ್ರತಿ ಗ್ರಾಮ ಪಂಚಾಯಿತಿಗೆ 200 ರಿಂದ 300 ಮನೆ ಕೊಟ್ಟಿದ್ದೆ. ಇವರ ಮನೆ ಹಾಳಾಗ ಬಿಜೆಪಿಯವರು ನಾವು ಕೊಟ್ಟ ಮನೆಗಳಿಗೂ ದುಡ್ಡು ಕೊಟ್ಟಿಲ್ಲ ಎಂದ ಅವರು, ಐದು ವರ್ಷದಲ್ಲಿ 15 ಲಕ್ಷ ಮನೆ ಕಟ್ಟಿಸಿದ್ದೇವೆ. ಏನೂ ಕೊಡದವರಿಗೆ ನೀವು ವೋಟು ಹಾಕುತ್ತೀರಾ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಕಳೆದ ಬಾರಿ ಒಂದು ಕ್ಷೇತ್ರ ಗೆಲಿಸಿದ್ದೀರಿ, ಈಗ ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿ. ಹತ್ತಿ, ತೊಗರಿ ಬೆಳೆ ಹಾನಿಯಾಗಿದೆ. ಪ್ರತಿ ಹೆಕ್ಟೇರ್‌ಗೆ 20 ಸಾವಿರ ರೂಪಾಯಿ ಕೊಡುತ್ತೇವೆ ಎನ್ನುತ್ತಾರೆ. ರೈತ ಪರ ಸರ್ಕಾರ ಎಂದರೆ ಇದೇನಾ ಎಂದು ಕಿಡಿಕಾರಿದರು.
ರೈತರ ಆದಾಯ ಎರಡು ಪಟ್ಟು ಮಾಡುತ್ತೇನೆ ಎಂದು ಹೇಳಿದರು, ಆದರೆ ರೈತರ ಸಾಲ ಮಾತ್ರ ಎರಡು ಪಟ್ಟಾಯಿತು. ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲೆಂಡರ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿತು. ಆದರೆ, ರೈತರು ಬೆಳೆದ ಬೆಳೆಯ ಬೆಲೆ ಏರಲಿಲ್ಲ. ನರೇಂದ್ರ ಮೊದಿ ಒಂದು ಸುಳ್ಳು ಹೇಳಿದರು. ನಾ ಖಾವುಂಗಾ, ನಾ ಖಾನೇದುಂಗಾ, ಮೈ ಚೌಕಿದಾರ್ ಹು ಎಂದು ಹೇಳಿಕೊಂಡರು. ಮೋದಿಯವರೇ, ಜನಕ್ಕೆ ಯಾಕೆ ಸುಳ್ಳಿ ಹೇಳಿದಿರಿ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಕೆಪಿಸಿಸಿ ಕಾರ್ಯಾದ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಈ ಚುನಾವಣೆ ಅತ್ಯಂತ ಮಹತ್ವದ ಚುನಾವಣೆ. ಇಡೀ ದೇಶವೇ ರಾಜ್ಯದತ್ತ ನೋಡುತ್ತಿದೆ. ಇಲ್ಲಿನ ಎಲೆಕ್ಷನ್ ದೇಶಕ್ಕೆ ಒಂದು ದಿಕ್ಸೂಚಿಯಾಗಲಿದೆ. ಪ್ರಜಾಧ್ವನಿ ಎಂದರೆ ಜನತಾ ಅವಾಜ್ ಆಗಿದ್ದು, ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಜನರಿಗೆ ತಿಳಿಸುವುದೇ ಈ ಯಾತ್ರೆಯ ಉದ್ದೇಶ ಎಂದರು.
ಇದನ್ನೂ ಓದಿ | Karnataka Election: ಹಾಸನಕ್ಕೆ ಕಾರ್ಯಕರ್ತರನ್ನು ನಿಲ್ಲಿಸುತ್ತೇನೆ ಎನ್ನುವುದು ಬಿಡಿ; ಭವಾನಿಯೇ ಅಭ್ಯರ್ಥಿ: ಸೂರಜ್ ರೇವಣ್ಣ
ಈ ಸರ್ಕಾರ ಕಲ್ಯಾಣ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಿದೆ. ಈ ಭಾಗದ ಅಭಿವೃದ್ಧಿಗೆ ಹಣ ಕಡಿತ ಮಾಡಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದೇ ಒಂದು ನೌಕರಿ ಭರ್ತಿ ಮಾಡಿಲ್ಲ. ಪಿಎಸ್ಐ ನೇಮಕಾತಿ, ಕೆಪಿಟಿಸಿಎಲ್ ಸೇರಿ ಹಲವು ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ನಮ್ಮ ಭಾಗದಲ್ಲಿ ಸರಿಯಾಗಿ ನೀರಾವರಿ ಯೋಜನೆ ಮಾಡಲಿಲ್ಲ. ನಂಜುಂಡಪ್ಪ ವರದಿ ಅನುಷ್ಠಾನಗೊಳಿಸಲಿಲ್ಲ. ಹೈದರಾಬಾದ್ ಕರ್ನಾಟಕ ಬದಲಾಗಿ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲು ಮಾಡಿದರೆ ವಿನಃ ಅಭಿವೃದ್ಧಿ ಮಾಡಲಿಲ್ಲ ಎಂದು ಟೀಕಿಸಿದರು.
ಬಿ.ಕೆ.ಹರಿಪ್ರಸಾದ್ ಮಾತನಾಡಿ, ಯಾದಗಿರಿ ತ್ಯಾಗ ಬಲಿದಾನದ ಜಿಲ್ಲೆ. ಆದರೆ, ಇಲ್ಲಿನ ಅಭಿವೃದ್ಧಿ ನೋಡಿದಾಗ ಬಹಳ ನೋವಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದಕ್ಕೆ ಜೆಪಿ ಏನು ಕೊಡಬೇಕಿತ್ತೋ ಅದನ್ನು ಕೊಡಲಿಲ್ಲ. 371 ಜೆ ಜಾರಿಗೆ ಮಾಡಲು ಖರ್ಗೆ ಹಾಗೂ ಧರ್ಮಸಿಂಗ್ ಅವರು ಶ್ರಮವಹಿಸಿದ್ದಾರೆ. ಬಿಜೆಪಿ ಸರ್ಕಾರ ರೈತ ವಿರೋಧಿ ಕರಾಳ ಕಾಯ್ದೆ ಜಾರಿಗೆ ತಂದಿದ್ದರು. ನೂರಾರು ಜನ ರೈತರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಕಾಯ್ದೆ ವಾಪಸ್ ಪಡೆದರು ಎಂದು ಆರೋಪಿಸಿದರು.