Site icon Vistara News

Prajadhwani : ನಾನೇ ಮುಂದಿನ ಸಿಎಂ ಎಂಬ ಸಂಕೇತ ನೀಡಿದ ಸಿದ್ದರಾಮಯ್ಯ, ಅಂತರ ಕಾಯ್ದುಕೊಂಡ ಸತೀಶ್‌ ಜಾರಕಿಹೊಳಿ

Prajadhwani yatre

#image_title

ಬೀದರ್‌: ಇದುವರೆಗೆ ಜಂಟಿಯಾಗಿ ಪ್ರಜಾಧ್ವನಿ ಯಾತ್ರೆಯ (Prajadhwani) ಮೂಲಕ ರಾಜ್ಯ ಸುತ್ತಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರದಿಂದ ಎರಡನೇ ಹಂತದಲ್ಲಿ ಒಂಟಿಯಾಗಿ ಪ್ರಜಾಧ್ವನಿ ಯಾತ್ರೆ ಮುಂದುವರಿಸಿದರು. ಡಿ.ಕೆ. ಶಿವಕುಮಾರ್‌ ಅವರು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಕುರುಡುಮಲೆ ಗಣಪತಿ ದೇವಸ್ಥಾನದಿಂದ ಯಾತ್ರೆ ಆರಂಭಿಸಿದರೆ, ಸಿದ್ದರಾಮಯ್ಯ ಅವರು ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಿಂದ ಯಾತ್ರೆಯನ್ನು ಆರಂಭಿಸಿದರು. ಬಸವ ಕಲ್ಯಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮುಂದೆ ತಾನೇ ಸಿಎಂ ಆಗುವುದಾಗಿ ಭರವಸೆ ವ್ಯಕ್ತಪಡಿಸಿದ್ದು ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ್‌ ಜಾರಕಿಹೊಳಿ ಸಮಾವೇಶದಲ್ಲಿ ಗೈರುಹಾಜರಾಗಿದ್ದು ಚರ್ಚೆಗೆ ಕಾರಣವಾಗಿದೆ. ಬಸವ ಕಲ್ಯಾಣ ಮತ್ತು ಭಾಲ್ಕಿಯಲ್ಲಿ ದೊಡ್ಡಮಟ್ಟದ ರೋಡ್‌ ಶೋ ಮತ್ತು ಸಮಾವೇಶ ನಡೆಯಿತು.

ನಾನೇ ಸಿಎಂ ಆಗ್ತೇನೆ ಎಂದ ಸಿದ್ದರಾಮಯ್ಯ

ಸಮಾವೇಶಕ್ಕೆ ಮೊದಲು ಬಸವಕಲ್ಯಾಣದ ಅನುಭವ ಮಂಟಪದ ಬಳಿ ಮಾತನಾಡಿದ ಸಿದ್ದರಾಮಯ್ಯ ಅವರು, ಬಸವೇಶ್ವರರ ಕರ್ಮಭೂಮಿಯಿಂದ ಎರಡನೇ ಹಂತದ ಪ್ರಜಾಧ್ವನಿ ಕಾರ್ಯಕ್ರಮ ಆರಂಭವಾಗಿದೆ. ನಾನು ‌ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು, ಪ್ರಮಾಣವಚನ ಸ್ವೀಕರಿಸಿದ್ದು ಬಸವ ಜಯಂತಿ ದಿನ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ‌ಸ್ವೀಕರಿಸಿದ ಒಂದೆರಡು ಗಂಟೆಯಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದೆ. ದಾಸೋಹದ ಪರಿಕಲ್ಪನೆಯಿಟ್ಟುಕೊಂಡು ಅನ್ನಭಾಗ್ಯ ಯೋಜನೆ ಜಾರಿಗೆ ತಂದೆ ಎಂದು ನೆನಪಿಸಿದರು.

ʻʻಎಲ್ಲಾ ಸರಕಾರಿ ಕಚೇರಿಯಲ್ಲಿ ಬಸವೇಶ್ವರ ಪೋಟೊ ಇಡುವಂತೆ ಆದೇಶ ಮಾಡಿದ್ದು ನಾನು. ಬಸವಾದಿ ಶರಣರ ವಿಚಾರಗಳು ಎಲ್ಲರಿಗೂ ಗೊತ್ತಿರಬೇಕು ಅವರ ಬದುಕಿನ ಬಗ್ಗೆ ಎಲ್ಲರಿಗೂ ಗೊತ್ತಿರಬೇಕುʼʼ ಎಂದು ಹೇಳಿದ ಅವರು, ಈ ಚುನಾವಣೆಯಲ್ಲಿ ನಮ್ಮ‌ ಸರಕಾರ ಅಧಿಕಾರಕ್ಕೆ ಬರುತ್ತೆ, ನಾನೇ ಅನುಭವ ಮಂಟಪ ಉದ್ಘಾಟನೆ ಮಾಡುತ್ತೇನೆ. ನೂತನವಾಗಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪ ಉದ್ಘಾಟನೆ ‌ಮಾಡಿದರೆ ನನಗೆ ಪುಣ್ಯ ಬರುತ್ತದೆʼʼ ಎಂದು ಹೇಳಿದರು ಸಿದ್ದರಾಮಯ್ಯ. ʻನಾನೇ ಉದ್ಘಾಟನೆ ಮಾಡುತ್ತೇನೆʼ ಎನ್ನುವ ಅವರ ಮಾತು ನಾನೇ ಮುಖ್ಯಮಂತ್ರಿಯಾಗುತ್ತೇನೆ ಎನ್ನುವುದನ್ನು ಧ್ವನಿಸಿದ್ದು ಚರ್ಚೆಗೆ ಕಾರಣವಾಗಿದೆ.

ʻʻನಮ್ಮ ಅವದಿಯಲ್ಲಿ ಅನುಭವ ಮಂಟಪ ಪುನರ್ ನಿರ್ಮಾಣಕ್ಕೆ ಅನುಮತಿ ನೀಡಿದ್ದೆ. ಅನುಭವ ಮಂಟಪ ನಿರ್ಮಾಣ ನಿಧಾನವಾಗಿ ನಡೆಯುತ್ತಿದೆ. ನಾವು ಬಂದ ಮೇಲೆ ತ್ವರಿತವಾಗಿ ಮುಗಿಸುತ್ತೇವೆʼʼ ಎಂದರು ಸಿದ್ದರಾಮಯ್ಯ.

ಬೆಂಗಳೂರಲ್ಲಿ ಹೋಗಿ ಕುಳಿತ ಸತೀಶ್‌ ಜಾರಕಿಹೊಳಿ

ಕೆಪಿಸಿಸಿಯ ಕಾರ್ಯಾಧ್ಯಕ್ಷರಾಗಿರುವ ಸತೀಶ್‌ ಜಾರಕಿಹೊಳಿ ಅವರು ಈ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿದ್ದು ಕೂಡಾ ಚರ್ಚೆಗೆ ಕಾರಣವಾಗಿದೆ. ಇದು ಉತ್ತರ ಕರ್ನಾಟಕದ ಯಾತ್ರೆಯಾಗಿದ್ದು, ಇದರಲ್ಲಿ ಈ ಭಾಗದಲ್ಲಿ ಕಾಂಗ್ರೆಸ್‌ನ ಪ್ರಬಲ ಧ್ವನಿಯಾಗಿರುವ ಸತೀಶ್‌ ಜಾರಕಿಹೊಳಿ ಭಾಗವಹಿಸಬೇಕಿತ್ತು. ಆದರೆ, ಸತೀಶ್‌ ಜಾರಕಿಹೊಳಿ ಅವರು ಬೀದರ್‌ಗೆ ಹೋಗುವುದು ಬಿಟ್ಟು ಬೆಳಗಾವಿಯಿಂದ ಬೆಂಗಳೂರಿಗೆ ಹೋಗಿರುವುದು ಚರ್ಚೆಗೆ ಕಾರಣವಾಗಿದೆ. ಅವರು ಬೆಂಗಳೂರಿನ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ!

ಸಿದ್ದರಾಮಯ್ಯ ಮತ್ತು ಸತೀಶ್‌ ಜಾರಕಿಹೊಳಿ ನಡುವೆ ಕಳೆದ ಕಾಂಗ್ರೆಸ್‌ ಸರಕಾರದ ಅವಧಿಯಿಂದಲೂ ಮುಸುಕಿನ ಗುದ್ದಾಟವಿದೆ. ಒಂದು ಕಾಲದಲ್ಲಿ ಅವರಿಬ್ಬರೂ ಆತ್ಮೀಯರಾಗಿಯೇ ಇದ್ದವರು. ಸಿದ್ದರಾಮಯ್ಯ ಸರ್ಕಾರದಲ್ಲಿ ನೀಡಲಾದ ಅಬಕಾರಿ ಖಾತೆಯನ್ನು ನಿರಾಕರಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಕೊಡುವಂತೆ ಪಟ್ಟು ಹಿಡಿದಿದ್ದರು ಸತೀಶ್‌ ಜಾರಕಿಹೊಳಿ. ಆದರೆ, ಆದರೆ ಸಮಾಜ ಕಲ್ಯಾಣ ಇಲಾಖೆಯನ್ನು ಅಂಜನೇಯ ಅವರಿಗೆ ನೀಡಿದ್ದರು ಸಿದ್ದರಾಮಯ್ಯ. ಅಂದಿನಿಂದ ಇಂದಿನವರೆಗೂ ಸಿದ್ದರಾಮಯ್ಯ ಮತ್ತು ಸತೀಶ್‌ ಜಾರಕಿಹೊಳಿ ನಡುವಿನ ಸಂಬಂಧ ಅಷ್ಟಕ್ಕಷ್ಟೇ.

ಟಗರು ಕಾಣಿಕೆ ನೀಡಿದ ಹುಡುಗರು
ಬೀದರ್‌ನಲ್ಲಿ ನಡೆದ ಸಮಾವೇಶದಲ್ಲಿ ಕುರುಬ ಸಮಾಜದ ವತಿಯಿಂದ ಸಿದ್ದರಾಮಯ್ಯ ಅವರಿಗೆ ಟಗರನ್ನು ಕಾಣಿಕೆಯಾಗಿ ನೀಡಿದ್ದಾರೆ. ಟಗರನ್ನು ತಂದ ಯುವಕರು ಅದನ್ನು ವೇದಿಕೆಗೆ ತಂದು ಖುಷಿಯಿಂದ ಕುಣಿದಾಡಿದರು.

ಟಿಕೆಟ್‌ ಕೊಟ್ಟವರ ಪರ ಎಲ್ಲರೂ ಕೆಲಸ ಮಾಡಬೇಕು

ಬಸವ ಕಲ್ಯಾಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಬಸವಕಲ್ಯಾಣ ಮತಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದು 9 ಜನ ಅರ್ಜಿ ಹಾಕಿದ್ದಾರೆ. ಈ 9 ಜನಕ್ಕೂ ಟಿಕೇಟ್‌ ನೀಡಲು ಸಾಧ್ಯವಿಲ್ಲ. ಹೈಕಮಾಂಡ್‌ ನವರು ಕಾರ್ಯಕರ್ತರ ಅಭಿಪ್ರಾಯ ಪಡೆದು ಗೆಲ್ಲುವ ಅಭ್ಯರ್ಥಿಗೆ ಟಿಕೇಟ್‌ ನೀಡುತ್ತಾರೆ, ಟಿಕೇಟ್‌ ಸಿಗದ 8 ಜನರು ಬೇಸರ ಮಾಡಿಕೊಳ್ಳದೆ ಪಕ್ಷದ ಗೆಲುವಿಗಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ಬಸವ ಕಲ್ಯಾಣದಲ್ಲಿ ಸಿದ್ದು ಕಟೌಟ್‌ ವೈಭವ

ಕಾಂಗ್ರೆಸ್‌ ನಂಬಿಕೆ ಇರುವುದು ಸಹಿಷ್ಣುತೆ, ಸಹಬಾಳ್ವೆಯಲ್ಲಿ

ಯಾರು ಸಂವಿಧಾನದ ಪರವಾಗಿದ್ದಾರೆ, ಯಾರು ವಿರುದ್ಧವಾಗಿದ್ದಾರೆ ಎಂಬುದನ್ನು ಜನ ತಿಳಿದುಕೊಳ್ಳಬೇಕು. ನಾವು ಸಂವಿಧಾನವನ್ನು ಗೌರವಿಸುವವರು, ಆರ್‌,ಎಸ್‌,ಎಸ್‌ ನವರಿಗೆ ಸಮಾನತೆ, ಮನುಷ್ಯತ್ವ, ಸಮಸಮಾಜದಲ್ಲಿ ನಂಬಿಕೆಯಿಲ್ಲ. ಬಸವಣ್ಣನವರು ಮನುವಾದಿಗಳ ಚಿಂತನೆಗಳಿಗೆ ವಿರುದ್ಧವಾಗಿ ಸಮಸಮಾಜದ ಕನಸು ಕಂಡವರು. ಬಿಜೆಪಿಯವರು ಸರ್ವಧರ್ಮ ಸಮನ್ವಯ, ಸಹಿಷ್ಣುತೆ ಮತ್ತು ಸಹಬಾಳ್ವೆಯಲ್ಲಿ ನಂಬಿಕೆಯಿಟ್ಟುಕೊಂಡವರಲ್ಲ. ನಮ್ಮ ಸಂವಿಧಾನ ಹೇಳುವ ಸಹಿಷ್ಣುತೆ ಮತ್ತು ಸಹಬಾಳ್ವೆಯಲ್ಲಿ ಕಾಂಗ್ರೆಸ್‌ ನಂಬಿಕೆ ಇಟ್ಟಿದೆ ಎಂದರು ಸಿದ್ದರಾಮಯ್ಯ.

ಬಿಜೆಪಿಯಿಂದ ಯಾರೂ ಹುತಾತ್ಮರಾಗಿಲ್ಲ

ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿ ಇರುವವರೆಗೆ ದೇಶವನ್ನು ಕಟ್ಟುವ ಕೆಲಸ ಮಾಡಿದೆ. ಸಂಘಪರಿವಾರದ ಜನ ದೇಶಕ್ಕೆ ಕಾಂಗ್ರೆಸ್‌ ಕೊಡುಗೆ ಏನು ಎಂದು ಪ್ರಶ್ನೆ ಮಾಡುತ್ತಾರೆ. ಈ ಪ್ರಶ್ನೆ ಕೇಳುವವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು ಎಂದು ಉತ್ತರಿಸಲಿ. ಹಿಂದೂ ಮಹಾಸಭಾ, ಬಿಜೆಪಿ, ಆರ್‌,ಎಸ್‌,ಎಸ್‌, ಜನಸಂಘ ಈ ಯಾವುದೇ ಸಂಘಟನೆಯ ಒಬ್ಬನೇ ಒಬ್ಬ ವ್ಯಕ್ತಿ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದಾರ? ಒಬ್ಬರಾದರೂ ದೇಶಕ್ಕಾಗಿ ಹುತಾತ್ಮರಾಗಿದ್ದಾರ? ಮಹಾತ್ಮಾ ಗಾಂಧಿ ಅವರ ನೇತೃತ್ವದಲ್ಲಿ ತಮ್ಮ ಆಸ್ತಿ, ಪಾಸ್ತಿ ಕಳೆದುಕೊಂಡು, ಪ್ರಾಣ ತ್ಯಾಗ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಕಾಂಗ್ರೆಸ್‌ ನವರು. ಈ ಬಿಜೆಪಿಯವರಿಂದ ನಾವು ಪಾಠ ಕಲಿಯಬೇಕಾದ ಅಗತ್ಯ ಇದೆಯಾ?

ಮೋದಿಗೆ ಮನುಷ್ಯತ್ವ ಇದೆಯಾ?

ಇಂದು ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. 2014ರಲ್ಲಿ 50 ಕೆ.ಜಿಯ ಒಂದು ಚೀಲ ಡಿಎಪಿ ಬೆಲೆ 450 ರೂ. ಇದ್ದದ್ದು ಇಂದು 1350 ರಿಂದ 1400 ರೂ. ಆಗಿದೆ. ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ನರೇಂದ್ರ ಮೋದಿ ಅವರು ಹೇಳಿದ್ದರು, ಇಂದು ರೈತರ ಆದಾಯ ದುಪ್ಪಟ್ಟಾಗಿದೆಯಾ? ಯಾಕೆ ಸುಳ್ಳು ಹೇಳಿದ್ರಿ ಮೋದಿಜಿ? ಮನಮೋಹನ್‌ ಸಿಂಗ್‌ ಅವರ ಸರ್ಕಾರ ರೈತರ ಸಾಲ 78,000 ಕೋಟಿ ರೂ. ಅನ್ನು ಮನ್ನಾ ಮಾಡಿತ್ತು. ಮೋದಿ ಸರ್ಕಾರ ಒಂದು ರೂಪಾಯಿಯಾದ್ರೂ ಮನ್ನಾ ಮಾಡಿದೆಯಾ? ಇಲ್ಲಿನ ಬಿಜೆಪಿ ಸರ್ಕಾರ ಮಾಡಿದೆಯಾ? ನಾನು ಮುಖ್ಯಮಂತ್ರಿಯಾಗಿರುವಾಗ 22 ಲಕ್ಷದ 27 ಸಾವಿರ ರೈತರ ರೂ.50,000 ವರೆಗಿನ ಸಹಕಾರಿ ಬ್ಯಾಂಕುಗಳ ರೂ.8,165 ಕೋಟಿ ಸಾಲ ಮನ್ನಾ ಮಾಡಿದ್ದೆ. ಈಗ ರೈತರ ಸಾಲ, ಕೃಷಿಗೆ ಹಾಕುವ ಬಂಡವಾಳ ಜಾಸ್ತಿಯಾಗಿದೆ ಆದರೆ ರೈತರ ಆದಾಯ ಜಾಸ್ತಿಯಾಗಿಲ್ಲ. ಹಾಲು, ಮೊಸರು, ನೋಟ್‌ ಬುಕ್‌, ಮಂಡಕ್ಕಿ, ಪೆನ್ನು ಇವುಗಳ ಮೇಲೆ 18% ತೆರಿಗೆ ಹಾಕಿದ್ದಾರೆ, ಮೋದಿ ಅವರಿಗೆ ಮನುಷ್ಯತ್ವ ಇದೆಯಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಗೊಂಡ, ರಾಜಗೊಂಡ, ಕಾಡು ಕುರುಬ ಮುಂತಾದ ಸಮುದಾಯಗಳನ್ನು ಎಸ್‌,ಟಿ ಸೇರಿಸುವಂತೆ ನಾವು ಶಿಫಾರಸು ಮಾಡಿದ್ದೆವು, ಕೋಲಿ, ಕಬ್ಬಲಿಗ ಸಮಾಜವನ್ನು ಕೂಡ ಸೇರಿಸುವಂತೆ ಶಿಫಾರಸು ಮಾಡಿದ್ದೆವು. ಈಗ ಈ ಜನರಿಗೆ ಸಿಆರ್‌ಈ ಸೆಲ್‌ ನವರು ಕಿರುಕುಳ ನೀಡಲು ಆರಂಭ ಮಾಡಿದ್ದಾರೆ. ನಾವು ಅಧಿಕಾರಕ್ಕೆ ಬಂದ ತಕ್ಷಣ ಹೊಸ ಆದೇಶ ಮಾಡಿ ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಭಾಲ್ಕಿಯಲ್ಲಿ ಸಿದ್ದುಗೆ ಸ್ವಾಗರ

ಭಾಲ್ಕಿಯಲ್ಲಿ ಬೃಹತ್‌ ರೋಡ್‌ ಶೋ

ಬಸವ ಕಲ್ಯಾಣದ ಬಳಿಕ ಪ್ರಜಾಧ್ವನಿ ಯಾತ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಅವರ ಸ್ವಕ್ಷೇತ್ರವಾದ ಭಾಲ್ಕಿಗೆ ತೆರಳಿತು. ಅಲ್ಲಿ ಸಿದ್ದು ಅಭಿಮಾನಿಗಳು, ಕಾಂಗ್ರೆಸ್‌ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ದೊರೆಯಿತು. ಡೊಳ್ಳು ಮೇಳ ಬಾರಿಸುವ ಮೂಲಕ ಕಾಂಗ್ರೆಸ್‌ ಬೆಂಬಲಿಗರು ಸ್ವಾಗತ ಕೋರಿದರು. ಸಿದ್ದರಾಮಯ್ಯ ಅವರಿಗೆ ಜೆಸಿಬಿ ಮೂಲಕ ಬೃಹತ್ ಹಾರ ಹಾಕಿ ಸ್ವಾಗತಿಸಲಾಯಿತು.

ಇದನ್ನೂ ಓದಿ : Prajadhwani : ಪರಮೇಶ್ವರ್ ಅಸಮಾಧಾನ ತಣಿಸಲು ಡಿ.ಕೆ. ಶಿವಕುಮಾರ್‌ ಸರ್ಕಸ್:‌ ಹೋದೆಡೆಯೆಲ್ಲಾ ಜತೆಗೆ ನಾಯಕರು

Exit mobile version