ವಿಜಯಪುರ: ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅಥವಾ ಜೆ.ಪಿ.ನಡ್ಡಾ ಎಷ್ಟು ಸಾರಿ ಬಂದರೂ ಬಿಜೆಪಿಗೆ ಏನೂ ಪ್ರಯೋಜನವಾಗಲ್ಲ. ಅವರು ಮಾಡಿರುವ ಭ್ರಷ್ಟಾಚಾರ ಬದಲಾವಣೆ ಮಾಡಲು ಆಗಲ್ಲ. ಯಾರೇ ಬಂದರೂ ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‌ಗೆ ಮತ್ತೆ ಆಶೀರ್ವಾದ ಮಾಡಬೇಕು ಎಂದು ರಾಜ್ಯದ ಜನತೆ ತೀರ್ಮಾನ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಕರಾವಳಿ ಭಾಗಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ವಿಚಾರಕ್ಕೆ ಸಿಂದಗಿ ಪ್ರಜಾಧ್ವನಿ ಯಾತ್ರೆಯಲ್ಲಿ (Prajadhwani Yatra) ಪ್ರತಿಕ್ರಿಯಿಸಿ, ಬರಲಿ ಬಿಡಿ ಪಾಪ, ಬರಬೇಡಿ ಎಂದು ಯಾರು ಹೇಳಿದ್ದಾರೆ. ಅಮಿತ್ ಶಾ ಆದರೂ ಬರಲಿ, ನಡ್ಡಾ ಆದರೂ ಬರಲಿ, ಮೋದಿಯಾದರೂ ಬರಲಿ. ಯಾರೂ ಬಂದರೂ ರಾಜ್ಯದಲ್ಲಿ ಬೆಲೆ ಏರಿಕೆ ಬದಲಾವಣೆ ಮಾಡಲು ಆಗಲ್ಲ. ಯುವಕರು, ಮಹಿಳೆಯರ ಸಮಸ್ಯೆಗೆ ಸ್ಪಂದಿಸಲು ಆಗಿಲ್ಲ. ಇವತ್ತು ರೈತರು ಕಂಗಾಲಾಗಿದ್ದಾರೆ. 2017ರಲ್ಲಿ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು. ಐದು ವರ್ಷ ಮುಗಿದು ಹೋಯಿತು. ರೈತರ ಸಾಲ ದುಪ್ಪಟ್ಟು ಆಯಿತೇ ಹೊರತು ಆದಾಯ ಹೆಚ್ಚಾಗಲಿಲ್ಲ ಎಂದು ಟೀಕಿಸಿದರು.
ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಆಗಿದ್ದರ ಬಗ್ಗೆ ಸಹಮತವಿದ್ದರೇ ಬಿಜೆಪಿ ಪರ ಮಾತನಾಡಿ, ಸಹಮತ ಇಲ್ಲ ಎನ್ನುವುದಾದರೆ ಬಿಜೆಪಿ ವಿರುದ್ಧ ಮಾತನಾಡಿ. ಸತ್ಯ ಬರೆಯಿರಿ, ನಾವೇನು ಸುಳ್ಳು ಬರಿಯಿರಿ ಎಂದು ಹೇಳಲ್ಲ ಎಂದು ಮಾಧ್ಯಮಗಳಿಗೆ ಸಲಹೆ ಕೊಟ್ಟ ಸಿದ್ದರಾಮಯ್ಯ , ನಾವು ಸತ್ಯ ಹೇಳುತ್ತೇವೆ. ಸುಳ್ಳು ಹೇಳಲು ಹೋಗಲ್ಲ ಎಂದು ಹೇಳಿದರು.
ಇದನ್ನೂ ಓದಿ | Amit Shah in Karavali : ಅಮರಗಿರಿ ಶ್ರೀ ಭಾರತ್ ಮಾತಾ ದೇಗುಲ ಲೋಕಾರ್ಪಣೆ ಮಾಡಿದ ಅಮಿತ್ ಶಾ
ರಾಜ್ಯಪಾಲರ ಬಜೆಟ್ ಮೇಲಿನ ಭಾಷಣ ಕುರಿತ ತಮ್ಮ ಹೇಳಿಕೆಗೆ ಸಿಎಂ ತಿರುಗೇಟು ನೀಡಿದ ವಿಚಾರಕ್ಕೆ ಸ್ಪಂದಿಸಿ, ಸತ್ಯ ಯಾವಾಗಲೂ ಕೂಡ ಅಪಥ್ಯ, ಸತ್ಯ ಯಾವಾಗಲೂ ಕಹಿಯಾಗಿರುತ್ತದೆ. 4.93 ಲಕ್ಷ ಮನೆ ಕಟ್ಟಿರುವುದಾಗಿ ಹೇಳಿದ್ದಾರೆ. ಅವರು ಹೇಳಿದ್ದೆಲ್ಲ ಸುಳ್ಳು. ಒಂದೇ ಒಂದು ಮನೆಯನ್ನೂ ಅವರು ಮಂಜೂರು ಮಾಡಿಲ್ಲ ಆರೋಪಿಸಿದರು.
ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದವರು ನಾವು. ಅಧಿಕಾರದಲ್ಲಿದ್ದಾಗಲೇ ಅದರ ಪ್ರಕ್ರಿಯೆ ಆರಂಭಿಸಿದ್ದೆವು. ಈಗ ಹಕ್ಕು ಪತ್ರ ಕೊಡಲು ಬಂದು ನಾವು ಮಾಡಿದ್ದೇವೆ ಎನ್ನುತ್ತಿದ್ದಾರೆ. ಅಡುಗೆ ಮಾಡಿದವರು ನಾವು, ಊಟ ಬಡಿಸುವ ಸಮಯದಲ್ಲಿ ಬಂದು ನಾವು ಮಾಡಿದ್ದೇವೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ನಾನು, ನಮ್ಮಪ್ಪ, ಅವ್ವ ಕೂಡ ಹಿಂದುಗಳೇ
ತಮ್ಮ ವಿರುದ್ಧ ಸಿ.ಟಿ.ರವಿ ಟೀಕೆಗಳಿಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ನಾನು ಹಿಂದು, ನಮ್ಮಪ್ಪ, ಅವ್ವ ಕೂಡ ಹಿಂದುಗಳೇ. ನಾನು ಹಿಂದು ಅಲ್ಲವಾ, ನಮ್ಮವ್ವ-ನಮ್ಮಪ್ಪ ಹಿಂದುಗಳಲ್ಲವಾ? ಸಿ.ಟಿ. ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂ ಆಗಿ ಬಿಡುತ್ತೇನಾ? ಹಿಂದುತ್ವದ ಬಗ್ಗೆ ಗೊತ್ತಿದ್ದರೆ ತಿಳಿಸಿ, ಗೊತ್ತಿಲ್ಲದಿದ್ದರೆ ಕೇಳುವುದು ಬೇಡ ಎಂದು ಕಿಡಿಕಾರಿದರು.
ನಮ್ಮ ಸರ್ಕಾರದಲ್ಲಿ 15 ಲಕ್ಷ ಮನೆಗಳನ್ನು ಕೊಟ್ಟಿದ್ದೆವು. ಎಲ್ಲವೂ ಮುಸ್ಲಿಂರಿಗೆ ಕೊಟ್ಟಿದ್ದೆವಾ? ಕೇವಲ ಶೇ.5 ರಷ್ಟು ಮುಸ್ಲಿಂರಿಗೆ ಕೊಟ್ಟಿದ್ದೆವು. ಶೇ. 95 ರಷ್ಟು ಹಿಂದುಗಳಿಗೆ ಕೊಡಲಾಗಿತ್ತು ಎಂದರು. ಇನ್ನು ಸಿದ್ದರಾಮಯ್ಯ ಆರೋಪಗಳೆಲ್ಲ ಸುಳ್ಳು ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗ ಏಳು ಕೆಜಿ ಇದ್ದ ಅಕ್ಕಿ 5 ಕೆಜಿಗೆ ಇಳಿಸಿದ್ದು ಸುಳ್ಳೇ? ಅಕ್ಕಿ ಕೇಂದ್ರ ಸರ್ಕಾರದ್ದು, ಚೀಲ ಮಾತ್ರ ಕಾಂಗ್ರೆಸ್‌ನದ್ದು ಎನ್ನುವ ಬಿಜೆಪಿಗರು ತಮ್ಮದೇ ಪಕ್ಷದ ಆಡಳಿತವಿರುವ ಉತ್ತರ ಪ್ರದೇಶ, ಗುಜರಾತ್, ಅಸ್ಸಾಂನಲ್ಲಿ ಏಕೆ ಕೊಡುತ್ತಿಲ್ಲ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ | GST Collection record : ಜನವರಿಯಲ್ಲಿ 6,085 ಕೋಟಿ ರೂ. ಜಿಎಸ್‌ಟಿ ಸಂಗ್ರಹ, ಹೊಸ ದಾಖಲೆ ಬರೆದ ರಾಜ್ಯ: ಬೊಮ್ಮಾಯಿ ಹರ್ಷ
ಕೋಲಾರ ಮತಕ್ಷೇತ್ರದಲ್ಲಿ ಸ್ಪರ್ಧಿಸುವುದು ತಮಗೆ ಸುರಕ್ಷಿತವಲ್ಲ ಎಂಬ ಮಾತಿಗೆ ಉತ್ತರಿಸಿ, ನಾನು ಕೋಲಾರದಿಂದ ಸ್ಪರ್ಧಿಸುವುದಕ್ಕೆ ನಿರ್ಧರಿಸಿದ್ದೇನೆ. ಸೇಫ್ ಅಲ್ಲ ಅನ್ನುವುದು ನಿಮಗೆ ಗೊತ್ತಾ ಎಂದು ಮಾಧ್ಯಮದವರಿಗೆ ಮರುಪ್ರಶ್ನಿಸಿದ ಸಿದ್ದರಾಮಯ್ಯ,…ʻಡು ಯೂ ನೋ ದಿ ಸೋಷಿಯಲ್ ಬ್ಯಾಟಲ್ ಆಫ್ ದಿ ಕೋಲಾರ ಕಾನ್‌ಸ್ಟಿಟ್ಯೂಯೆನ್ಸಿ? ಯಾರೋ ಹೇಳಿದರೆ ಕೇಳಬೇಡಿ. ಕೋಲಾರ ಹೇಗಿದೆ ಎಂಬುವುದು ಗೊತ್ತಾ?…ಗೊತ್ತಿದ್ದರೆ ಮಾತಾಡಿ, ಗೊತ್ತಿಲ್ಲದೆ ಇದ್ದಲ್ಲಿ ಅದರ ಬಗ್ಗೆ ಮಾತನಾಡಬೇಡಿʼ ಎಂದು ತಿಳಿಸಿದರು.
ʻನಾ ನಾಯಕಿ ಎಂದು ಕಾರ್ಯಕ್ರಮ ಮಾಡಿದ್ದೀರಿ, ಈ ಬಾರಿ ಎಷ್ಟು ಮಹಿಳೆಯರಿಗೆ ಟಿಕೆಟ್ ಕೊಡುತ್ತೀರಾʼ ಎಂಬ ಪ್ರಶ್ನೆಗೆ ಉತ್ತರಿಸಿ, ಎಲ್ಲೆಲ್ಲಿ ಗೆಲ್ಲುತ್ತಾರೆ ಅಲ್ಲೆಲ್ಲಾ ಕೊಡುತ್ತೇವೆ. ಇಷ್ಟು ಅಂತ ಹೇಳಲು ಬರುವುದಿಲ್ಲ.…ಸುಳ್ಳೆಲ್ಲಾ ಹೇಳಬಾರದು, ಇಷ್ಟು ಅಂತ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.