ಹಾವೇರಿ: ಇಲ್ಲೊಬ್ಬ ಮಂತ್ರಿ ಇದ್ದಾರೆ. ಅವರು ತಮ್ಮನ್ನು ತಾವು ಮಾರಿಕೊಂಡಿದ್ದಲ್ಲದೆ, ಕ್ಷೇತ್ರದ ಮತದಾರರನ್ನೂ ಮಾರುವ ನೀಚ ಕೆಲಸ ಮಾಡುತ್ತಿದ್ದಾರೆ: ಹೀಗೆ ಕೃಷಿ ಸಚಿವ ಬಿ.ಸಿ. ಪಾಟೀಲರ ಮೇಲೆ ಮತ್ತೆ ಹರಿಹಾಯ್ದಿದ್ದಾರೆ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿ.ಸಿ. ಪಾಟೀಲ್ ಅವರ ತವರು ಜಿಲ್ಲೆಯಾಗಿರುವ ಹಾವೇರಿಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ (Prajadhwani Yatre) ಬಸ್ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಿ.ಸಿ. ಪಾಟೀಲ್, ಸಿಎಂ ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ತರಾಟೆಗೆ ತೆಗೆದುಕೊಂಡರು.
ಬಿ.ಸಿ. ಪಾಟೀಲ್ ತಮ್ಮನ್ನು ತಾವು ಮಾರಿಕೊಂಡದ್ದು ಮಾತ್ರವಲ್ಲ, ಮತದಾರರನ್ನೂ ಮಾರಲು ಮುಂದಾಗಿದ್ದಾರೆ. ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಹೋಗಿ ಎಷ್ಟು ಕೋಟಿ ಕೊಡ್ತೀರಣ್ಣಾ ಅಂತ ಕೇಳಿದ್ದಾರೆ ಎಂದರು. ʻʻನಿಮ್ಮ ಜಿಲ್ಲೆಯ ಮಂತ್ರಿ ಒಬ್ಬರು ಪೊಲೀಸ್ ಆಫೀಸರ್ ಆಗಿದ್ದರು. ಅವರನ್ನು ಯಶವಂತಪುರದಲ್ಲಿ ಪೊರಕೆ ತಗೊಂಡು ಓಡಿಸಿದ್ರು. ಅವರ ಪಿಚ್ಚರ್ ಒಂದು ವಾರವೂ ಓಡಲಿಲ್ಲʼʼ ಎಂದು ಗೇಲಿ ಮಾಡಿದರು.
ʻʻಅದೃಷ್ಟವೋ ದುರಾದೃಷ್ಟವೋ ಗೋತ್ತಿಲ್ಲ. ಭಾವೈಕ್ಯತೆಯ ಜಿಲ್ಲೆಯಾದ ಹಾವೇರಿಯಲ್ಲಿ ಬಿಜೆಪಿ ಸರ್ಕಾರ ಬಂದಾಗಲೆಲ್ಲ ಅನಾಹುತ ನಡೆಯುತ್ತಲೇ ಇರುತ್ತದೆ. ಯಡಿಯೂರಪ್ಪನವರು ಸಿಎಂ ಆದಾಗ ಹಾವೇರಿಯಲ್ಲಿ ಗೋಲಿಬಾರ್ ಆಯಿತುʼʼ ಎಂದು ನೆನಪಿಸಿಕೊಂಡರು.
ʻʻಬಸವರಾಜ ಬೊಮ್ಮಾಯಿ ಸಿದ್ದರಾಮಯ್ಯನವರ ಗರಡಿಯಲ್ಲಿ ಬೆಳೆದವರು. ಅಧಿಕಾರದ ಆಸೆಗಾಗಿ ಕೋಮುವಾದದ ಪಕ್ಷಕ್ಕೆ ಹೋಗಿದ್ದಾರೆ. ಈಗ ಅವರೂ ಸುಳ್ಳು ಹೇಳಲು ಕಲಿತಿದ್ದಾರೆ. ಸುಳ್ಳು ಹೇಳೋದ್ರಲ್ಲಿ ಬೊಮ್ಮಾಯಿ ಅವರು ನರೇಂದ್ರ ಮೋದಿ ಜೊತೆ ಕಾಂಪಿಟೀಶನ್‌ಗೆ ಇಳಿದಿದ್ದಾರೆʼʼ ಎಂದರು.
ಸುಳ್ಳಿನ ಸರದಾರರು ಕಲ್ಬುರ್ಗಿಗೆ ಲಗ್ಗೆ ಇಟ್ಟಿದ್ದಾರೆ. ಸೌತ್ ಆಫ್ರಿಕಾ ಚಿರತೆ ತರಲು ಅಂದು ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ನಾವು ಹಣ ಕೊಟ್ಟಿದ್ದೆವು. ಈ ಮಹಾನುಭಾವ ಚಿರತೆಯನ್ನು ಕಾಡಿಗೆ ಬಿಡಲು ಮಾಧ್ಯಮದವರನ್ನು ಕರೆದುಕೊಂಡು ಹೋದರು ಎಂದು ಹೇಳಿದ ಹರಿಪ್ರಸಾದ್ ಅವರು, ಮೋದಿ ಹುಬ್ಬಳ್ಳಿಗೆ ಬಂದರೂ ಮಹದಾಯಿ ಬಗ್ಗೆ ಮಾತನಾಡಲಿಲ್ಲ ಎಂದರು. ಹುಬ್ಬಳ್ಳಿಯಲ್ಲಿ ನಡೆದಿದ್ದು ಸರ್ಕಾರಿ ಕಾರ್ಯಕ್ರಮ. ವಿವೇಕಾನಂದರ ಕಾರ್ಯಕರ್ಮದಲ್ಲಿ ತ್ರಿವರ್ಣ ಧ್ವಜ ಇರಬೇಕಾಗಿತ್ತು. ಆದರೆ, ಬಿಜೆಪಿ ಧ್ವಜ ಹಾಕಲಾಯಿತು. ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಲಾಯಿತು ಎಂದರು.
ಮಧ್ಯ ಪ್ರದೇಶದ ಸಂಸದರೊಬ್ಬರು ಬಂದು ಕತ್ತಿ ಚಾಕು ಹಿಡಿಯಿರಿ ಅಂತಾರೆ. ಆರೋಗ್ಯದ ಬಗ್ಗೆ ಯೋಜನೆ ಮಾಡುವಾಗ ಕತ್ತಿ ಚಾಕು ಬಗ್ಗೆ ಮಾತಾಡ್ತಾರೆ. ತ್ರಿವರ್ಣ ಧ್ವಜ ತೆಗೆದು ಬಿಜೆಪಿ ಬಾವುಟ ಕೊಟ್ಟ ಹಾಗೆ ಪೆನ್ನು ಪುಸ್ತಕ ತೆಗೆದು, ಮಕ್ಕಳ ಕೈಗೆ ಚಾಕು ಚೂರಿ ಕೊಡ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ | Loose Talk : ಬಿಜೆಪಿಯಲ್ಲಿ ಪಿಂಪ್ ರವಿಗಳೇ ತುಂಬಿದ್ದಾರೆ: ಸ್ಪಷ್ಟೀಕರಣದಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ಬಿ.ಕೆ. ಹರಿಪ್ರಸಾದ್