ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮುನ್ನ ಆರಂಭಿಸಿರುವ ಪ್ರಜಾಧ್ವನಿ ಯಾತ್ರೆಯನ್ನು ಆರಂಭಿಸಲಿರುವ ಕಾಂಗ್ರೆಸ್, ಯಾತ್ರೆಯಲ್ಲಿ ಪ್ರಸ್ತಾಪಿಸಲು ರಾಜ್ಯ ಸರ್ಕಾರದ ವಿರುದ್ಧ ಆರೋಪಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ʼಬಿಜೆಪಿ ಪಾಪದ ಪುರಾಣʼ ಎಂಬ ಹೆಸರಿನ ಆರೋಪಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಬಿಡುಗಡೆ ಮಾಡಿದರು.
ಆರೋಪಪಟ್ಟಿಯಲ್ಲಿ ಪ್ರಮುಖವಾಗಿ, ಆಪರೇಷನ್ ಕಮಲ, 40% ಭ್ರಷ್ಟಾಚಾರ, ದಿನನಿತ್ಯದ ಬಳಕೆ ವಸ್ತುಗಳ ಬೆಲೆ ದುಬಾರಿ, ರೈತರ ಆತ್ಮಹತ್ಯೆ ದುಪ್ಪಟ್ಟು, ಉದ್ಯೋಗ ಸೃಷ್ಟಿ ಭರವಸೆ ಹುಸಿ ಸೇರಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.
ಬಿಜೆಪಿ ಲಂಚ ರೇಟ್ ಕಾರ್ಡ್ ಎಂಬ ಕೋಷ್ಟಕದಲ್ಲಿ, ಸಿಎಂ ಹುದ್ದೆಗೆ 2,500ಕೋಟಿ ರೂ., ಮಂತ್ರಿಗಳ ಹುದ್ದೆ 100 ಕೋಟಿ ರೂ., ಬಿಡಿಎ ಆಯುಕ್ತರಾಗಲು 15 ಕೋಟಿ ರೂ. ಸೇರಿ ವಿವಿಧ ಹುದ್ದೆಗಳಿಗೆ ದರ ನೀಡಲಾಗಿದೆ.