ಬಾಗಲಕೋಟೆ: ನಗರದಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ (Prajadwani Yatra) ಪಲಾವ್ ಖಾಲಿಯಾದ ಹಿನ್ನೆಲೆಯಲ್ಲಿ ಆಯೋಜಕರ ವಿರುದ್ಧ ಕಾರ್ಯಕರ್ತರು ಅಕ್ರೋಶ ಹೊರಹಾಕಿದ್ದಾರೆ. ನೂರಾರು ಮಂದಿಗೆ ಊಟ ಕೊರತೆಯಾದ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಮಾವೇಶಕ್ಕೆ ಸಾವಿರಾರು ಜನರು ಬಂದ ಹಿನ್ನೆಲೆಯಲ್ಲಿ ಬುಧವಾರ ನವನಗರದ ಕಾಳಿದಾಸ ಕಲ್ಯಾಣ ಮಂಟಪದ ಆವರಣದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕೆಲವರಿಗೆ ಊಟ ಸಿಕ್ಕಿಲ್ಲ. ಹೀಗಾಗಿ ಕೋಪಗೊಂಡ ಕಾರ್ಯಕರ್ತರು, ರೇಷನ್ ಸಾಗಿಸುತ್ತಿದ್ದ ವಾಹನವನ್ನು ತಡೆ ಹಿಡಿದು, ಆಯೋಜಕರು ಹಾಗೂ ಅಡುಗೆ ತಯಾರಕರ ವಿರುದ್ಧ ಆಕ್ರೋಶ ಹೊರಹಾಕಿದರು. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸಿದರು.
ಊಟಕ್ಕೆ ಕೊರತೆಯಾದ ಬಗ್ಗೆ ಪ್ರತಿಕ್ರಿಯಿಸಿದ ಅಡುಗೆ ತಯಾರಕರು, ಎಲ್ಲರಿಗೂ ಸಾಕಾಗುವಷ್ಟು ಅಡುಗೆ ಮಾಡಿದ್ದೆವು. ಆದರೆ, ಬಹಳ ಜನರು ಪ್ಲೇಟ್‌ಗೆ ಹಾಕಿಸಿಕೊಂಡ ಪಲಾವ್ ಸಂಪೂರ್ಣ ತಿನ್ನದೆ ವ್ಯರ್ಥ ಮಾಡಿದ್ದಾರೆ ಎಂದು ದೂರಿದರು. ಆದರೆ, ಕಾರ್ಯಕರ್ತರು ಪಟ್ಟು ಬಿಡದೆ ವಾಹನದಲ್ಲಿದ್ದ ಆಹಾರ ಸಾಮಗ್ರಿಯನ್ನು ವಾಪಸ್ ತೆಗೆದುಕೊಂಡು ತಾವೇ ಅಡುಗೆ ತಯಾರಿ ಮಾಡಿಕೊಳ್ಳಲು ಮುಂದಾಗಿದ್ದು ಕಂಡುಬಂತು. ನಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.
ಇದನ್ನೂ ಓದಿ | Karnataka Election : ಸಿದ್ದರಾಮಯ್ಯ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ: ಡಿ.ಕೆ. ಶಿವಕುಮಾರ್ ಸ್ಪಷ್ಟನೆ