ಬೆಂಗಳೂರು: ಲೈಂಗಿಕ ದೌರ್ಜನ್ಯ (Physical abuse) ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna case) ವಿರುದ್ಧ ಒಟ್ಟು ಮೂರು ಅತ್ಯಾಚಾರ ಕೇಸ್‌ಗಳು ದಾಖಲಾಗಿವೆ. ಆದರೆ ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಅವರನ್ನು ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಜನತಾ ಪಕ್ಷ (Janata Party) ಘೋಷಿಸಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಪಕ್ಷ, ಈ ಘೋಷಣೆಯ ನೋಟಿಸ್ ಅನ್ನು ಬೆಂಗಳೂರಿನಲ್ಲಿ ವಿವಿಧಡೆ ಅಂಟಿಸಲು ಮುಂದಾಗಿದೆ. ರೆಡ್ಡಿ ಪೆಟ್ರೋಲ್ ಬಂಕ್‌ನಿಂದ ಶಿವಾನಂದ ಸರ್ಕಲ್, ಚಾಲುಕ್ಯ ಸರ್ಕಲ್, ಎಂ.ಎಸ್.ಬಿಲ್ಡಿಂಗ್, ಕೆ.ಆರ್.ಸರ್ಕಲ್, ಫ್ರೀಡಂ ಪಾರ್ಕ್, ಮೌರ್ಯ ಸರ್ಕಲ್, ಆನಂದದರಾವ್ ಸರ್ಕಲ್‌ವರೆಗೆ ನೋಟಿಸ್ ಅಂಟಿಸಲಿದೆ.
ಪ್ರಕಟಣೆಯಲ್ಲಿ ಏನಿದೆ?
ಮಹಿಳೆಯರ ಮೇಲಿನ ಲೈಂಗಿಕ-ಮಾನಸಿಕ ದೌರ್ಜನ್ಯ ಹಾಗೂ ಪೆನ್‌ಡ್ರೈವ್ ಹಗರಣಕ್ಕೆ ಸಂಬಂಧಿಸಿದಂತೆ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಈ ಹಗರಣ ದೇಶಾದ್ಯಂತ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಪಡೆದಿದೆ. ಇದರಿಂದಾಗಿ ಹಾಸನ ಜಿಲ್ಲೆಯ, ಕರ್ನಾಟಕ ರಾಜ್ಯದ ಸಮಸ್ತ ಕನ್ನಡಿಗರ ಘನತೆಗೆ ಧಕ್ಕೆ ಉಂಟಾಗಿದೆ. ಪ್ರಭಾವಿ ಕುಟುಂಬದ ಹಾಗೂ ಜನಪ್ರತಿನಿಧಿಯೇ ಈ ರೀತಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಹೊತ್ತಿರುವುದು ನಿಜಕ್ಕೂ ನಾಚಿಗೆಗೇಡಿನ ವಿಷಯ. ಪ್ರಕರಣದ ಸತ್ಯಾಸತ್ಯತೆ ಏನೇ ಇದ್ದರೂ, ಆರೋಪಿಯಾದವರು ತನಿಖೆಯನ್ನು ಎದುರಿಸಿದ ತಾನು ನಿರಪರಾಧಿ ಎನ್ನುವುದನ್ನು ನಿರೂಪಿಸಬೇಕು. ಜವಾಬ್ದಾರಿಯುತ ಸಂಸದ ಹುದ್ದೆಯಲ್ಲಿರುವ ವ್ಯಕ್ತಿಯೇ ತಲೆಮರೆಸಿಕೊಂಡಿರುವುದು ತಪ್ಪು ಸಂದೇಶ ರವಾನಿಸಿದಂತಾಗುತ್ತದೆ.
ಕನ್ನಡಿಗರ, ಕರ್ನಾಟಕದ ಘನತೆಯನ್ನು ಮುಖ್ಯವಾಗಿ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯುವ ಸಲುವಾಗಿ ರಾಷ್ಟ್ರದ ಪ್ರಜ್ಞಾವಂತ ರಾಜಕೀಯ ಪಕ್ಷವಾದ ನಮ್ಮ ಜನತಾ ಪಕ್ಷದ ವತಿಯಿಂದ ಈ ಪ್ರಕರಣದ ಮುಖ್ಯ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಹುಡುಕಿ ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಸಹಿತ ಸನ್ಮಾನವನ್ನು ಘೋಷಿಸುತ್ತಿದ್ದೇವೆ ಎಂದು ನೋಟಿಸ್‌ನಲ್ಲಿ ಬರೆಯಲಾಗಿದೆ.
36 ಸೆಕೆಂಡ್‌ಗಳ ಮತ್ತೊಂದು ಆಡಿಯೊ ಬಾಂಬ್
ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ (Prajwal Revanna Case) ಅಶ್ಲೀಲ ವಿಡಿಯೊ ಹರಿಬಿಟ್ಟವರ ಬಗ್ಗೆ ಮಾಹಿತಿ ಬಹಿರಂಗ ಮಾಡುತ್ತೇನೆ ಎಂದಿದ್ದ ವಕೀಲ ದೇವರಾಜೇಗೌಡ, ಇದೀಗ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಸ್ಫೋಟಕ ಆಡಿಯೊ ರಿಲೀಸ್ ಮಾಡಿದ್ದಾರೆ. ಇದರಿಂದ ಪ್ರಜ್ವಲ್ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ.
ಇತ್ತೀಚೆಗೆ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ವಕೀಲ ದೇವರಾಜೇಗೌಡ, ಹಾಸನ ಪೆನ್‌ಡ್ರೈವ್ ಪ್ರಕರಣದ ಹಿಂದಿನ ಕಥಾನಾಯಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಎಂದು ಗಂಭೀರ ಆರೋಪ ಮಾಡಿದ್ದರು. ನಂತರ ಇದಕ್ಕೆ ಸಂಬಂಧಪಟ್ಟಂತೆ ಮತ್ತಷ್ಟು ಸಾಕ್ಷ್ಯ ನೀಡುವುದಾಗಿ ಹೇಳಿದ್ದರು. ಇದೀಗ ಪ್ರಕರಣದ ಬಗ್ಗೆ ಮಂಡ್ಯ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಜತೆ ಮಾತುಕತೆಯ ಆಡಿಯೊವನ್ನು ಹರಿಬಿಟ್ಟಿದ್ದಾರೆ. ಒಟ್ಟು ಮೂರು ಆಡಿಯೊಗಳನ್ನು ದೇವರಾಜೇಗೌಡ ರಿಲೀಸ್ ಮಾಡಿದ್ದು, ಇದರಲ್ಲಿ ಹನಿಟ್ರ್ಯಾಪ್ ಮಾಡಿದ್ದರು ಎನ್ನಲಾಗಿದ್ದ ಮಹಿಳೆಯ ಗಂಡ ಮೋಹನ್ ಜತೆಗಿನ ಮಾತುಕತೆಯ ವಿಡಿಯೊ ಒಂದು ಇದ್ದು, ಉಳಿದೆರಡು ಆಡಿಯೊಗಳು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಜತೆ ಮಾತನಾಡಿರುವುದಾಗಿದೆ.
ಆಡಿಯೊದಲ್ಲಿ ಏನಿದೆ?
ಆಡಿಯೊದಲ್ಲಿ ಮೊದಲಿಗೆ ನನ್ನನ್ನು ಭೇಟಿ ಆಗಿದ್ದೆ ಎಂದು ದೇವರಾಜೇಗೌಡ ಹೇಳಿರುವುದು ಯಾಕೆ ಎಂದು ಡಿಕೆಶಿ ತಮ್ಮ ಬಳಿ ಕೇಳಿರುವುದಾಗಿ ಮಾಜಿ ಸಂಸದ ಶಿವರಾಮೇಗೌಡ ಹೇಳುತ್ತಾರೆ. ಈ ವೇಳೆ ವಕೀಲ ದೇವರಾಜೇಗೌಡ, ನಮಗೆ ಏನಾದರೂ ಎಸ್‌ಐಟಿಯವರು ನೋಟಿಸ್ ಕೊಡತ್ತಾರಾ ಎಂದು ಪ್ರಶ್ನಿಸಿದ್ದಾರೆ. ಆಗ ಕೊಡ್ತಾರೆ, ಕೊಡ್ತಾರೆ ಎಂದ ಶಿವರಾಮೇಗೌಡ, ಎಸ್‌ಐಟಿ ಅಧಿಕಾರಿಗಳ ಮುಂದೆ ಡಿಕೆ ಬಗ್ಗೆ ನೀನು ಚಕಾರ ಎತ್ತಬೇಡ. ನಾನು ಇವತ್ತಿನಿಂದ ಅಲ್ಲ, ಬಹಳ ವರ್ಷಗಳಿಂದ ರೇವಣ್ಣ ಕುಟುಂಬದ ವಿರುದ್ಧ ಕೋರ್ಟ್‌ನಲ್ಲಿ ಹೋರಾಟ ಮಾಡುತ್ತಿದ್ದೇನೆ ಎಂದು ಹೇಳು ಎಂದು ಶಿವರಾಮೇಗೌಡ ಕಿವಿಮಾತು ಹೇಳಿದ್ದಾರೆ.
ಮತ್ತೊಂದು ಆಡಿಯೊದಲ್ಲಿ ತಮಗೆ ಹನಿಟ್ರ್ಯಾಪ್ ಮಾಡಿದ್ದರು ಎನ್ನಲಾದ ಮಹಿಳೆಯ ಗಂಡ ಮೋಹನ್ ಎಂಬುವವರ ಜತೆ ದೇವರಾಜೇಗೌಡ ಮಾತನಾಡಿದ್ದಾರೆ. ನಿಮ್ಮ ಹೆಂಡತಿ, ಅವರ ಜತೆ ಸೇರಿಕೊಂಡು ನನ್ನನ್ನು ಹನಿಟ್ರ್ಯಾಪ್ ಮಾಡಿದ್ದಾಳೆ, ಅವಳ ಜತೆ ಡಿವೋರ್ಸ್ ಆಗಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ನಮ್ಮನ್ನು ಮನೆಯಿಂದ ಆಚೆ ಹಾಕಿ, ಹಾಸನದಲ್ಲಿ ನಮ್ಮ ಆಸ್ತಿಯನ್ನು ಅವಳ ಹೆಸರಿಗೆ ಮಾಡಿಕೊಂಡಿದ್ದಾಳೆ. ನಾನು ಹೇಗೋ ಜೀವನ ಮಾಡಿಕೊಂಡಿದ್ದೇನೆ ಎಂದು ಮೋಹನ್ ಹೇಳಿದ್ದಾರೆ.
ಇದನ್ನೂ ಓದಿ: Prajwal Revanna case: ಪ್ರಜ್ವಲ್ ಮೇಲೆ ಒಟ್ಟು ಮೂರು FIR; ಮೂರರಲ್ಲೂ ವಾಂಟೆಡ್ ಲಿಸ್ಟ್‌ನಲ್ಲಿ ಸಂಸದ!