ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊಗಳು, ಲೈಂಗಿಕ ದೌರ್ಜನ್ಯ, ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ, ಜೆಡಿಎಸ್ ನಾಯಕ ಹೆಚ್.ಡಿ.ರೇವಣ್ಣ (HD Revanna) ಅವರನ್ನು ಎಸ್‌ಐಟಿ(SIT) ಅಧಿಕಾರಿಗಳು ವಶಪಡಿಸಿಕೊಂಡಿರರುವ ವಿಚಾರ ಮೈತ್ರಿ ಪಕ್ಷ ಬಿಜೆಪಿಗೆ ತೀವ್ರ ಮುಜುಗರ ತಂದಿದೆ. ಈಗಾಗಲೇ ಈ ಪ್ರಕರಣದಿಂದ ಅಂತರ ಕಾಪಾಡಿಕೊಳ್ಳುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಖಡಕ್ ಸೂಚನೆ ನೀಡಿದೆ. ಇದೀಗ ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರೇ ಹೆಚ್.ಡಿ ರೇವಣ್ಣ- ಪ್ರಜ್ವಲ್ ಪ್ರಕರಣದಲ್ಲಿ ಅಂತರ ಕಾಪಾಡಿಕೊಂಡಿದ್ದಾರೆ. ಅಲ್ಲದೇ ತಮ್ಮನ್ನು ಭೇಟಿಯಾಗಲು ಬಂದಿದ್ದ ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾಗದೇ ವಾಪಾಸ್ ಕಳುಹಿಸಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲೆಂದು ನಿನ್ನೆ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಶಾ ತಾಜ್ ವೆಸ್ಟ್ ಎಂಡ್ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಮಧ್ಯೆ ರಾತ್ರಿ ಅಮಿತ್ ಶಾ ಭೇಟಿಗೆಂದು ಹೆಚ್ ಡಿ ಕುಮಾರಸ್ವಾಮಿಯವರು ತಾಜ್ ವೆಸ್ಟ್ ಲ್ಯಾಂಡ್ ಹೊಟೇಲ್‌ಗೆ ತೆರಳಿದ್ದರು. ಕುಮಾರಸ್ವಾಮಿಯವರ ಭೇಟಿಗೆ ಅಮಿತ್ ಶಾ ಒಪ್ಪದ ಕಾರಣ ಸುಮಾರು ಒಂದು ಗಂಟೆ ನಂತರ ಹೆಚ್‌ಡಿಕೆ ವಾಪಾಸಾಗಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲ್ಲ ಎಂದು ಹೆಚ್‌ಡಿಕೆ ಕೈಸನ್ನೆ ಮಾಡಿ ಹೊರಟಿದ್ದಾರೆ.
ಕರ್ನಾಟಕ ಸೇರಿ ದೇಶಾದ್ಯಂತ ಸುದ್ದಿಯಾಗಿರುವ ಪೆನ್‌ಡ್ರೈವ್ ಕೇಸ್‌ನಲ್ಲಿ ಹೆಚ್ ಡಿ ರೇವಣ್ಣ ಬಂಧನ ಆಗಿದ್ದು, ಪ್ರಕರಣಕ್ಕೆ ಮಹತ್ವದ ತಿರುವೊಂದು ಸಿಕ್ಕಿದೆ. ಇದರ ಬೆನ್ನಲ್ಲೇ, ಅಶ್ಲೀಲ ವಿಡಿಯೊಗಳು ವೈರಲ್ ಆಗುತ್ತಲೇ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣ ಕೂಡ ಭಾರತಕ್ಕೆ ಬಂದು ಪೊಲೀಸರಿಗೆ ಶರಣಾಗಲಿದ್ದಾರೆ ಎಂದು ತಿಳಿದುಬಂದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಕೇಸ್‌ನಲ್ಲಿ ಮೊದಲ ಆರೋಪಿಯಾಗಿರುವ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಪಾಸ್‌ಪೋರ್ಟ್ ಎಂಟ್ರಿ ಮಾಹಿತಿಯ ಮೇರೆಗೆ ಒಂದಷ್ಟು ಸುಳಿವು ಪತ್ತೆಹಚ್ಚಿದ್ದಾರೆ. ಪಾಸ್‌ಪೋರ್ಟ್ ಎಂಟ್ರಿ ಆಧಾರದ ಮೇಲೆ ಪ್ರಜ್ವಲ್ ರೇವಣ್ಣ ಬುಡಾಫೆಸ್ಟ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಜ್ವಲ್ ರೇವಣ್ಣ ಪತ್ತೆಗೆ ಕಸರತ್ತು ನಡೆಸುತ್ತಿರುವ ಎಸ್‌ಐಟಿ ಅಧಿಕಾರಗಳು, ಬ್ಲ್ಯೂ ಕಾರ್ನರ್ ನೋಟಿಸ್ ಹೊರಡಿಸಬೇಕು ಎಂದು ಸಿಬಿಐಗೆ ಮನವಿ ಕೂಡ ಮಾಡಿದ್ದಾರೆ.
ಆರೋಪಿಯ ಚಲನವಲನಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಲು ಬ್ಲ್ಯೂ ಕಾರ್ನರ್ ನೋಟೀಸ್ ಜಾರಿಗೊಳಿಸಲಾಗುತ್ತದೆ. ಆರೋಪಿ ಬಗ್ಗೆ ಸುಳಿವು ಸಿಕ್ಕ ಬಳಿಕ ಆ ಮಾಹಿತಿಯನ್ನು ಸಿಐಡಿಗೆ ಸಿಬಿಐ ನೀಡಲಿದೆ. ಮತ್ತೆ ಇದನ್ನು ಆಧರಿಸಿ ಕೋರ್ಟ್‌ಗೆ ಮಾಹಿತಿ ನೀಡಿ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲು ಎಸ್ಐಟಿ ಮನವಿ ಮಾಡಬೇಕಿದೆ. ಸಿಬಿಐ, ಇಂಟರ್‌ಫೋಲ್‌ಗೆ ಮನವಿ ಮಾಡಿ ರೆಡ್ ಕಾರ್ನರ್ ನೊಟೀಸ್ ಪಡೆಯಲಿದೆ.