ಹಾಸನ: ಲೈಂಗಿಕ ದೌರ್ಜನ್ಯ ಸಂತ್ರಸ್ತೆ ಕಿಡ್ನ್ಯಾಪ್ ಪ್ರಕರಣದಲ್ಲಿ (Prajwal Revanna Case) ತನಿಖೆಗೆ ಸಹಕರಿಸುವುದಾಗಿ ಹೇಳಿದ್ದ ಭವಾನಿ ರೇವಣ್ಣ ಅವರು ಶನಿವಾರವೂ ಪ್ರತ್ಯಕ್ಷವಾಗಿಲ್ಲ. ಭವಾನಿ ರೇವಣ್ಣ (Bhavani Revanna) ಅವರನ್ನು ವಶಕ್ಕೆ ಪಡೆಯಲು ತೆರಳಿದ್ದ ಎಸ್‌ಐಟಿ ಅಧಿಕಾರಿಗಳು ಹೊಳೆನರಸೀಪುರ ನಿವಾಸದ ಎದುರು ಸತತ 7 ಗಂಟೆ ಕಾದು ವಾಪಸ್ ಆಗಿದ್ದಾರೆ.
ಮನೆ ಬಳಿ ಎಷ್ಟು ಕಾದರೂ ಬಾರದ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗದ ಬಗ್ಗೆ ವರದಿ ಮಾಡಿಕೊಂಡು ಎಸ್‌ಐಟಿ ಅಧಿಕಾರಿಗಳು ತೆರಳಿದ್ದಾರೆ. ಬೆಳಗ್ಗೆ 11 ಗಂಟೆಗೆ ಮನೆ ಬಳಿ ತೆರಳಿದ್ದ ಎಸ್‌ಐಟಿ ಟೀಂನಲ್ಲಿ ಇನ್ಸ್‌ಪೆಕ್ಟರ್ ಹಾಗೂ ಮಹಿಳಾ ಇನ್ಸ್‌ಪೆಕ್ಟರ್ ತೆರಳಿದ್ದರು. ಎಷ್ಟು ಕಾದರೂ ಭವಾನಿ ರೇವಣ್ಣ ಬಾರದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ವಾಪಸ್ ತೆರಳಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಯಿಂದ 5 ಗಂಟೆ ನಡುವೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ನೀಡಿತ್ತು. ಆದರೆ ಬಂಧನ ಭೀತಿಯಿಂದ ಭವಾನಿ ರೇವಣ್ಣ ವಿಚಾರಣೆಗೆ ಹಾಜರಾಗಿಲ್ಲ.
ಇದನ್ನೂ ಓದಿ | Prajwal Revanna Case: ವಿಚಾರಣೆಯಲ್ಲಿ ಬಾಯಿಬಿಡದ ಪ್ರಜ್ವಲ್; ಸ್ಥಳ ಮಹಜರಿಗಾಗಿ ಹೊಳೆನರಸೀಪುರಕ್ಕೆ ಕರೆದೊಯ್ಯಲು ಸಿದ್ಧತೆ
ಭವಾನಿ ರೇವಣ್ಣಗೆ ನ್ಯಾಯಾಲಯದ ಬಗ್ಗೆ ಗೌರವವಿದೆ: ವಕೀಲೆ ಸುಮಾ
ಹೊಳೆನರಸೀಪುರದಲ್ಲಿ ಭವಾನಿ ರೇವಣ್ಣ ಪರ ವಕೀಲೆ ಸುಮಾ ಮಾತನಾಡಿ, ಭವಾನಿ ರೇವಣ್ಣ ಎಲ್ಲಿದ್ದಾರೆ ಎಂಬ ಮಾಹಿತಿ ನಮಗೆ ಇಲ್ಲ. ಹೆಣ್ಣುಮಕ್ಕಳು ಮೇಡಂ ಪರವಾಗಿ ಕಷ್ಟದಲ್ಲೂ ಇರುತ್ತೇವೆ, ಸುಖದಲ್ಲೂ ಇರುತ್ತೇವೆ. ಆದರೆ ನಾನು ಇಂದು ಬಂದಿದ್ದು ವಕೀಲಳಾಗಿ. ಭವಾನಿ ರೇವಣ್ಣ ಅವರಿಗೆ ಆರೋಗ್ಯ ಸರಿಯಿಲ್ಲ, ಎರಡು ಮಂಡಿ ಆಪರೇಷನ್ ಆಗಿದೆ. ಅವರ ಅಣ್ಣ ಸಾವನ್ನಪ್ಪಿದ್ದು, ಆ ನೋವಿನಲ್ಲೂ ಇದ್ದಾರೆ. ಖಂಡಿತವಾಗಿಯೂ ತನಿಖೆಗೆ ಹಾಜರಾಗುತ್ತಾರೆ. ಕಾನೂನು ಬಗ್ಗೆ ಮೇಡಂಗೆ ಗೌರವವಿದೆ. ಅವರಿಗೆ ನ್ಯಾಯಾಲಯದ ಬಗ್ಗೆ ಗೌರವವಿದೆ. ಆದಷ್ಟು ಬೇಗ ಬರ್ತಾರೆ, ತನಿಖೆ ಎದುರಿಸುತ್ತಾರೆ, ನಿರ್ದೊಷಿಯಾಗಿ ಬರ್ತಾರೆ ಎಂದು ಹೇಳಿದರು.