ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣ(Hassan Pen Drive Case)ದಲ್ಲಿ ದಿನಕ್ಕೊಂಡು ಬೆಳವಣಿಗೆ ನಡೆಯುತ್ತದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪ್ರಜ್ವಲ್ ತಂದೆ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಎಸ್‌ಐಟಿ ವಶಕ್ಕೆ ಪಡೆದು ವಿಚಾರಣೆಯನ್ನು ತೀವ್ರಗೊಳಿಸಿದೆ. ಈ ಮಧ್ಯೆ ಪ್ರಕರಣದಲ್ಲಿ ರೇವಣ್ಣ ಅವರ ಪತ್ನಿ ಭವಾನಿ ಹೆಸರೂ ಕೇಳಿ ಬಂದಿದ್ದು, ಅವರಿಗೂ ಸಂಕಷ್ಟ ಎದುರಾಗಲಿದೆ.
ಎರಡು ಕೇಸ್‌ನಲ್ಲಿ ಸಂತ್ರಸ್ತೆಯರು ಭವಾನಿ ರೇವಣ್ಣ ಅವರ ಹೆಸರು ಉಲ್ಲೇಖಿಸಿದ್ದಾರೆ. ಲೈಂಗಿಕ ಕಿರುಕುಳ ಆರೋಪ ಮತ್ತು ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಹೆಸರು ಕೇಳಿ ಬಂದಿದೆ. ಅದರಲ್ಲಿಯೂ ಅಪಹರಣ ಕೇಸ್‌ನಲ್ಲಿ ನೇರವಾಗಿ ಭವಾನಿ ರೇವಣ್ಣ ಅವರ ವಿರುದ್ಧ ಆರೋಪ ಮಾಡಲಾಗಿದೆ. ಭವಾನಿ ರೇವಣ್ಣ ಕರೆದರು ಎಂದು ಹೇಳಿಯೇ ಅಪಹರಣ ಮಾಡಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಿಡ್ನಾಪ್ ಕೇಸ್‌ನಲ್ಲಿ ಭವಾನಿ ರೇವಣ್ಣ ಅವರಿಗೆ ಕಾನೂನು ಕಂಟಕ ಎದುರಾಗುವ ಸಾಧ್ಯತೆ ಇದೆ.
ಪ್ರಕರಣ ಸಂಬಂಧ ತೀವ್ರ ತನಿಖೆ ನಡೆಸುತ್ತಿರುವ ಎಸ್‌ಐಟಿ ಈಗಾಗಲೇ ಭವಾನಿ ರೇವಣ್ಣ ಅವರಿಗೆ ನೋಟಿಸ್ ನೀಡಿ ಮಾಹಿತಿ ಪಡೆದಿದೆ. ತನಿಖೆ ವೇಳೆ ಅವರ ವಿರುದ್ಧ ಸಾಕ್ಷಿ ಕಂಡು ಬಂದರೆ ಅವರೂ ಕಾನೂನಿನ ಕೈಗೆ ಸಿಲುಕಿಕೊಳ್ಳಲಿದ್ದಾರೆ. ಸದ್ಯ ಭವಾನಿ ರೇವಣ್ಣ ಅವರ ಪಾತ್ರದ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜ್ವಲ್ ರೇವಣ್ಣಗಾಗಿ ತೀವ್ರ ಹುಡುಕಾಟ
ಇತ್ತ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಅವರಿಗಾಗಿ ಎಸ್‌ಐಟಿ ತೀವ್ರ ಹುಡುಕಾಟ ನಡೆಸುತ್ತಿದೆ. ಬ್ಲೂ ಕಾರ್ನರ್ ನೋಟಿಸ್ ಜತೆಗೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಸಿಬಿಐಗೆ ಎಸ್‌ಐಟಿ ಮನವಿ ಸಲ್ಲಿಸಿದೆ. ಪ್ರಜ್ವಲ್ ರೇವಣ್ಣ ಬಳಿ ಇರುವ ರಾಜತಾಂತ್ರಿಕ ಪಾಸ್‌ಪೋರ್ಟ್ ಸಹ ವಜಾಗೊಳಿಸಲು ಆಗ್ರಹಿಸಿದೆ. ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್‌ನಿಂದ ಕೊನೆಯ ಬಾರಿ ಯಾವ ದೇಶಕ್ಕೆ ಟಿಕೇಟ್ ಬುಕ್ ಅಗಿದೆ ಎಂಬ ಮಾಹಿತಿಯನ್ನೂ ಎಸ್‌ಐಟಿ ಕಲೆ ಹಾಕುತ್ತಿದೆ. ಕೊನೆಯ ಬಾರಿ ಯಾವ ಏರ್‌ಪೋರ್ಟ್ ತಲುಪಿದ್ದಾರೆ ಎನ್ನುವ ಮಾಹಿತಿ ನೀಡಲು ರೆಡ್ ಕಾರ್ನರ್ ನೊಟೀಸ್ ನೀಡಿ ಮನವಿ ಮಾಡಿದೆ.
ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿಲು ಎಲ್ಲ ರೀತಿಯಿಂದಲೂ ಎಸ್‌ಐಟಿ ಪ್ರಯತ್ನ ಪಡುತ್ತಿದೆ. ಪ್ರಜ್ವಲ್ ರೇವಣ್ಣ ಅವರು ಆಪ್ತರ ಜತೆ ಸಂಪರ್ಕದಲ್ಲಿರುವ ಹಿನ್ನೆಲೆಯಲ್ಲಿ ಆಪ್ತರು ಹಾಗೂ ಕುಟುಂಬದ ಸದಸ್ಯರ ಮೇಲೆಯೂ ನಿಗಾವಹಿಸಲಾಗಿದೆ. ರಾಜ್ಯದಲ್ಲಿ ಎರಡನೇ ಹಂತ ಮುಗಿದ ನಂತರ ಪ್ರಜ್ವಲ್ ಎಸ್‌ಐಟಿ ಮುಂದೆ ಶರಣಾಗುತ್ತಾರೆ ಎನ್ನುವ ಮಾತು ಕೂಡ ಕೇಳಿ ಬಂದಿದೆ. ಅದಾಗ್ಯೂ ದೇಶದ ಪ್ರಮುಖ ಏರ್‌ಪೋರ್ಟ್‌ಗಳಲ್ಲಿ ಎಸ್‌ಐಟಿ ಅಧಿಕಾರಿಗಳು ಮೇಲೆ ನಿಗಾ ವಹಿಸಿದ್ದಾರೆ. ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ.