Site icon Vistara News

Prajwal Revanna Case: ದೇವರಾಜೇಗೌಡ ನನ್ನ ವಿರುದ್ಧ ಸುಳ್ಳು ಅಪಾದನೆ ಮಾಡಿದ್ದಾರೆ ಎಂದ ಡಿಕೆಶಿ

Karnataka election results 2024

ಬೆಂಗಳೂರು: ನನಗೂ ಮತ್ತು ಹಾಸನ ಪೆನ್ ಡ್ರೈವ್ ಪ್ರಕರಣಕ್ಕೂ (Prajwal Revanna Case) ಯಾವುದೇ ಸಂಬಂಧ ಇಲ್ಲ. ಬಿಜೆಪಿ ಕಾರ್ಯಕರ್ತ ದೇವರಾಜೇಗೌಡ ನನ್ನ ವಿರುದ್ಧ ಮಾಡಿರುವ ಆಪಾದನೆಗಳು ಸುಳ್ಳು ಹಾಗೂ ಆಧಾರರಹಿತ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ, ದೇವರಾಜೇಗೌಡ ಈ ಹಿಂದೆ ಬಿಜೆಪಿಯಿಂದ ಚುನಾವಣೆಗೆ ನಿಂತಿದ್ದವರು. ಆ ಪಕ್ಷದ ಸಕ್ರಿಯ ಕಾರ್ಯಕರ್ತ. ಈಗ ಪ್ರಜ್ವಲ್ ಪ್ರಕರಣದಲ್ಲಿ ಜೆಡಿಎಸ್ ಜತೆಗೆ ಅದರ ಮಿತ್ರ ಪಕ್ಷ ಬಿಜೆಪಿಗೂ ಬಹಳ ಮುಜುಗರ ಮತ್ತು ಮುಖಭಂಗ ಆಗಿದೆ. ಈಗ ಆಗಿರುವ ಡ್ಯಾಮೇಜ್ ನಿವಾರಿಸಿಕೊಳ್ಳಲು ಬಿಜೆಪಿ-ಜೆಡಿಎಸ್ ನಾಯಕರು ದೇವರಾಜೇಗೌಡನ ಮೂಲಕ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿಸಿದ್ದಾರೆ ಎಂದು ಆಪಾದಿಸಿದ್ದಾರೆ.

ಇದೇ ದೇವರಾಜೇಗೌಡ ಈ ಹಿಂದೆ ತಮ್ಮಲ್ಲಿ ಪೆನ್ ಡ್ರೈವ್ ಇರುವ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ್ದರು. ಬಿಜೆಪಿ ನಾಯಕರ ಅನುಮತಿ ಪಡೆದು ಅದನ್ನು ಬಿಡುಗಡೆ ಮಾಡುವುದಾಗಿಯೂ ಹೇಳಿದ್ದರು. ಹೀಗಿರುವಾಗ ನನಗೂ ಪೆನ್ ಡ್ರೈವ್ ಬಿಡುಗಡೆಗೂ ಏನು ಸಂಬಂಧ? ಕೋತಿ ತಿಂದು ಮೇಕೆ ಬಾಯಿಗೆ ಒರೆಸಿತು ಎಂಬಂತೆ ದೇವರಾಜೇಗೌಡ ಮಾಡೋದೆಲ್ಲ ಮಾಡಿ ಈಗ ನನ್ನ ವಿರುದ್ಧ ಅಪಾದನೆ ಮಾಡುತ್ತಿದ್ದಾರೆ. ಇದರ ಹಿಂದೆ ಬಿಜೆಪಿ-ಜೆಡಿಎಸ್ ನಾಯಕರ ಷಡ್ಯಂತ್ರ ಇದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ | CM Siddaramaiah: ಚುನಾವಣೆಯಲ್ಲಿ ʼಕೈʼ ಬಲಪಡಿಸಿ; ನಾಡಿನ ಮಹಿಳೆಯರಿಗೆ ಸಿಎಂ ಬಹಿರಂಗ ಪತ್ರ

ನಾನೀಗ ಬೆಂಗಳೂರಿಂದ ಹೊರಗೆ ಇದ್ದು, ಬಂದ ನಂತರ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ವತಂತ್ರ ಮತ್ತು ನಿಷ್ಪಕ್ಷಪಾತದ ತನಿಖೆ: ಸಿದ್ದರಾಮಯ್ಯ

ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳ ಬಗ್ಗೆ ತನಿಖೆ ನಡೆಸಲು ರಚಿಸಲಾದ ವಿಶೇಷ ತನಿಖಾ ತಂಡ ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತದ ತನಿಖೆ ನಡೆಸಲಿದ್ದು, ಇದರಲ್ಲಿ ರಾಜ್ಯ ಸರ್ಕಾರ ಒಂದು ಸೂಜಿಯ ಮೊನೆಯಷ್ಟೂ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

‘ಎಸ್‌ಐಟಿ ಎನ್ನುವುದು ರಿಮೋಟ್ ಕಂಟ್ರೋಲ್ ಮೇಲೆ ಕೆಲಸ ಮಾಡುತ್ತಿದೆ. ಅದು ಸರ್ಕಾರದ ರಬ್ಬರ್ ಸ್ಟಾಂಪ್’’ ಎಂದು ಬಿಜೆಪಿ ನಾಯಕ ದೇವರಾಜೇಗೌಡರ ಆರೋಪ ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದೆ. ಇದು ಅಪರಾಧಿಗಳನ್ನು ರಕ್ಷಿಸುವ ದುರುದ್ದೇಶದಿಂದ ತನಿಖೆಯ ಹಾದಿ ತಪ್ಪಿಸಲು ಮಾಡಿರುವ ಕುತಂತ್ರವಾಗಿದೆ.
ಎಸ್‌ಐಟಿ ಸಂಪೂರ್ಣವಾಗಿ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ತಪ್ಪಿತಸ್ಥರು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ಈ ಉದ್ದೇಶದಿಂದಲೇ ಆಯ್ದ ದಕ್ಷ ಅಧಿಕಾರಿಗಳನ್ನು ಸೇರಿಸಿಕೊಂಡು ಎಸ್‌ಐಟಿ ರಚಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Prajwal Revanna Case: ‌ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌; ಮಹತ್ವದ ಫರ್ಮಾನು ಹೊರಡಿಸಿದ ಎಚ್‌.ಡಿ. ದೇವೇಗೌಡ!

ಈ ಪ್ರಕರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹಾಳಾಗುತ್ತಿದೆ ಎಂದು ಬಿಜೆಪಿ ನಾಯಕರು ಈಗ ಗೋಳಾಡುವುದರಿಂದ ಏನೂ ಪ್ರಯೋಜನವಾಗದು, ಜೆಡಿ(ಎಸ್) ಜೊತೆ ಮೈತ್ರಿ ಮಾಡಿಕೊಡುವಾಗಲೇ ಇದನ್ನು ಯೋಚನೆ ಮಾಡಬೇಕಾಗಿತ್ತು. ಎಸ್‌ಐಟಿ ತನಿಖೆಯ ಯಶಸ್ಸು ಈಗ ಸಂಪೂರ್ಣವಾಗಿ ಕೇಂದ್ರ ಸರ್ಕಾರ ನೀಡುವ ಸಹಕಾರವನ್ನು ಅವಲಂಬಿಸಿದೆ. ವಿದೇಶದಲ್ಲಿದ್ದಾನೆ ಎಂದು ಹೇಳಲಾದ ಆರೋಪಿ ಪ್ರಜ್ವಲ್ ರೇವಣ್ಣನವರನ್ನು ಭಾರತಕ್ಕೆ ಕರೆತರಲು ಸಹಕಾರ ನೀಡಬೇಕಾಗಿರುವುದು ಕೇಂದ್ರ ಸರ್ಕಾರ. ಜೆಡಿಎಸ್ ಜೊತೆ ಈಗಲೂ ರಾಜಕೀಯ ಮೈತ್ರಿ ಹೊಂದಿರುವ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

Exit mobile version