ಹಾಸನ: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ (Prajwal Revanna Case) ಸಂಬಂಧಿಸಿ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಬಂಧನವಾಗಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಹೊಳೆನರಸೀಪುರದಲ್ಲಿ ರೇವಣ್ಣ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.
ಹೊಳೆನರಸೀಪುರದ ಗಾಂಧಿ ಸರ್ಕಲ್‌ನಲ್ಲಿ ಸೋಮವಾರ ಪಟಾಕಿ ಸಿಡಿಸಿ ರೇವಣ್ಣ ಬೆಂಬಲಿಗರು, ಜೆಡಿಎಸ್ ಕಾರ್ಯಕರ್ತರು ಸಂಭ್ರಮಿಸಿದರು. ಪಟಾಕಿ ಸಿಡಿಸಿದ ಹಿನ್ನೆಲೆ ರಾಜು ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಟಾಕಿ ಸಿಡಿಸಿದ ಹಿನ್ನೆಲೆ ಸ್ಥಳಕ್ಕೆ ಡಿವೈಎಸ್‌ಪಿ ಅಶೋಕ್ ಹಾಗೂ ಹೊಳೆನರಸೀಪುರ ನಗರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಅಜಯ್‌ಕುಮಾರ್ ಆಗಮಿಸಿ, ಸ್ಥಳದಲ್ಲಿ ಜಮಾಯಿಸಿದ್ದವರನ್ನು ವಾಪಸ್ ಕಳುಹಿಸಿದರು. ಚುನಾವಣಾ ನೀತಿ ಸಂಹಿತೆ (ಜೂ.6ರವರೆಗೆ) ಹಿನ್ನೆಲೆಯಲ್ಲಿ ಪಟಾಕಿ ಹೊಡೆಯುವುದು ನಿಷೇಧ. ಹೀಗಾಗಿ ಗಾಂಧಿ ವೃತ್ತದಲ್ಲಿ ಜಮಾಯಿಸಿದವರನ್ನು ಪೊಲೀಸರು ಕಳುಹಿಸಿದರು.
ರೇವಣ್ಣ ಬೆಂಬಲಿಗರನ್ನು ಪೊಲೀಸರು ಚದುರಿಸಿದ ನಂತರ ಕಾರ್ಯಕರ್ತರೊಬ್ಬರು ಮತ್ತೆ ಪಟಾಕಿ ತಂದಿದ್ದಾರೆ. ಇದರಿಂದ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಉಂಟಾಯಿತು. ಕಾರ್ಯಕರ್ತರನ್ನು ಮನವೊಲಿಸಲು ಪೊಲೀಸರು ಪ್ರಯತ್ನ ನಡೆಸಿದರು. ಆದರೂ ನಾನು ಪಟಾಕಿ ಹೊಡೆದೇ ಹೊಡೆಯುತ್ತೇನೆ ಎಂದು ರೇವಣ್ಣ ಅಭಿಮಾನಿ ಪಟ್ಟು ಹಿಡಿದಿದ್ದರಿಂದ, ಪೊಲೀಸರು ಪಟಾಕಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ | Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್ ಗರಂ!
ಎಚ್.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!
ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ.ಆರ್. ನಗರದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪದಡಿ ಜೈಲಿನಲ್ಲಿರುವ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ (HD Revanna) ಅವರ ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಡೆದಿದೆ. ಕೊನೆಗೂ ರೇವಣ್ಣ ಅವರಿಗೆ ಜಾಮೀನು ಮಂಜೂರು (HD Revanna Bail) ಮಾಡಿ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿದೆ.
ಈ ವೇಳೆ ರೇವಣ್ಣ ಪರ ಹಾಗೂ ಸರ್ಕಾರಿ ವಕೀಲರ ನಡುವೆ ವಾದ – ಪ್ರತಿವಾದಗಳು ನಡೆದಿವೆ. ಇಂಥ ಕಾರಣಗಳಿಗೆ ಜಾಮೀನು ಕೊಡಲೇ ಬೇಕು ಎಂದು ರೇವಣ್ಣ ಪರ ವಕೀಲರಾದ ನಾಗೇಶ್ ವಾದ ಮಂಡಿಸಿದರೆ, ಜಾಮೀನನ್ನು ಏಕೆ ಕೊಡಬಾರದು? ಕೊಟ್ಟರೆ ಮುಂದೇನಾಗುತ್ತದೆ ಎಂದು ಎಸ್‌ಐಟಿ ಪರ ವಕೀಲರಾದ (ಎಸ್‌ಪಿಪಿ) ಜಯ್ನಾ ಕೊಠಾರಿ ಹಾಗೂ ಅಶೋಕ್ ನಾಯ್ಕ್ ವಾದಿಸಿದ್ದರು. ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯವು ರೇವಣ್ಣ ಅವರಿಗೆ ಜಾಮೀನು ನೀಡಿ ಆದೇಶಿಸಿದೆ. ಈ ಮೂಲಕ ಅವರ ಆರು ದಿನಗಳ ಜೈಲುವಾಸ ಅಂತ್ಯವಾಗಿದೆ.
ಇಂದು ಬಿಡುಗಡೆ ಭಾಗ್ಯವಿಲ್ಲ
ಐದು ಲಕ್ಷ ರೂಪಾಯಿಯ ಬಾಂಡ್ ಶ್ಯೂರಿಟಿಯನ್ನು ಪಡೆದುಕೊಳ್ಳಲಾಗಿದೆ. ಇಬ್ಬರ ಶ್ಯೂರಿಟಿಯನ್ನೂ ಪಡೆದುಕೊಳ್ಳಲಾಗಿದೆ. ಅಲ್ಲದೆ, ಸಾಕ್ಷಿ ನಾಶಪಡಿಸಬಾರದು. ದೇಶ ಬಿಟ್ಟು ಹೋಗುವಂತಿಲ್ಲ. ಜತೆಗೆ ಮೈಸೂರಿನ ಕೆ. ಆರ್. ನಗರಕ್ಕೂ ಪ್ರವೇಶಿಸಬಾರದು ಎಂದು ಷರತ್ತು ವಿಧಿಸಲಾಗಿದೆ. ಇನ್ನು ಎಸ್ಐಟಿ ತನಿಖೆಗೆ ಸ್ಪಂದಿಸಬೇಕು ಎಂದು ಕೋರ್ಟ್ ತಾಕೀತು ಮಾಡಿದೆ. ಇನ್ನು ರೇವಣ್ಣ ಅವರಿಗೆ ಜಾಮೀನು ಸಿಕ್ಕರೂ ಇಂದು ಬಿಡುಗಡೆ ಭಾಗ್ಯವಿಲ್ಲ.
ಸಂತ್ರಸ್ತೆ ಹೇಳಿಕೆಯ ವಿಡಿಯೊ ಪ್ರಸ್ತಾಪ
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಪ್ರಕರಣ ಸಂಬಂಧ ವಾದ ಮಂಡಿಸಿದ ಎಸ್‌ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ, 2 ವಿಚಾರಗಳಿಗೆ ಸಂಬಂಧಿಸಿ ಆರೋಪಿಗೆ ಜಾಮೀನು ಕೊಡಬೇಡಿ. ಒಂದು ಪ್ರಕರಣದ ಗಂಭೀರತೆಯನ್ನು ನೋಡಬೇಕಿದ್ದು, ಇದರಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿದೆ. ಕಿಡ್ನ್ಯಾಪ್ ಕೇಸಲ್ಲೂ ಈಗಾಗಲೇ 2ನೇ ಆರೋಪಿ ಹೇಳಿಕೆಯನ್ನು ಪಡೆಯಲಾಗಿದೆ. ಈ ನಡುವೆ ಸಂತ್ರಸ್ತೆಯ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸಂತ್ರಸ್ತೆ ಸ್ಪಷ್ಟನೆ ನೀಡಿದ್ದಾರೆ ಎಂಬುದಾಗಿ ವಿಡಿಯೋ ವೈರಲ್ ಬಗ್ಗೆ ಕೋರ್ಟ್‌ಗೆ ಮಾಹಿತಿಯನ್ನು ನೀಡಿದರು.
ಮೊದಲು ತನಿಖಾ ವರದಿ ಕೊಡಿ ಎಂದ ನ್ಯಾಯಾಧೀಶರು
ಈ ವೇಳೆ ಮಧ್ಯಪ್ರವೇಶ ಮಾಡಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್, ತನಿಖಾಧಿಕಾರಿಯ ಇನ್‌ವೆಸ್ಟಿಗೇಷನ್ ರಿಪೋರ್ಟ್ ಅನ್ನು ಮೊದಲು ಸಲ್ಲಿಸಿ. ಕಿಡ್ನ್ಯಾಪ್ ಕೇಸ್ ಸಂಬಂಧ ಏನೇನು ವಿಚಾರಗಳು ನಡೆದಿವೆ ಎಂಬುದನ್ನು ತಿಳಿಯಬೇಕು ಎಂದು ಎಸ್‌ಪಿಪಿಗೆ ಸೂಚಿಸಿದರು. ಆಗ ರೇವಣ್ಣ ಪರ ವಕೀಲ ಸಿ.ವಿ. ನಾಗೇಶ್, ತನಿಖಾ ವರದಿಯನ್ನು ನಮಗೂ ಕೊಟ್ಟಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು. ಈ ವೇಳೆ ಮುಚ್ಚಿದ ಲಕೋಟೆಯಲ್ಲಿ ಇನ್‌ವೆಸ್ಟಿಗೇಷನ್ ರಿಪೋರ್ಟ್ ಅನ್ನು ಸಲ್ಲಿಸಲಾಯಿತು. ಇದಕ್ಕೆ ಎಚ್.ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್‌ರಿಂದ ಆಕ್ಷೇಪ ವ್ಯಕ್ತವಾಯಿತು. ಬಳಿಕ ತಮಗೂ ಒಂದು ಕಾಪಿ ನೀಡಲು ಕೇಳಿದ್ದು, ಅವರಿಗೂ ಒಂದು ಪ್ರತಿಯನ್ನು ನೀಡಲಾಯಿತು.
ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿದ ಎಸ್‌ಪಿಪಿ
ಈ ವೇಳೆ ವಾದ ಮುಂದುವರಿಸಿದ ಜಯ್ನಾ ಕೊಠಾರಿ ಅವರು ಸುಪ್ರೀಂಕೋರ್ಟ್ ಕೇಸ್ ಸ್ಟಡಿಗಳನ್ನು ಉಲ್ಲೇಖಿಸಿದರು. ಕೆಲವು ತೀರ್ಪುಗಳನ್ನು ಓದಿ ಹೇಳಿದರು. ಕಿಡ್ನ್ಯಾಪ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ತೀರ್ಪುಗಳನ್ನು ಕೋರ್ಟ್ ಗಮನಕ್ಕೆ ತಂದರು. ಕಿಡ್ನ್ಯಾಪ್ ಪ್ರಕರಣದಲ್ಲಿ ಸೆಕ್ಷನ್ 364ಎ ಅಂದ್ರೆ ಜೀವಾವಧಿ ಶಿಕ್ಷೆ ಇದೆ. ಐಪಿಸಿ ಸೆಕ್ಷನ್ 364ಎ ಅಡಿಯಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಹೀಗಾಗಿ ಎಚ್.ಡಿ. ರೇವಣ್ಣ ಅವರಿಗೆ ಜಾಮೀನು ಕೊಡಬಾರದು ಎಂದು ವಾದ ಮಂಡಿಸಿದರು. ಶಿಕ್ಷೆಯ ಪ್ರಮಾಣದ ಗಂಭೀರತೆಯನ್ನು ಪರಿಗಣಿಸಿ ಬೇಲ್ ಅನ್ನು ಕೊಡಲೇಬಾರದು ಎಂದು ಮನವಿ ಮಾಡಿದರು.
ದೆಹಲಿ ಕೋರ್ಟ್‌ನ ಗುರುಚರಣ್ ಸಿಂಗ್ ಪ್ರಕರಣದ ಬಗ್ಗೆ ಉಲ್ಲೇಖ
ಗುರುಚರಣ್ ಸಿಂಗ್ ಪ್ರಕರಣದಲ್ಲಿ ಕೋರ್ಟ್ ಬೇಲ್ ತಿರಸ್ಕರಿಸಿತ್ತು. ಈಗ ರೇವಣ್ಣ ಪರ ದಾಖಲಾಗಿರುವ ಕೆ.ಆರ್.ನಗರ ಅಪಹರಣ ಪ್ರಕರಣವು ಒಂದು ಸೀರಿಯಸ್ ಕ್ರಿಮಿನಲ್ ಕೇಸ್ ಆಗಿದೆ ಎಂದು ವಾದ ಮಂಡಿಸಿ ಕೆಲವು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದರು.
ಆರೋಪಿ ಎಚ್.ಡಿ. ರೇವಣ್ಣ ಅವರ ಮಗ ಪ್ರಜ್ವಲ್ ರೇವಣ್ಣ ಕೂಡ ಬೇರೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಮಾಹಿತಿಯನ್ನು ಗೌಪ್ಯವಾಗಿಡಬೇಕು. ಕೆಲವು ಪ್ರಕರಣದಲ್ಲಿ ಮಾತ್ರ ಅಲ್ಲ, ಬೇರೆ ಪ್ರಕರಣಗಳಲ್ಲಿಯೂ ಈ ರೀತಿ ಸಂದರ್ಭದಲ್ಲಿ ಜಾಮೀನು ಕೊಟ್ಟರೆ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದೆ. ಗಂಭೀರತೆ ಹೆಚ್ಚಿರುವ ಪ್ರಕರಣಗಳಲ್ಲಿ ಜಾಮೀನು ಕೊಡಬಾರದು. ಜಾಮೀನು ಕೊಡಬಾರದೆಂದು ಹಲವು ಕೋರ್ಟ್‌ಗಳ ತೀರ್ಪಿದೆ. ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪುಗಳನ್ನು ಕೊಠಾರಿ ಉಲ್ಲೇಖಿಸಿದರು.
ಜಾಮೀನು ನೀಡಿದರೆ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ ಇರುತ್ತದೆ. ಸಂತ್ರಸ್ತೆ ಮತ್ತು ಆಕೆಯ ಪುತ್ರನಿಗೆ ಜೀವ ಬೆದರಿಕೆಯೂ ಇದೆ. ಕಿಡ್ನ್ಯಾಪ್ ಪ್ರಕರಣದಲ್ಲಿ ಸಂತ್ರಸ್ತೆಯ ಮಾಹಿತಿ ಗೌಪ್ಯವಾಗಿ ಇಡಬೇಕು. ಈ ಸಂದರ್ಭದಲ್ಲಿ ಸಂತ್ರಸ್ತೆ ಮಾಹಿತಿ ಗೌಪ್ಯವಾಗಿ ಇಡಲಿಲ್ಲ ಅಂದರೆ ಬೇರೆ ಯಾವ ಸಂತ್ರಸ್ತೆಯರು ಮುಂದೆ ಬಂದು ದೂರು ನೀಡುತ್ತಾರೆ? ರೇವಣ್ಣಗೆ ಜಾಮೀನು ನೀಡಲೇಬಾರದು. ಈ ಪರಿಸ್ಥಿತಿಯಲ್ಲಿ ರೇವಣ್ಣಗೆ ಜಾಮೀನು ನೀಡಿದರೆ ನ್ಯಾಯಾಂಗ ಹಾದಿಗೇ ಅಡಚಣೆಯಾಗುತ್ತದೆ ಎಂದು ಜಯ್ನಾ ಕೊಠಾರಿ ವಾದ ಮಂಡಿಸಿದರು.
ಇದನ್ನೂ ಓದಿ | Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಕೋರ್ಟ್ ತೀರ್ಪಿನ ಪ್ರತಿ ಬೇಕೆಂದ SPP; ನೀವೇ ಓದ್ಕೋಬೇಕು ಅಂದ್ರು ನಾಗೇಶ್!
ಈ ಕಾರಣಕ್ಕಾಗಿ ಜಾಮೀನು ನೀಡಬಾರದು
ರೇವಣ್ಣ ಪ್ರಭಾವಿಯಾಗಿದ್ದು, ಅವರ ಪುತ್ರ ಸಂಸದ ಪ್ರಜ್ವಲ್ ತಲೆಮರೆಸಿಕೊಂಡಿದ್ದಾರೆ. ಇದು ಕೇವಲ ಅಪಹರಣ ಪ್ರಕರಣ ಅಲ್ಲ, ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಕಿಡ್ನ್ಯಾಪ್ ಆಗಿದೆ. ಪ್ರಕರಣದಲ್ಲಿ ಯಾವುದೇ ಮಹಿಳೆಯರು ದೂರು ನೀಡದಂತೆ ತಡೆಯುವ ಯತ್ನ ಇದಾಗಿದೆ. ಎಚ್.ಡಿ. ರೇವಣ್ಣಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಕಿಡ್ನ್ಯಾಪ್ ಪ್ರಕರಣದಲ್ಲಿ ಕೆಲವರ ಹೇಳಿಕೆ ಸಿಆರ್‌ಪಿಸಿ 164 ಅಡಿಯಲ್ಲಿ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರ ಹೇಳಿಕೆ ದಾಖಲಿಸಬೇಕು ಎಂದು ಜಯ್ನಾ ಕೊಠಾರಿ ವಾದ ಮಂಡನೆ ಮಾಡಿ ಮುಗಿಸಿದರು.
ರೇವಣ್ಣ ವಿರುದ್ಧ ಬಲವಾದ ಸಾಕ್ಷಿಗಳೇ ಇಲ್ಲ
ಕಿಡ್ನ್ಯಾಪ್ ಪ್ರಕರಣದಲ್ಲಿ ಎಚ್.ಡಿ.ರೇವಣ್ಣ ವಿರುದ್ಧ ಬಲವಾದ ಸಾಕ್ಷಿಗಳೇ ಇಲ್ಲ. ಆದರೂ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಶಿಕ್ಷೆಯಾಗುವ ಸೆಕ್ಷನ್‌ಗಳನ್ನು ಹಾಕಲಾಗಿದೆ. ಏನೇ ಆದರೂ ಈ ರೀತಿ ಪ್ರಕರಣದಲ್ಲಿ ಬೇಲ್ ಯಾಕೆ ನೀಡಬಾರದು? ಎಂದು ಕೆಲವು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಕೇಸ್ ಸ್ಟಡಿಗಳನ್ನು ಉಲ್ಲೇಖಿಸಿದರು. ಇನ್ನು ರೇವಣ್ಣ ವಿರುದ್ಧ ಪ್ರೈಮಾಫೇಸಿ ಸಾಬೀತಾಗುವ ಯಾವುದೇ ಆರೋಪವೂ ಇಲ್ಲ. ತಮಗೆ ಗೊತ್ತಿರುವವರನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡರೆ ತಪ್ಪೇನು? ಸಂತ್ರಸ್ತೆಯನ್ನು ಭವಾನಿ ರೇವಣ್ಣ ಮನೆಗೆ ಕರೆಸಿಕೊಂಡ ಕ್ರಮಕ್ಕೆ ಸಮರ್ಥನೆ ಮಾಡಿದರು.
ಸಂತ್ರಸ್ತ ಮಹಿಳೆಯನ್ನು ರಕ್ಷಿಸಿ 6 ದಿನವಾದರೂ ಸೂಕ್ತ ರೀತಿ ಹೇಳಿಕೆ ಪಡೆದಿಲ್ಲ. ಟ್ಯೂಷನ್‌ಗೆ ಹೋಗಿದ್ದ ಬಾಲಕನ ಕಿಡ್ನ್ಯಾಪ್ ಪ್ರಕರಣವನ್ನು ಇದೇ ವೇಳೆ ಉಲ್ಲೇಖಿಸಿದರು. ನಿಮ್ಮ ತಂದೆಗೆ ಅಪಘಾತವಾಗಿದೆ, ಆಸ್ಪತ್ರೆಯಲ್ಲಿದ್ದಾರೆಂದು ಹೇಳಿ ಅಪಹರಿಸಿದ್ದಾರೆ. ಬಾಲಕನನ್ನು ಅಪಹರಿಸಿದ ಬಳಿಕ ತಂದೆಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪೊಲೀಸರಿಗೆ ಎಲ್ಲಿಯೂ ಹೇಳದಂತೆ ಬೆದರಿಕೆಯನ್ನು ಹಾಕಿದ್ದರು. ಆದರೆ, ಎಚ್.ಡಿ.ರೇವಣ್ಣ ಪ್ರಕರಣದಲ್ಲಿ ಯಾವುದೇ ರೀತಿ ಬೆದರಿಕೆ, ಬೇಡಿಕೆ ಇಲ್ಲ. ಹಾಗಾಗಿ ಎಚ್.ಡಿ.ರೇವಣ್ಣ ಅವರಿಗೆ ಇದು ಜಾಮೀನು ನೀಡಬಹುದಾದ ಪ್ರಕರಣವಾಗಿದೆ ಎಂದು ವಕೀಲ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಿದರು.
ತೀರ್ಪಿನ ಪ್ರತಿಗಾಗಿ ವಾದ – ಪ್ರತಿವಾದ
ಎಸ್‌ಐಟಿ ಉಲ್ಲೇಖಿಸಿದ ತೀರ್ಪುಗಳಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕಲಾಗಿತ್ತು ಆದರೆ ರೇವಣ್ಣ ಪ್ರಕರಣದಲ್ಲಿ ಬೆದರಿಕೆ ಎಲ್ಲಿ ಹಾಕಿದ್ದಾರೆ? ಯಾವ ಬೇಡಿಕೆ ಇದೆ..? ಎಸ್‌ಐಟಿ ಕೇಸ್ ಸ್ಟಡಿಗೆ ಕೌಂಟರ್ ಕೊಟ್ಟು ರೇವಣ್ಣ ಪರ ವಕೀಲ ನಾಗೇಶ್ ವಾದ ಮಂಡಿಸುತ್ತಾ, ಕೆ.ಆರ್.ನಗರ ಕಿಡ್ನ್ಯಾಪ್ ಕೇಸಲ್ಲಿ 364ಎ ಹಾಕಲು ಬೇಕಾದ ಬೇಸಿಕ್ ಅಂಶಗಳಿಲ್ಲ ಎಂದು ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪುಗಳನ್ನು ಉಲ್ಲೇಖಿಸಿದರು. ಆದರೆ ಆ ಎಲ್ಲಾ ಪ್ರಕರಣಗಳಲ್ಲಿ ಬೆದರಿಕೆವೊಡ್ಡಿ ಹಣಕ್ಕಾಗಿ ಬೇಡಿಕೆ ಇರಿಸಲಾಗಿತ್ತು. ಇಲ್ಲಿ ದಾಖಲಾದ ಕಿಡ್ನ್ಯಾಪ್ ಪ್ರಕರಣದಲ್ಲಿ ರೇವಣ್ಣ ವಿರುದ್ಧ ಆ ಆರೋಪಗಳಿಲ್ಲ ಎಂದು ವಾದಿಸಿದರು.
ಆಗ ಮಧ್ಯ ಪ್ರವೇಶ ಮಾಡಿದ ಜಯ್ನಾ ಕೊಠಾರಿ, ನೀವು ಉಲ್ಲೇಖಿಸುತ್ತಿರುವ ಪ್ರಕರಣಗಳ ತೀರ್ಪಿನ ಪ್ರತಿ ಕೊಡಿ ಎಂದು ಕೋರಿದರು. ಈ ನಡುವೆ ಎಸ್‌ಪಿಪಿ ಜಯ್ನಾ ಕೊಠಾರಿ ಹಾಗೂ ರೇವಣ್ಣ ವಕೀಲರ ಮಧ್ಯೆ ವಾದ ಪ್ರತಿವಾದ ನಡೆಯಿತು. ನೀವು ಕೇಳಿದ ಕೂಡಲೇ ಕೊಡಬೇಕು ಅಂತೇನಿಲ್ಲ ಎಂದು ಸಿ.ವಿ.ನಾಗೇಶ್ ಹೇಳಿದರು. ವರದಿಯಾಗಿರುವ ಪ್ರಕರಣಗಳನ್ನು ನೀವು ಓದಿಕೊಂಡಿರಬೇಕು ಎಂದು ನಾಗೇಶ್ ಕುಟುಕಿದರು. ಆದರೆ, ಯಾವ ಕೇಸ್ ಸ್ಟಡಿ ಉಲ್ಲೇಖಿಸುತ್ತೀರೋ ಅದರ ಪ್ರತಿಯನ್ನು ಕೊಡಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ | Prajwal Revanna Case: ಎಚ್.ಡಿ. ರೇವಣ್ಣ ಜಾಮೀನು ಅರ್ಜಿಯ ರೋಚಕ ವಾದ – ಪ್ರತಿವಾದ; ಇಲ್ಲಿದೆ ಇಂಚಿಂಚು ಡಿಟೇಲ್ಸ್
ರೇವಣ್ಣ ವಿರುದ್ಧ ಆರೋಪಗಳೆಲ್ಲಾ ಊಹಾಪೋಹ, ರಾಜಕೀಯ ಪ್ರೇರಿತ. ಈ ರೀತಿಯಲ್ಲಿ ಆಧಾರರಹಿತ ಆರೋಪಗಳನ್ನು ಪರಿಗಣಿಸಬಾರದು. ರೇವಣ್ಣ 6 ಸಲ ಎಂಎಲ್‌ಎ ಆಗಿದ್ದವರು, ಕಾನೂನಿಗೆ ಸದಾ ತಲೆಬಾಗುತ್ತಾರೆ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಿ ಎಂದು ವಾದವನ್ನು ನಾಗೇಶ್ ಮುಕ್ತಾಯಗೊಳಿಸಿದರು. ವಾದ- ಪ್ರತಿವಾದ ಆಲಿಸಿದ ಮೇಲೆ ರೇವಣ್ಣ ಅವರಿಗೆ ನ್ಯಾಯಾಧೀಶರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.