ತುಮಕೂರು: ದೇಶಾದ್ಯಂತ ಸಂಚಲನ ಮೂಡಿಸಿರುವ ಹಾಸನ ಪೆನ್‌ಡ್ರೈವ್ ಪ್ರಕರಣದ (Prajwal Revanna Case) ಹಿಂದಿನ ಮಾಸ್ಟರ್ ಮೈಂಡ್ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಎಂದು ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ. ಜತೆಗೆ ಪ್ರಕರಣದಲ್ಲಿ ಶಾಮೀಲಾಗಲು 100 ಕೋಟಿ ರೂ. ಆಫರ್ ನೀಡಿದ್ದರು ಎಂದು ಹೇಳಿದ್ದಾರೆ. ಇನ್ನು ನಾನು ಹೊರಗೆ ಬಂದರೆ ಸರ್ಕರ ಪತನವಾಗುತ್ತದೆ ಎಂಬ ದೇವರಾಜೇಗೌಡ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು, ಹಾಗಾದರೆ ಅವರು ಜೇಲಲ್ಲೇ ಇರಬೇಕಾಗುತ್ತೆ ಎಂದು ಹೇಳಿರುವುದು ಕಂಡುಬಂದಿದೆ.
ಡಿಕೆಶಿ ವಿರುದ್ಧ ವಕೀಲ ದೇವರಾಜೇಗೌಡ ಆರೋಪಗಳ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿರುವ ಅವರು, ಆರೋಪಗಳ ಸಾಧಕ ಬಾಧಕಗಳನ್ನು ನೋಡಿ ಎಸ್‌ಐಟಿ ತನಿಖೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಇನ್ನು ನಾನು ಹೊರಗೆ ಬಂದ್ರೆ ಸರ್ಕಾರ ಪತನ ಆಗುತ್ತೆ ಎಂಬ ದೇವರಾಜೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ಹಾಗಾದ್ರೆ ಅವರು ಅಲ್ಲೇ ಇರಬೇಕಾಗುತ್ತೆ ಎಂದು ಮುಗುಳ್ನಗುವ ಮೂಲಕ ಪರೋಕ್ಷವಾಗಿ ಅವರು ಜೈಲಲ್ಲೇ ಇರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕ್ರೈಂ ರೇಟ್ ಹೆಚ್ಚಳ; ಉಡಾಫೆ ಉತ್ತರ ನೀಡಿದ ಗೃಹ ಸಚಿವ
ರಾಜ್ಯದಲ್ಲಿ ಕ್ರೈಂ ರೇಟ್ ಹೆಚ್ಚಳ ವಿಚಾರದ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ ಉಡಾಫೆ ಉತ್ತರ ನೀಡಿರುವುದು ಕಂಡುಬಂದಿದೆ. ಈ ಬಗ್ಗೆ ಚರ್ಚೆ ಮಾಡಲಾಗುತ್ತದೆ, ಒಂದೊಂದು ಘಟನೆಗೆ ಒಂದೊಂದು ಕಾರಣ ಇರುತ್ತೆ. ಜನರಲೈಸ್ ಮಾಡೊದಕ್ಕೆ ಆಗುತ್ತಾ? ಬಿಜೆಪಿ ಕಾಲದಲ್ಲಿ ಎಷ್ಟು ಮರ್ಡರ್ ಆಗಿತ್ತು ಅಂತ ಹೇಳಿದ್ಮೇಲೆ ಗೊತ್ತಾಗುತ್ತೆ. 2022-23 ರಲ್ಲಿ ಕ್ರೈಂ ರೇಟ್ ಎಷ್ಟಿತ್ತು? ನಾಲ್ಕು ತಿಂಗಳ ಬಗ್ಗೆ ಮಾತ್ರ ಹೇಳೊದು ಅಲ್ಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಯೇ ಇದೆ ಎಂದು ತಿಳಿಸಿದ್ದಾರೆ.
ಇವರನ್ನು ಹೇಳ್ಕೊಂಡು, ಕೇಳ್ಕೊಂಡು ಸರ್ಕಾರ ಕಾನೂನು ಸುವ್ಯವಸ್ಥೆ ಮಾಡಲ್ಲ. ಏನ್ ಕ್ರಮ ಬೇಕಾದರೂ ತೆಗೆದುಕೊಳ್ಳುತ್ತೇವೆ. ಬಿಜೆಪಿಯವರು ಎಷ್ಟೇ ಕಾನೂನು ವ್ಯವಸ್ಥೆ ಹಾಳು ಮಾಡಲು ಪ್ರಯತ್ನ ಮಾಡಿದ್ರು, ಕಂಟ್ರೋಲ್ ಮಾಡೋ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ಹೇಳಿದ್ದಾರೆ.
ಹೇಮಾವತಿ ಲಿಂಕ್ ಕೆನಾಲ್ ವಿಚಾರ ಪ್ರತಿಕ್ರಿಯಿಸಿ, ಜಿಲ್ಲೆಗೆ ಕುಡಿಯುವ ನೀರಿಗಾಗಿ ಹೇಮಾವತಿ ನಾಲೆಯಿಂದ 24 ಟಿಎಂಸಿ ಹಂಚಿಕೆ ಆಗಿದೆ. ಆದರೆ ಎಂದೂ 18-19 ಟಿಎಂಸಿ ಮೇಲೆ ಹರಿದಿಲ್ಲ. ಹಾಸನ ಜಿಲ್ಲೆಯಿಂದ ನಮಗೆ 18-19 ಟಿಎಂಸಿ ಬಂದಿದೆ. ಇದು ಸೆಮಿಡ್ರೈವ್ ಕುಡಿಯುವ ನೀರಿಗೆ ಹಂಚಿಕೆ ಆದ ಯೋಜನೆ. ಕುಣಿಗಲ್ ಕೆರೆ, ಹೆಬ್ಬೂರು ಭಾಗಕ್ಕೆ ಇದೆ. ಈ ಮಧ್ಯೆ ಸರ್ಕಾರದ ಮುಂದೆ ಗುಬ್ಬಿ ಬಳಿ 70 ಕಿಲೋ ಮೀಟರ್‌ನಿಂದ ಕುಣಿಗಲ್‌ಗೆ ನೇರವಾಗಿ ತೆಗೆದುಕೊಂಡು ಹೋಗುವ ಬಗ್ಗೆ ಪ್ರಸ್ತಾವನೆ ಬಂದಿದೆ. ಯೋಜನೆಗೆ ಪರ-ವಿರೋಧ ವ್ಯಕ್ತವಾಗಿದೆ. ಈ ಬಾರಿ ಸರ್ಕಾರ ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡಿ, 1000 ಕೋಟಿ ಕೊಟ್ಟಿದೆ. ಇದು ಸರ್ಕಾರದ ತೀರ್ಮಾನ, ಎಕ್ಸ್ ಪ್ರೆಸ್ ಕೆನಾಲ್ ತೀರ್ಮಾನ ಮಾಡಿದೆ, ಇಲಾಖೆ ಟೆಂಡರ್ ಕರೆದು ಕೆಲಸ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ | DK Shivakumar: ದೇವರಾಜೇಗೌಡ ಮೆಂಟಲ್ ಕೇಸ್; 100 ಕೋಟಿ ರೂ. ಆಫರ್ ಮಾಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಲಿ ಎಂದ ಡಿಕೆಶಿ
ಗುಬ್ಬಿ, ತುರುವೇಕೆರೆ ಭಾಗದ ರೈತರಿಗೆ ತೊಂದರೆ ಆಗಲಿದೆ ಅಂತ ಹೇಳಿದ್ದಾರೆ. ನಮಗೆ ನೀರು ಸರಿಯಾಗಿ ಸಿಗಲ್ಲ ಅಂತ ಹೇಳಿದ್ದಾರೆ. ನನಗೂ ಮನವಿ ಕೊಟ್ಟಿದ್ದಾರೆ. ಕ್ಯಾಬಿನೆಟ್‌ನಲ್ಲಿ ನಾನು, ರಾಜಣ್ಣ ತೊಂದರೆ ಆಗುತ್ತೆ ಅಂತ ವ್ಯಕ್ತಪಡಿಸಿದ್ದೇವೆ. ಕ್ಯಾಬಿನೆಟ್ ನಮ್ಮ ಇಬ್ಬರದ್ದೆ ಅಲ್ಲ, ರೈತರು ಕೆಲಸ ನಿಲ್ಲಿಸಿ ತಡೆದಿದ್ದಾರೆ. ಅದನ್ನು ಸರ್ಕಾರಕ್ಕೆ ಕಳಿಸುವ ಕೆಲಸ ಮಾಡುತ್ತಾರೆ. ನಾವು ಕೂಡ ಸಿಎಂ ಜತೆ ಮಾತನಾಡಿ ಒಂದು ತೀರ್ಮಾನಕ್ಕೆ ಬರುತ್ತೇವೆ. ಎಲ್ಲದ್ದಕ್ಕೂ ಪರ ವಿರೋಧ ಇರುತ್ತೆ, ವಿಪಕ್ಷಗಳು ರಾಜಕೀಯ ಮಾಡುತ್ತಾರೆ. ಸಿಎಂ, ಡಿಸಿಎಂ ಜತೆ ಮಾತನಾಡಿ ಸೂಕ್ತ ತೀರ್ಮಾನ ಮಾಡುತ್ತೇವೆ ಎಂದರು.