ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಪ್ರಕರಣಕ್ಕೆ (Prajwal Revanna Case) ಸಂಬಂಧಿಸಿ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಆರೋಪದಲ್ಲಿ ಈಗಾಗಲೇ ಶಾಸಕ, ಮಾಜಿ ಸಚಿವ ಎಚ್.ಡಿ.ರೇವಣ್ಣ (HD Revanna) ಬಂಧನವಾಗಿದೆ. ಪ್ರಕರಣದಲ್ಲಿ ಇನ್ನೂ ಹಲವು ಸಂತ್ರಸ್ತೆಯರು ಇರುವುದರಿಂದ ಅವರಿಗೆ ಕಾನೂನು ನೆರವು ಮತ್ತು ರಕ್ಷಣೆ ನೀಡಲು ಎಸ್‌ಐಟಿ (ವಿಶೇಷ ತನಿಖಾ ತಂಡ) ಹೆಲ್ಪ್‌ಲೈನ್ (Help Line) ತೆರೆದಿದೆ. ಇದೀಗ ಈ ಹೆಲ್ಪ್‌ಲೈನ್ ನಂಬರ್‌ಗೆ ಹಲವು ಕರೆಗಳು ಬರುತ್ತಿವೆ ಎಂದು ಮೂಲಗಳು ತಿಳಿಸಿವೆ.
ಕೇಸ್ ಸಂಬಂಧ ಈಗಾಗಲೇ ಎಸ್‌ಐಟಿ ಸಂತ್ರಸ್ತೆಯನ್ನು ಸಂಪರ್ಕಿಸಲು ಮುಂದಾಗಿದೆ. ಒಂಭತ್ತು ಮಂದಿ ಸಂತ್ರಸ್ತೆಯರನ್ನ ಸಂಪರ್ಕಿಸಿ ಮಾಹಿತಿ ಕಲೆ ಹಾಕಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಹೆಲ್ಪ್‌ಲೈನ್ ಅನ್ನೂ ತೆರೆಯಲಾಗಿದೆ. ಇದೀಗ ಹೆಲ್ಪ್‌ಲೈನ್ ನಂಬರ್‌ಗೆ ಕೆಲವು ಸಂತ್ರಸ್ತೆಯರು ನೇರ ಕರೆ ಮಾಡಿದರೆ, ಇನ್ನು ಕೆಲವರು ಸಂತ್ರಸ್ತೆಯರ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬರುತ್ತಿರುವ ಎಲ್ಲ ಕರೆಗಳನ್ನು ಸ್ವೀಕರಿಸಿ ಎಸ್‌ಐಟಿ ಅಧಿಕಾರಿಗಳ ತಂಡ ವಿವರಗಳನ್ನು ಕಲೆ ಹಾಕುತ್ತಿದೆ. ಸಂತ್ರಸ್ತೆಯರ ವಿಳಾಸ ಸಂಗ್ರಹಿಸಲಾಗುತ್ತದೆ. ಬಳಿಕ ಎಸ್‌ಐಟಿ ತಂಡ ಅವರನ್ನು ನೇರವಾಗಿ ಭೇಟಿಯಾಗಲಿದೆ. ಬರುತ್ತಿರುವ ಕಾಲ್‌ಗಳ ಪೈಕಿ ಯಾವುದು ಹುಸಿ ಕರೆ, ಯಾವುದು ನಿಜವಾದ ಕರೆ ಎನ್ನುವುದನ್ನು ಪರಿಶೀಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅದಿಕಾರಿಗಳು ವಿವರಿಸಿದ್ದಾರೆ.
ಹೆಲ್ಪ್‌ಲೈನ್ ನಂಬರ್ ಇದು
ತನಿಖೆ ವೇಳೆ ಘಟನೆಗೆ ಸಂಬಂಧಪಟ್ಟಂತೆ ಇನ್ನೂ ಸಂತ್ರಸ್ತರಿರುವುದು ಗೊತ್ತಾಗಿದ್ದು, ಯಾರೇ ಸಂತ್ರಸ್ತರು ಅಥವಾ ಬಾತ್ಮೀದಾರರಿಗೆ (ಮಾಹಿತಿದಾರರಿಗೆ) ಕಾನೂನಿನ ನೆರವು ಮತ್ತು ರಕ್ಷಣೆ ಹಾಗೂ ಇನ್ನಿತರ ಯಾವುದೇ ಸಹಾಯ ಬೇಕಾದಲ್ಲಿ ಹೆಲ್ಪ್‌ಲೈನ್ ನಂ. 6360938947ಕ್ಕೆ ಕರೆ ಮಾಡಬಹುದು. ಸಂತ್ರಸ್ತರು ಅಥವಾ ಬಾತ್ಮೀದಾರ ವಿವರಗಳನ್ನು ಗುಪ್ತವಾಗಿಡಲಾಗುವುದು ಎಂದು ಎಸ್‌ಐಟಿ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿತ್ತು.
ಅಶ್ಲೀಲ ವಿಡಿಯೊ ಶೇರ್ ಮಾಡಿದ್ರೆ ಕೇಸ್ ಗ್ಯಾರಂಟಿ
ಈ ಮಧ್ಯೆ ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಡಿಯೊಗಳನ್ನು ಯಾರೇ ಆಗಲಿ ವಾಟ್ಸ್‌ಆ್ಯಪ್, ಫೇಸ್‌ಬುಕ್ ಸೇರಿ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ಎಚ್ಚರಿಕೆ ನೀಡಿದೆ.
ಅಶ್ಲೀಲ ವಿಡಿಯೊಗಳನ್ನು ಹಂಚಿಕೆ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 67(ಎ) ಐಟಿ ಆಕ್ಟ್ ಹಾಗೂ ಕಲಂ 228ಎ(1), 292 ಐಪಿಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಖಾಸಗಿ ಮೆಸೇಜಿಂಗ್ ಆ್ಯಪ್‌ಗಳ ಮುಖಾಂತರ ಹಂಚುವುದನ್ನೂ ಪತ್ತೆ ಹಚ್ಚುವುದು ಸಾಧ್ಯವಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ವಿಡಿಯೋ ಹಂಚಿಕೆ ಸಂತ್ರಸ್ತ ಮಹಿಳೆಯರ ಘನತೆ ಹಾಗೂ ಗೌಪ್ಯತೆಗೆ ಕುಂದುಂಟು ಮಾಡುವುದಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದೆ.
ಯಾವುದೇ ಲೈಂಗಿಕ ಹಿಂಸೆ ಅಥವಾ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧವೆಸಗಿದ ವ್ಯಕ್ತಿ ನಾಚಿಕೆ, ಹಿಂಜರಿಕೆ, ಅವಮಾನ ಪಡಬೇಕೇ ಹೊರತು, ಶೋಷಣೆಗೆ ಒಳಗಾದ ವ್ಯಕ್ತಿ ಅಲ್ಲ ಎಂಬುದನ್ನು ಅರಿಯಬೇಕು. ಸೂಕ್ತ ಸಂವೇದನೆಯಿಂದ ಪ್ರವರ್ತಿಸುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ಈ ವಿಚಾರದಲ್ಲಿ ಎಸ್‌ಐಟಿಯು ಅತ್ಯಂತ ಹೆಚ್ಚಿನ ಸಂವೇದನೆಯಿಂದ ನಡೆದುಕೊಳ್ಳಲಿದೆ. ಈಗಾಗಲೇ ಇದಕ್ಕೆ ಅಗತ್ಯವಿರುವ ವೃತ್ತಿಪರ ಕೌನ್ಸೆಲರ್, ವೈದ್ಯರು ಇಂತಹ ಕಾರ್ಯದಲ್ಲಿ ಅನುಭವವಿರುವ ಸಂಸ್ಥೆಗಳ ನೆರವನ್ನು ಎಸ್‌ಐಟಿ ಪಡೆದುಕೊಂಡಿದೆ. ಸಾರ್ವಜನಿಕರೂ ಈ ವಿಚಾರದಲ್ಲಿ ಸ್ಪಂದಿಸುವುದು ಅಗತ್ಯ ಎಂದು ಸಿಐಡಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ | Prajwal Revanna Case: ಜಡ್ಜ್ ಮುಂದೆಯೂ ನಿಂಬೆ ಹಣ್ಣು ಹಿಡಿದುಕೊಂಡಿದ್ದ ಎಚ್.ಡಿ.ರೇವಣ್ಣ!